ವೆದ್ಯಕೀಯ ಸಂಘದ ಮುಷ್ಕರ ಬಡವರ ವಿರುದ್ಧ ಹೋರಾಟವೇ?

Update: 2019-06-17 06:29 GMT

ಅತ್ಯಂತ ನಿರ್ಲಕ್ಷಿತ, ಅನಾಥ, ಹಸಿವಿನ, ದುರ್ಬಲ ಹಾಗೂ ಖಿನ್ನನಾದ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಂತೆ ಅವರನ್ನು ಗುಣಪಡಿಸಲು ಆರೋಗ್ಯ ಹಾಗೂ ಪಾಲನೆಗಾಗಿ ಸರಕಾರಕ್ಕೆ ತಗಲುವ ವೆಚ್ಚವು ಅಧಿಕವಾಗಿರುತ್ತದೆ. ಸಮಾಜವು ತನ್ನ ಸದಸ್ಯರನ್ನು ಹುಟ್ಟಿದಾಗಿನಿಂದ ಹಿಡಿದು ಕೊನೆಯುಸಿರು ಎಳೆಯುವ ತನಕ ಪಾಲನೆ ಮಾಡಿದಲ್ಲಿ, ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಆದರೆ ಐಎಂಎ ಮಾತ್ರ ಅನಾರೋಗ್ಯಕರ, ರೋಗಿಷ್ಠ ಹಾಗೂ ಗಾಯಾಳುಗಳಿರುವ ಸಮಾಜದ ಬಗ್ಗೆ ಹೆಚ್ಚು ಆಸಕ್ತವಾಗಿದೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) 3.25 ಲಕ್ಷಕ್ಕೂ ಅಧಿಕ ವೈದ್ಯರನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ. ಬ್ರಿಟಿಷರು ದೇಶವನ್ನು ತೊರೆದು ಹೋದ ಬಳಿಕ ಭಾರತ ಸರಕಾರದ ಆಡಳಿತ ಸೇರಿದಂತೆ ಪ್ರತಿಯೊಂದು ವಲಯಕ್ಕೂ ಮೇಲ್ಜಾತಿಯವರು ವಾರಸು ದಾರರಾಗಿದ್ದಾರೆ. ಸ್ವಾತಂತ್ರಾನಂತರ ಸಮಾಜವನ್ನು ನೈಜವಾಗಿ ಪ್ರಜಾತಾಂತ್ರಿಕೀಕರಣಗೊಳಿಸಲು ಯಾವುದೇ ರೀತಿಯ ಕ್ರಾಂತಿ ನಡೆಯಲಿಲ್ಲ. ಆಡಳಿತಾರೂಢ ಮೇಲ್ವರ್ಗಗಳು, ಅವರು ವೈದ್ಯರಾಗಿರಲಿ, ವಕೀಲರಾಗಿರಲಿ, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗಿರಲಿ ಅವರ ವಿಚಾರಧಾರೆಯು ಅಷಾಢಭೂತಿತನ, ಸ್ವಯಂವೈಭವೀಕರಣ, ದುರಾಸೆ ಹಾಗೂ ಬಹುಸಂಖ್ಯೆಯಲ್ಲಿರುವ ಹಿಂದುಳಿದ ಜಾತಿ ಮತ್ತು ಬುಡಕಟ್ಟುಗಳ ಮೇಲೆ ವರ್ಗೀಯ ದ್ವೇಷ ಇವೆಲ್ಲವುಗಳ ಕೆಟ್ಟ ಮಿಶ್ರಣವಾಗಿದೆ.
ಸ್ವಾತಂತ್ರಾನಂತರ ಸಮಾಜವಾದಿ ಜಾತ್ಯತೀತ ಸರಕಾರವೊಂದು ದೇಶದ ಅರ್ಥಿಕ ಕೊರತೆಯನ್ನು ನೀಗಿಸಿದ್ದಲ್ಲದೆ, ಮೂರು ದಶಕಗಳ ಕಾಲ ಸಾರ್ವಜನಿಕ ಸೇವೆಗಳಿಗೆ ಅಪಾರ ಹಣ ಹೂಡಿಕೆ ಮಾಡಿದ್ದುದು ಒಂದು ಅದ್ಭುತವೇ ಸರಿ. ಆದರೆ 1991ರ ಆನಂತರ ಈ ಪವಾಡವು ಕನಸಿನಂತೆ ಕರಗತೊಡಗಿತು. 2014ರಲ್ಲಿ ‘ಕೇಸರಿ ನಾಝಿ’ಗಳು ಅಧಿಕಾರಕ್ಕೇರಿದ ಆನಂತರ ಸರಕಾರಿ ಆಸ್ಪತ್ರೆಗಳಲ್ಲಿ ಒಟ್ಟು ಉದ್ಯೋಗಗಳ ಪೈಕಿ ಕನಿಷ್ಠ ಕಾಲುಭಾಗ ಖಾಲಿ ಬಿದ್ದವು. ಕೇಂದ್ರೀಯ ತನಿಖಾ ದಳ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಸುಪ್ರೀಂಕೋರ್ಟ್, ಹೈಕೋರ್ಟ್‌ಗಳು, ರಕ್ಷಣಾ ಸೇವೆಗಳು, ಗೃಹ ಸಚಿವಾಲಯ ಹಾಗೂ ವಿತ್ತ ಸಚಿವಾಲಯವು ಅಪ್ಪಟ ಸರ್ವಾಧಿಕಾರಿಯೊಬ್ಬನ ಆಳ್ವಿಕೆಯಡಿ ಭವಿಷ್ಯವನ್ನು ಎದುರಿಸಲು ಸಜ್ಜಾದವು. ಉಪಖಂಡದ ಮೇಲ್ಜಾತಿಗಳ ಹಿತಾಸಕ್ತಿಯನ್ನು ಸಂರಕ್ಷಿಸುವುದೇ ಆತನ ಏಕೈಕ ಹಿತಾಸಕ್ತಿಯಾಗಿದೆ. ಭಾರತದ ಸರಕಾರಿ ಆಸ್ಪತ್ರೆಗಳಲ್ಲಿ ಈ ವರ್ಷದ ಜೂನ್ 17ರಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ)ವು ನೀಡಿದ ಕರೆಯು ಕೇಸರಿವಾದಿ ವೈದ್ಯರುಗಳಿಗಾಗಿ ಜಾರಿಗೊಳಿಸಹೊರಟಿರುವ ಗುಪ್ತ ಕಾರ್ಯಸೂಚಿಯಾಗಿದೆ.
 ಈ ಎಲ್ಲಾ ಅಂಶಗಳನ್ನು ಮನಗಂಡರೆ, ಜೂನ್ 17ರಂದು ಭಾರತೀಯ ವೈದ್ಯಕೀಯ ಸಂಘವು ಆರೋಗ್ಯಪಾಲನಾ ಕ್ಷೇತ್ರದ ಸಿಬ್ಬಂದಿ ಹಾಗೂ ಸಂಸ್ಥೆಗಳ ವಿರುದ್ಧ ನಡೆಯುವ ಹಿಂಸಾಚಾರವನ್ನು ತಡೆಯಲು ಕೇಂದ್ರ ಸರಕಾರ ಕಾನೂನು ಜಾರಿಗೊಳಿಸಬೇಕೆಂದು ಗೃಹಸಚಿವರನ್ನು ಯಾಕೆ ಆಗ್ರಹಿಸಿತೆಂಬುದಕ್ಕೆ ಸ್ಪಷ್ಟ ಉತ್ತರ ಲಭ್ಯವಾಗುತ್ತದೆ. ‘ಕೇಸರಿ’ ವೈದ್ಯರ ಉದ್ದೇಶವು ಜನತೆಗಾಗಲಿ ಅಥವಾ ದೇಶಕ್ಕಾಗಲಿ ಸೇವೆ ಸಲ್ಲಿಸುವುದಲ್ಲ. ಬದಲಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಷ್ಯೇ ಆಗಿದೆ.
2019ರ ಮೇ 23ರಂದು ಕೇಂದ್ರ ಆರೋಗ್ಯ ಸಚಿವರಾಗಿ ಹರ್ಷ ವರ್ಧನ್ ಅವರು ಸಂಪುಟಕ್ಕೆ ಸೇರ್ಪಡೆಗೊಂಡ ಬಳಿಕ ಐಎಂಎ ತನ್ನ ವೆಬ್‌ಪೇಜ್‌ನಲ್ಲಿ ಅವರನ್ನು ಹಾರ್ದಿಕವಾಗಿ ಸ್ವಾಗತಿಸುವ ಸಂದೇಶವನ್ನು ಪ್ರಸಾರ ಮಾಡಿತ್ತು.
  ರೋಗಿಗಳ ಮೇಲೆ ಪೊಲೀಸರ ನಿಯಂತ್ರಣವನ್ನು ಹೆಚ್ಚಿಸುವುದಕ್ಕಾಗಿ ಮುಷ್ಕರ ನಡೆಸುವ ಬದಲು ಐಎಂಎ ಯಾಕೆ ದೇಶದಲ್ಲಿ ಉತ್ತಮ ಆರೋಗ್ಯ ಸೇವೆಗಾಗಿ ಸೌಕರ್ಯಗಳನ್ನು ಒದಗಿಸುವಂತೆ ಮುಷ್ಕರಕ್ಕಿಳಿಯುವುದಿಲ್ಲ? ಈ ರೀತಿಯ ಹಲ್ಲೆಗಳ ಹಿಂದೆ ಮೇಲ್ವರ್ಗದ ವೈದ್ಯರು ಹಾಗೂ ಹಿಂದುಳಿದ ಜಾತಿ, ಬುಡಕಟ್ಟು ಮತ್ತು ಮುಸ್ಲಿಂ ರೋಗಿಗಳ ನಡುವೆ ಸಂಘರ್ಷವಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ಮೂಲಭೂತ ಸಂಘರ್ಷವನ್ನು ಖಾಸಗೀಕರಣವು ಉಲ್ಬಣಗೊಳಿಸಿದೆ. ಇದಕ್ಕಾಗಿ ರೋಗಿಗಳ ವಿರುದ್ಧ ಕಾನೂನುಗಳನ್ನು ಬಿಗಿಗೊಳಿಸಲು ಮೇಲ್ವರ್ಗದ ವೈದ್ಯರು ಬಯಸುತ್ತಿದ್ದಾರೆ.
 ಅಖಿಲ ಭಾರತ ಮಟ್ಟದಲ್ಲಿ ಹೇಳುವುದಾದರೆ ನಮ್ಮಲ್ಲಿ ಸುಮಾರು 1,100 ಮಂದಿಗೆ ಓರ್ವ ಖಾಸಗಿ ವೈದ್ಯರಿದ್ದಾರೆ ಹಾಗೂ ಸುಮಾರು 12 ಸಾವಿರ ಮಂದಿಗೆ ಓರ್ವ ಸರಕಾರಿ ವೈದ್ಯರಿದ್ದಾರೆ. 10 ಲಕ್ಷ ಜನಸಂಖ್ಯೆಯಿರುವ ಪ್ರತಿ ಒಂದು ಜಿಲ್ಲೆಯಲ್ಲಿ ಸರಾಸರಿ 35 ವೈದ್ಯರಿದ್ದಾರೆ. ಕೇಸರಿ ವೈದ್ಯರುಗಳು, ಇತರ ವೃತ್ತಿಪರರೊಂದಿಗೆ ಕೈಜೋಡಿಸಿ ಈಗ ಕೇಂದ್ರದಲ್ಲಿ ಕೇಸರಿ ನಾಝಿಗಳಿಗೆ ಅಧಿಕಾರಕ್ಕೇರಿಸುವಲ್ಲಿ ತಮ್ಮದೇ ಪಾಲಿನ ಕೊಡುಗೆ ನೀಡಿದ್ದಾರೆ.
ಕೇಸರಿ ವೈದ್ಯರುಗಳು ಟಿಪಿಕಲ್ ನಾಝಿವಾದಿ ಮಿಶ್ರಿತ ವಿಚಾರಧಾರೆಗಳನ್ನು ಹೊಂದಿದ್ದಾರೆ. ತಮ್ಮ ಪ್ರಯೋಜನಕ್ಕೆ ವೈದ್ಯಕೀಯ ಸಂಸ್ಥೆಗಳ ಖಾಸಗೀಕರಣವನ್ನು ಉತ್ತೇಜಿಸಿದರು. ಹಿಂದುಳಿದ ಜಾತಿಗಳು ಹಾಗೂ ಬುಡಕಟ್ಟು ಜನರ ಬ್ರೈನ್‌ವಾಶ್ ಮಾಡಿ, ಮುಸ್ಲಿಂ ವಿರೋಧಿ ದ್ವೇಷಭಾವನೆ, ಕೋಮುವಾದದ ಅಮಲು ತುಂಬಲು ಯತ್ನಿಸಿದರು.
ಭಾರತೀಯ ಉಪಖಂಡದಲ್ಲಿ 130 ಕೋಟಿ ಜನರು ವಾಸವಾಗಿದ್ದಾರೆ. ಅವರಲ್ಲಿ ಕನಿಷ್ಠ 10 ಕೋಟಿ ಮಂದಿ ನಿರುದ್ಯೋಗಿಗಳು ಮತ್ತು ಅಪೌಷ್ಟಿಕತೆ, ಅಸ್ವಸ್ಥತೆಯಿಂದ ಬಾಧಿತರಾದವರು. ಅಷ್ಟೇ ಅಲ್ಲ ಅವರು ವಿವಿಧ ರೀತಿಯ ತಪ್ಪಿಸಲು ಸಾಧ್ಯವಿರುವ ಅಪಾಯಕಾರಿ ವಿಷಗಳ ಸಂಪರ್ಕಕ್ಕೆ ತುತ್ತಾಗಿದ್ದಾರೆ. ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಆಮ್ಲ, ಜಲಮಾಲಿನ್ಯದಿಂದಾಗಿ ಜೀವನಿರೋಧಕ ಸಾಮರ್ಥ್ಯದ ಕೊರತೆ, ಕೈಗಾರಿಕಾ-ಕೃಷಿ ಮಾಲಿನ್ಯದಿಂದಾಗಿ ಕ್ಯಾನ್ಸರ್, ಮಧುಮೇಹ, ಆತ್ಮಹತ್ಯೆಗೆ ಪ್ರಯತ್ನ, ಅನಿಮಿಯಾ, ಶಿಶುಮರಣ, ನೈರ್ಮಲ್ಯದ ಕೊರತೆಯಿಂದಾಗಿ ಕ್ಯಾನ್ಸರ್, ಆಹಾರ ಮಾಲಿನ್ಯ ಇತ್ಯಾದಿ ಬಾಧೆಗಳಿಗೆ ತುತ್ತಾಗು ತ್ತಿದ್ದಾರೆ. ನೂರಾರು ತಪ್ಪಿಸಲು ಸಾಧ್ಯವಿರುವ ಶಿಶು ರೋಗಗಳು, ಬಡ ಹಾಗೂ ಹಸಿದ ಮಕ್ಕಳನ್ನು ಕಾಡುತ್ತಿವೆ. ಈ ಒಂದು ಕೋಟಿ ಜನರ ಅಥವಾ ಸಾವಿರಾರು ಮಂದಿ ಹಿಂದುಳಿದ ಜಾತಿಗಳ ಸರಾಸರಿ ಜೀವಿತಾವಧಿಯು ಮೇಲ್ಜಾತಿ ವರ್ಗಗಳವರಿಗಿಂತ 15 ವರ್ಷ ಕಡಿಮೆಯದ್ದಾಗಿದೆ. ಅವರಲ್ಲಿ ಸಾವಿರಾರು ಮಂದಿ ಪ್ರತಿ ವರ್ಷವೂ ಮೇಲ್ಜಾತಿಗಳವರಿಂದ ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ.
 ಕೃಷಿ ಕಾರ್ಮಿಕರು, ಕೆಲಸದ ಸ್ಥಳಗಳಲ್ಲಿ ಅವಘಡಗಳಿಗೆ ತುತ್ತಾಗುತ್ತಿರುತ್ತಾರೆ. ಇವರಲ್ಲಿ ಬಹುತೇಕ ಮಂದಿ ಸಾಲಬಾಧಿತರು.ಭಾರತದಲ್ಲಿ ಸುಮಾರು 1 ಕೋಟಿ ಮಕ್ಕಳು ಅಪ್ರಾಪ್ತ ವಯಸ್ಸಿನ ಕಾರ್ಮಿಕರಾಗಿದ್ದಾರೆ. ಸಾವಿರಾರು ಮಂದಿ ಈಗಲೂ ಜೀತದಾಳುಗಳಾಗಿ ದುಡಿಯುತ್ತಿದ್ದು, ಗಂಭೀರವಾದ ಆರೋಗ್ಯದ ದುಷ್ಪರಿಣಾಮಗಳಿಗೆ ತುತ್ತಾಗುತ್ತಿದ್ದಾರೆ . ಭಾರತದ ವಿವಿಧ ರಾಜ್ಯಗಳಲ್ಲಿರುವ ಸರಕಾರಿ ಆಸ್ಪತ್ರೆಗಳು ಸೇವಾ ಗುಣಮಟ್ಟ ಹಾಗೂ ವೆಚ್ಚದಲ್ಲಿ ವಿಭಿನ್ನತೆಯನ್ನು ಹೊಂದಿವೆ. ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರ ಹಾಗೂ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರಕಾರ ಹೊರತುಪಡಿಸಿ ಭಾರತದ ಇತರ ಯಾವುದೇ ರಾಜ್ಯವು ಉಚಿತ ಚಿಕಿತ್ಸೆ ಹಾಗೂ ಔಷಧಿಯನ್ನು ಒದಗಿಸುವುದಿಲ್ಲ.
 ಬಿಜೆಪಿ ಆಡಳಿತದ ಎಲ್ಲಾ ರಾಜ್ಯಗಳಲ್ಲಿ ಪ್ರತಿದಿನವೂ ಹಿಂದುಳಿದ ವರ್ಗಗಳ ಮೇಲೆ ಮೇಲ್ವರ್ಗಗಳ ಜನರಿಂದ ದೈಹಿಕ ಹಲ್ಲೆಯ ಘಟನೆಗಳು ವರದಿಯಾಗುತ್ತಿವೆ. ಈ ರಾಜ್ಯಗಳಲ್ಲಿ ಅನ್ಯಾಯದ ವಿರುದ್ಧ ಪರಿಹಾರ ಕ್ರಮಗಳು ಅಸ್ತಿತ್ವದಲ್ಲೇ ಉಳಿದುಕೊಂಡಿಲ್ಲ. ಒಂದು ವೇಳೆ ದೂರುದಾರನು ಹಿಂದುಳಿದ ಜಾತಿಯ ಅಥವಾ ಮುಸ್ಲಿಂ ಸಮುದಾಯದ ಅಥವಾ ಬುಡಕಟ್ಟು ಪಂಗಡಕ್ಕೆ ಸೇರಿದವನಾಗಿದ್ದಾರೆ ಪ್ರಕರಣದ ತೀರ್ಪು ದೊರೆಯಲು ದಶಕಗಳೇ ಬೇಕಾಗಬಹುದು. ಬಹುತೇಕ ಮುಸ್ಲಿಮರು ಹಾಗೂ ಹಿಂದುಳಿದ ಜಾತಿಗಳವರು ಮತ್ತು ಬುಡಕಟ್ಟು ಪಂಗಡದವರು ಭೂರಹಿತರು. ಕೇಂದ್ರ ಅಥವಾ ರಾಜ್ಯ ಸರಕಾರದ ಬೆಂಬಲವಿಲ್ಲದೆ ಯಾವುದೇ ಮನೆ ಅಥವಾ ವಸತಿಯನ್ನು ಪಡೆದುಕೊಳ್ಳುವುದು ಅವರಿಗೆ ಅಸಾಧ್ಯವಾಗಿದೆ. ಖಾಸಗಿ ಜಮೀನು ಸಂಪೂರ್ಣವಾಗಿ ಮೇಲ್ಜಾತಿಗಳ ಕೈಯಲ್ಲೇ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಭಾರತದ ಗಣರಾಜ್ಯವನ್ನು ಯಾತನಾ ಶಿಬಿರ ಹಾಗೂ ಚಿತ್ರಹಿಂಸೆಯ ಕೊಠಡಿ ಎಂದೇ ಅದರ ಬಹುತೇಕ ನಾಗರಿಕರು ಹಾಗೂ ನಿವಾಸಿಗಳು ಪರಿಗಣಿಸಿದ್ದಾರೆ. ಇತರ ಯಾವುದೇ ವೃತ್ತಿಪರ ಸಂಸ್ಥೆಯಂತೆ ಐಎಂಎ ಕೂಡಾ ತನ್ನ ಮೇಲ್ವರ್ಗದ ಸದಸ್ಯರಿಗೆ ಲಾಭಕರವಾದ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಲಾಬಿ, ಏಕಸ್ವಾಮ್ಯ, ದರನಿಗದಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೀತಿ ನಿರೂಪಣೆ ಹಾಗೂ ಸರಕಾರದ ಉನ್ನತ ಉದ್ಯೋಗಗಳನ್ನು ತನ್ನ ಸದಸ್ಯರು ಹೊಂದುವಂತೆ ಮಾಡುವಲ್ಲಿ ಐಎಂಎ ಯಶಸ್ವಿಯಾಗಿದೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ಕೂಡಾ ಐಎಂಎನ ಸದಸ್ಯರಾಗಿದ್ದಾರೆ.
ಸ್ಥಾನಮಾನದ ಪ್ರತಿಷ್ಠೆ ಹಾಗೂ ಜ್ಞಾನದ ಶಕ್ತಿಯಿಂದ ಅಹಮಿಕೆಯನ್ನು ಬೆಳೆಸಿಕೊಂಡಿರುವ ಭಾರತ ಗಣರಾಜ್ಯದ ಅನೇಕ ವೈದ್ಯರುಗಳು ರೋಗಿಗಳನ್ನು ಮಾನವಜೀವಿಗಳಂತೆ ಕಾಣುತ್ತಿಲ್ಲ. ಬದಲಿಗೆ ವರ್ಗೀಯ ಶತ್ರುಗಳಂತೆ ಪರಿಗಣಿಸುತ್ತಿದ್ದಾರೆ. ತೀರಾ ಇತ್ತೀಚೆಗೆ ರಾಜಕೋಟ್‌ನಲ್ಲಿ ಜನರಲ್ ಸರ್ಜನ್ ಒಬ್ಬರು ರೋಗಿಯೊಬ್ಬರಿಗೆ ಚಿಕಿತ್ಸೆ ಅಥವಾ ಔಷಧಿ ನೀಡಲು ನಿರಾಕರಿಸಿದರು. ಸಾಯುವುದು ಸೇರಿದಂತೆ ರೋಗಿಯು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಆತ ಬೆದರಿಕೆ ಹಾಕಿದ್ದರು. ಇಂದು ತೆಲಂಗಾಣದಲ್ಲಿ ವೈದ್ಯರ ನಿವೃತ್ತಿಯ ವಯಸ್ಸನ್ನು 58ರಿಂದ 65ಕ್ಕೆ ಏರಿಸಲಾಗಿದೆ. ಯಾಕೆಂದರೆ ಒಂದು ಬೋಧನಾ ಆಸ್ಪತ್ರೆಯಲ್ಲಿಯೇ 226ರಿಂದ 456 ವೈದ್ಯಕೀಯ ಹುದ್ದೆಗಳು ಖಾಲಿಬಿದ್ದಿದ್ದು, ಅವುಗಳನ್ನು ಭರ್ತಿ ಮಾಡಲು ಯಾವ ಅರ್ಹ ಅಭ್ಯರ್ಥಿಯೂ ದೊರೆಯುತ್ತಿಲ್ಲ. ಇದೇ ರೀತಿ, 597 ಅಸೋಸಿಯೇಟ್ ಪ್ರೊಫೆಸರ್‌ಗಳ ಪೈಕಿ 204 ಹುದ್ದೆಗಳು ಹಾಗೂ 1,750 ಸಹಾಯಕ ಪ್ರೊಫೆಸರ್ ಹುದ್ದೆಗಳ ಪೈಕಿ 1,133 ಹುದ್ದೆಗಳು ಕೂಡಾ ಖಾಲಿಯುಳಿದಿವೆ. ಒಂದು ವೇಳೆ ಅರ್ಹ ಅಭ್ಯರ್ಥಿಗಳು ನೇಮಕಗೊಂಡಿದ್ದರೂ ಕೂಡಾ ಅವರು ಸೇವೆಗೆ ಹಾಜರಾಗಿರಲಿಲ್ಲ ಇಲ್ಲವೇ ಸೇರ್ಪಡೆಗೊಂಡಿರಲಿಲ್ಲವೆಂದು ‘ದಿ ಹಿಂದೂ’ ಪತ್ರಿಕೆ ವರದಿ ಮಾಡಿದೆ.
ಇತರ ಯಾವುದೇ ವೃತ್ತಿಪರ ಸಂಘಟನೆಯ ಹಾಗೆ ಐಎಂಎ ಕೂಡಾ ಸರಕಾರದಿಂದ ಉಚಿತ ಶಿಕ್ಷಣ ಹಾಗೂ ಮೂಲಸೌಕರ್ಯಗಳಿಗಾಗಿ ಅನುದಾನವನ್ನು ಪಡೆದುಕೊಳ್ಳುತ್ತಿದೆ ಹಾಗೂ ಆನಂತರ ಸೌಲಭ್ಯಗಳನ್ನು ಖಾಸಗೀಕರಣಗೊಳಿಸಲು ಸದಸ್ಯರನ್ನು ಪ್ರೇರೇಪಿಸುತ್ತದೆ. ಇತರ ಯಾವುದೇ ವೃತ್ತಿಪರ ಸಂಘಟನೆಯ ಹಾಗೆ, ಐಎಂಎ ಕೂಡಾ ತನ್ನ ಸದಸ್ಯರು ಉತ್ತಮವಾದ ಕೆಲಸ ಮಾಡುತ್ತಾರೆ ಎಂಬ ಸುಳ್ಳನ್ನು ಸಮಾಜದಲ್ಲಿ ಹರಡುವಲ್ಲಿ ಐಎಂಎ ತುಂಬಾ ಸಮರ್ಥವಾಗಿದೆ.
ಒಂದು ವೇಳೆ ವೈದ್ಯರುಗಳು ನಿಜಕ್ಕೂ ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿಯನ್ನು ಹೊಂದಿದ್ದರೆ ಎಲ್ಲರಿಗೂ ಉಚಿತ ಸಾರ್ವಜನಿಕ ಸೇವೆಯನ್ನು ಒದಗಿಸುವತ್ತ ಅವರು ಯಾಕೆ ಆಗ್ರಹಿಸುತ್ತಿಲ್ಲ. ಈ ವಿಷಯದ ಕುರಿತು ಯಾವುದೇ ವೈದ್ಯಕೀಯ ಪತ್ರಿಕೆಯಲ್ಲಿ ಕಣ್ಣುಹಾಯಿಸಿದರೂ, ಮೂಲಸೌಕರ್ಯ ಹಾಗೂ ಚಿಕಿತ್ಸೆಯ ಕೊರತೆಯಿಂದಾಗಿ ರೋಗಿಗಳು ಹಿಂಸಾತ್ಮಕ ಪ್ರವೃತ್ತಿಯನ್ನು ತಾಳುತ್ತಾರೆ ಎಂಬಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಆಸ್ಪತ್ರೆಯ ವ್ಯವಹಾರದಲ್ಲಿ ಸರಕಾರ ಮೂಗು ತೂರಿಸಬಾರದು ಎಂದು ಯಾಕೆ ಐಎಂಎ ಪ್ರತಿಭಟನೆ ನಡೆಸುವುದಿಲ್ಲ. ಸರಕಾರಿ ವೈದ್ಯರು ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ನಡೆಸಿಕೊಂಡು ಹೋಗುವುದನ್ನು ತಡೆಯಲು ಅದು ಯಾಕೆ ಪ್ರಯತ್ನಿಸುವುದಿಲ್ಲ. ಸರಕಾರವು ಸಾರ್ವಜನಿಕ ಆಸ್ಪತ್ರೆಗಳ ಸಂಖ್ಯೆಯನ್ನು ಕಡಿಮೆಗೊಳಿಸಿರುವುದನ್ನು ಯಾಕೆ ವಿರೋಧಿಸುತ್ತಿಲ್ಲ. ಬಿಜೆಪಿ ಸರಕಾರದಿಂದ ಆರೋಗ್ಯ ವಲಯ ಹಾಗೂ ಸಾರ್ವಜನಿಕ ಆರೋಗ್ಯ ಪಾಲನೆಗೆ ಹೆಚ್ಚು ಹಣ ಹೂಡುವಂತೆ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಮೋದಿ ಸರಕಾರವನ್ನು ಆಗ್ರಹಿಸಲು ಅದು ಯಾಕೆ ವೈದ್ಯರನ್ನು ಒಗ್ಗೂಡಿಸುತ್ತಿಲ್ಲ?.
ಇದಕ್ಕೇನು ಕಾರಣವೆಂದರೆ, ಐಎಂಎ ತನಗೆ ನೀಡುತ್ತಿರುವ ಬೆಂಬಲಕ್ಕೆ ಪ್ರತಿಯಾಗಿ ಅದರ ಸದಸ್ಯರಿಗೆ ಕೇಂದ್ರದ ಮೋದಿ ಸರಕಾರವು ಭಾರೀ ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ಐಎಂಎ ದೇಶಕ್ಕಾಗಿ ಅಥವಾ ಜನತೆಗಾಗಿ ಮುಷ್ಕರದಲ್ಲಿ ತೊಡಗಿಲ್ಲ. ಬದಲಿಗೆ ಖಾಸಗಿ ಆರೋಗ್ಯ ವಿಮೆ ಆಧಾರಿತ ಖಾಸಗಿ ಆಸ್ಪತ್ರೆಗಳು ಹಾಗೂ ದೊಡ್ಡ ಮೊತ್ತದ ಸಂಭಾವನೆ ತಮಗೆ ದೊರಕುವಂತೆ ಮಾಡಲು ಅದು ಶ್ರಮಿಸುತ್ತಿದೆ. ಒಂದು ವೇಳೆ ಕೇಸರಿ ನಾಝಿ ರಾಜಕಾರಣಿಗಳು ಅವರನ್ನು ಬೆಂಬಲಿಸಿದಲ್ಲಿ, ಕೇಸರಿ ನಾಝಿ ವೈದ್ಯರುಗಳು ಕೂಡಾ ಅವರಿಗೆ ಬೆಂಬಲ ನೀಡಲಿದ್ದಾರೆ.
ಕೇಸರಿ ವೈದ್ಯರುಗಳು ಹಾಗೂ ಕೇಸರಿ ನಾಝಿ ಸರಕಾರ ಪರಸ್ಪರ ಕೈಜೋಡಿಸಿ, ದೇಶವನ್ನು ವೈಭವದ ಸ್ಥಿತಿಗೆ ಕೊಂಡೊಯ್ಯಲು ಹಾಗೂ ಇಲ್ಲಿ ವಾಸವಾಗಿರುವ ಜನರ ಉತ್ತಮ ಬದುಕಿಗಾಗಿ ತಾವು ಸಾರ್ಥಕವಾದ ಸೇವೆಯನ್ನು ಸಲ್ಲಿಸುತ್ತಿದ್ದೇವೆಯೆಂಬ ಭಾವನೆಯನ್ನು ಹಿಂದುಳಿದ ಜಾತಿಗಳು ಹಾಗೂ ಬುಡಕಟ್ಟು ಜನರು ಮತ್ತು ಮುಸ್ಲಿಮರಲ್ಲಿ ಉಂಟು ಮಾಡಲು ಪ್ರಯತ್ನಿಸುತ್ತಿವೆ. ಆದಾಗ್ಯೂ ಯಾರೂ ಕೂಡಾ ಅದನ್ನು ನಂಬಲಾರರು. ಇದಕ್ಕಾಗಿ ಕೇಸರಿ ನಾಝಿಗಳು, ಆರೋಗ್ಯಪಾಲನಾ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಹಿಂಸಾಚಾರ ತಡೆ ಕಾಯ್ದೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಅವರ ಸುಳ್ಳುಗಳನ್ನು ನಂಬದವರನ್ನು ಎದುರಿಸಲು ಹೆಚ್ಚಿನ ಪೊಲೀಸ್ ಅಧಿಕಾರಗಳನ್ನು ಅವರು ಪಡೆದಿರುತ್ತಾರೆ.
ಆರೋಗ್ಯಪಾಲನೆಯ ವಿಷಯದ ಬಗ್ಗೆ ಹೇಳುವುದಾದರೆ, ನೂತನ ಸರಕಾರವು ರೋಗಿಗಳನ್ನು ಹೆಚ್ಚು ಅತ್ಯಂತ ದಕ್ಷತೆಯಿಂದ ಸುಲಿಯಲು ನೂತನ ಸರಕಾರವು ತಮಗೆ ನೆರವಾಗುವುದೆಂಬುದನ್ನು ಖಾತರಿಪಡಿಸಿಕೊಳ್ಳಲು ಐಎಂಎ ದೃಢ ನಿರ್ಧಾರ ಮಾಡಿದೆ. ವೈದ್ಯರ ನಿರ್ಲಕ್ಷದ ಬಗ್ಗೆ ದೂರುವ ರೋಗಿಗಳನ್ನು ನಿಯಂತ್ರಿಸಲು ಪೊಲೀಸರನ್ನು ಕರೆಯಿಸುವ ಸನ್ನಿವೇಶಗಳು ನಿರ್ಮಾಣವಾಗಲಿದೆ. ವೈದ್ಯಕೀಯ ಶುಲ್ಕ ಸಂಪೂರ್ಣ ಪಾವತಿಯಾಗುವ ತನಕವೂ ವೈದ್ಯರು ರೋಗಿಯ ಮೃತದೇಹವನ್ನು ಬಂಧುಗಳಿಗೆ ನೀಡದೇ ಇರಬಹುದಾಗಿದೆ. ಒಂದು ವೇಳೆ ರೋಗಿಗಳು ರೊಚ್ಚಿಗೆದ್ದಲ್ಲಿ ಅವರಿಗೆ 7 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಲು ಅಮಿತ್ ಶಾ ಅವರಿಗೆ ವೈದ್ಯರು ಆಗ್ರಹಿಸಲಿದ್ದಾರೆ. ದೇಶ ಹಾಗೂ ಜನತೆಯ ಸಮಸ್ಯೆಗಳನ್ನು ಕೂಲಂಕಷವಾಗಿ ಅವಲೋಕಿಸುವ ಬದಲು ಐಎಂಎ, ಪಶ್ಚಿಮಬಂಗಾಳದಲ್ಲಿ ತನ್ನ ಸದಸ್ಯರಲ್ಲೊಬ್ಬರಿಗೆ ನಡೆದ ದುರದೃಷ್ಟಕರ ಘಟನೆಯನ್ನು ತಮ್ಮ ಲಾಭದಾಯಕ ಖಾಸಗಿ ವೃತ್ತಿಯನ್ನು ರಕ್ಷಿಸಲು ದೊಡ್ಡ ಮಟ್ಟದಲ್ಲಿ ಕೇಸರಿ ಪೊಲೀಸರನ್ನು ನೇಮಕಾತಿಗೆ ನೆಪವಾಗಿ ಬಳಸಿಕೊಳ್ಳುತ್ತಿದೆ. ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನಾ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯು , ವೈದ್ಯರ ವಿರುದ್ಧ ಹಿಂಸಾಚಾರಕ್ಕೆ ಹೆಚ್ಚು ಆಸ್ಪದ ನೀಡುವುದು ಸ್ಪಷ್ಟವಾಗಿದೆ. ಆದರೆ ಈ ಕೇಸರಿವಾದಿ ವೈದ್ಯರುಗಳು ಈ ಯೋಜನೆಗಳು ಹಾಗೂ ಅದರ ಹಿಂದಿರುವ ಚಿಂತನೆಯನ್ನು ತೊಲಗಿಸಲು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.
ಅತ್ಯಂತ ನಿರ್ಲಕ್ಷಿತ, ಅನಾಥ, ಹಸಿವಿನ, ದುರ್ಬಲ ಹಾಗೂ ಖಿನ್ನನಾದ ವ್ಯಕ್ತಿಗಳ ಸಂಖ್ಯೆ ಹೆಚ್ಚಾದಂತೆ ಅವರನ್ನು ಗುಣಪಡಿಸಲು ಆರೋಗ್ಯ ಹಾಗೂ ಪಾಲನೆಗಾಗಿ ಸರಕಾರಕ್ಕೆ ತಗಲುವ ವೆಚ್ಚವು ಅಧಿಕವಾಗಿರುತ್ತದೆ. ಸಮಾಜವು ತನ್ನ ಸದಸ್ಯರನ್ನು ಹುಟ್ಟಿದಾಗಿನಿಂದ ಹಿಡಿದು ಕೊನೆಯುಸಿರು ಎಳೆಯುವ ತನಕ ಪಾಲನೆ ಮಾಡಿದಲ್ಲಿ, ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಆದರೆ ಐಎಂಎ ಮಾತ್ರ ಅನಾರೋಗ್ಯಕರ, ರೋಗಿಷ್ಠ ಹಾಗೂ ಗಾಯಾಳುಗಳಿರುವ ಸಮಾಜದ ಬಗ್ಗೆ ಹೆಚ್ಚು ಆಸಕ್ತವಾಗಿದೆ.

ಕೃಪೆ: countercurrents.org

Writer - ಆನಂದಿ ಶರಣ್

contributor

Editor - ಆನಂದಿ ಶರಣ್

contributor

Similar News

ಜಗದಗಲ
ಜಗ ದಗಲ