ಆಹಾರದ ಹಕ್ಕನ್ನು ನಿರಾಕರಿಸುತ್ತಿರುವ ‘ಅಕ್ಷಯ ಪಾತ್ರೆ’

Update: 2019-06-16 18:37 GMT

ಸಂಸ್ಕೃತಿ ಕುರಿತ ಅಕ್ಷಯಪಾತ್ರದ ದೃಷ್ಟಿಕೋನವು ಅಪಾಯಕಾರಿಯಾದುದಾಗಿದೆ. ಅದು ಆಹಾರದ ಕ್ರಮಗಳನ್ನು ಏಕರೂಪಗೊಳಿಸಲು ಪ್ರಯತ್ನಿಸುತ್ತಿದೆ. ಶುಚಿತ್ವ ಹಾಗೂ ‘ಉತ್ತಮ ಆರೋಗ್ಯ’ದ ಹೆಸರಿನಲ್ಲಿ ಸಸ್ಯಾಹಾರಿ ಸಂಸ್ಕೃತಿಯನ್ನು ಅದು ಹೇರುವುದನ್ನು ಪ್ರಶ್ನಿಸಬೇಕಾಗಿದೆ. ಆದರೆ ಸರಕಾರ ಹಾಗೂ ಅಧಿಕಾರಿಗಳಿಗೆ ಅತ್ಯಂತ ಮುಖ್ಯವಾದ ಪ್ರಶ್ನೆಯೊಂದು ಮುಂದಿದೆ. ಇಂತಹ ಸಂಸ್ಥೆಗಳಿಗೆ ಆಹಾರಕ್ರಮ ಕುರಿತ ಚರ್ಚೆಗಳಲ್ಲಿ ಪ್ರಾಬಲ್ಯತೆ ಸ್ಥಾಪಿಸಲು ಯಾಕೆ ಅವಕಾಶ ನೀಡಬೇಕೆಂಬುದಾಗಿದೆ.

ಸಾಂಸ್ಕೃತಿಕವಾಗಿ ಸ್ವೀಕೃತವಾದ ಆಹಾರವನ್ನು ಸೇವಿಸುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಯು ಹೊಂದುವುದೇ ಆಹಾರದ ಹಕ್ಕೆಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಅಂದರೆ ಸರಕಾರವಾಗಲಿ ಅಥವಾ ಇಲಾಖೆಗಳಾಗಲಿ ನಿರ್ದಿಷ್ಟ ರಾಜ್ಯದ ಸಂಸ್ಕೃತಿಗೆ ಅಪರಿಚಿತವಾದ ಆಹಾರ ಕ್ರಮವನ್ನು ಜನರ ಮೇಲೆ ಹೇರಲಾಗದು. ‘ಅಕ್ಷಯ ಪಾತ್ರ’ ಪ್ರತಿಷ್ಠಾನದ ಮಧ್ಯಾಹ್ನದೂಟ ಯೋಜನೆಯು ಈ ಸಂಸ್ಥೆಯ ಉದ್ದೇಶದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಇದರ ಜೊತೆಗೆ ಫಲಾನುಭವಿಗಳನ್ನು ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಗೆ ‘ಪರಿವರ್ತಿಸುವ’ ಹುನ್ನಾರವಿರುವ ಸಾಧ್ಯತೆಯ ಕುರಿತೂ ಸಂದೇಹವನ್ನು ಹುಟ್ಟುಹಾಕಿದೆ.
ಮಕ್ಕಳಿಗೆ ಶುಚಿಯಾದ ಆಹಾರವನ್ನು ನೀಡುವ ‘ಅಕ್ಷಯ ಪಾತ್ರ’ ಯೋಜನೆಯಲ್ಲಿ ತಪ್ಪೇನಿದೆ? ಇಷ್ಟಕ್ಕೂ ಅವರೇ ಯೋಜನೆಗೆ ಹಣಪಾವತಿಸುತ್ತಾರೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅವರು ಅದನ್ನು ಒದಗಿಸುತ್ತಿದ್ದಾರೆ. ಹೀಗಿರುವಾಗ ಈ ಯೋಜನೆಯಲ್ಲಿ ತಪ್ಪೇನಿದೆಯೆಂದು ಹಲವಾರು ಮಂದಿ ವಾದಿಸುತ್ತಾರೆ. ಮಕ್ಕಳಿಗೆ ಸ್ವಚ್ಛ ಆಹಾರವನ್ನು ಒದಗಿಸುವ ಸಂಘಟನೆಯ ಪ್ರಯತ್ನಗಳನ್ನು ಶ್ಲಾಘಿಸುವ ಜೊತೆಗೆ, ‘ಅಕ್ಷಯ ಪಾತ್ರ’ ಸಂಸ್ಥೆಯು ಅಗತ್ಯವುಳ್ಳವರಿಗೆ ಯಾವುದೇ ಸೇವೆಯನ್ನು ಉಚಿತವಾಗಿ ಒದಗಿಸುವುದಿಲ್ಲವೆಂಬುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಮಕ್ಕಳಿಗೆ ಆಹಾರವುಣಿಸುವ ಗುತ್ತಿಗೆಯನ್ನು ಅದು ರಾಜ್ಯ ಸರಕಾರದಿಂದ ಪಡೆದು ಕೊಂಡಿದೆ. ಜನರ ನೆರವನ್ನು ಯಾಚಿಸಿ ಅದು ತಾನಾಗಿಯೇ ಈ ಯೋಜನೆಗೆ ನಿಧಿಯನ್ನು ಸಂಗ್ರಹಿಸುತ್ತಿದೆ.
‘ಅಕ್ಷಯಪಾತ್ರ’ ಜಗತ್ತಿನಾದ್ಯಂತ ಅನುಯಾಯಿಗಳನ್ನು ಹೊಂದಿರುವ ಇಸ್ಕಾನ್ ಸಂಸ್ಥೆಯ ನೆರವಿನೊಂದಿಗೆ ನಡೆಯುವ ಪ್ರತಿಷ್ಠಾನವಾಗಿದೆ. ಅವರು ವಿದ್ಯಾರ್ಥಿಗಳಿಗೆ ತಾವು ಸಾತ್ವಿಕ ಆಹಾರವೆಂದು ಪರಿಗಣಿಸಿರುವಂತಹ ಆಹಾರವನ್ನು ಮಾತ್ರ ಮಧ್ಯಾಹ್ನದೂಟಕ್ಕೆ ಬಡಿಸುತ್ತಾರೆ. ಈ ಬಗ್ಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಹೀಗೆ ಹೇಳಿದೆ. ‘‘ನವೆಂಬರ್‌ನಲ್ಲಿ ರಾಜ್ಯ ಆಹಾರ ಆಯೋಗವು ಪ್ರತಿಷ್ಠಾನಕ್ಕೆ ನೋಟಿಸ್ ಒಂದನ್ನು ಜಾರಿಗೊಳಿಸಿ, ಊಟದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸೇರ್ಪಡೆಗೊಳಿಸುವಂತೆ ಆದೇಶಿಸಿತ್ತು. ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇರಿಸದೆ ಇದ್ದುದರಿಂದ ಆಹಾರವು ಜೀರ್ಣವಾಗುತ್ತಿಲ್ಲವೆಂಬುದನ್ನು ಅರಿತ ಹಲವಾರು ವಿದ್ಯಾರ್ಥಿಗಳು, ಮಧ್ಯಾಹ್ನದೂಟವನ್ನು ತಪ್ಪಿಸಿಕೊಳ್ಳುತ್ತಿದ್ದರು ಅಥವಾ ಅಲ್ಪಪ್ರಮಾಣದಲ್ಲಿ ಆಹಾರ ಸೇವಿಸುತ್ತಿದ್ದರು ಎಂಬ ಬಗ್ಗೆ ರಾಜ್ಯ ಆಹಾರ ಆಯೋಗವು ದೂರುಗಳನ್ನು ಸ್ವೀಕರಿಸಿತ್ತು. ಆದಾಗ್ಯೂ, ಆಕ್ಷಯಪಾತ್ರ ಪ್ರತಿಷ್ಠಾನವು ತಾನು ಕೇವಲ ಸಾತ್ವಿಕ ಆಹಾರವನ್ನು ಮಾತ್ರ ಒದಗಿಸುವುದಾಗಿ ತಿಳಿಸಿತ್ತು.
ಇದೀಗ ಈ ಕಥೆಯಲ್ಲಿ ಎರಡು ವಿಷಯಗಳಿವೆ. ಮೊದಲನೆಯ ದಾಗಿ ಅಕ್ಷಯಪಾತ್ರ ಒದಗಿಸುವ ಆಹಾರವನ್ನು ಮಕ್ಕಳು ಮೆಚ್ಚಿಕೊಂಡಿದ್ದಾರೆಯೇ ಮತ್ತು ಎರಡನೆಯದಾಗಿ ಅದು ಆರೋಗ್ಯಕರವಾದ ಊಟವೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಮಕ್ಕಳಿಗೆ ಈ ಊಟವು ರುಚಿಸುತ್ತಿಲ್ಲ ಹಾಗೂ ಹಲವಾರು ಶಾಲೆಗಳಲ್ಲಿ ಅವರು ಅದನ್ನು ಸೇವಿಸುವು ದನ್ನು ತಪ್ಪಿಸಿಕೊಳ್ಳುತ್ತಿದ್ದಾರೆಂದು ಮಾಧ್ಯಮ ವೊಂದರ ವರದಿಯು ತಿಳಿಸಿದೆ. ಬಹುಶಃ ಹಲವಾರು ಸ್ಥಳಗಳಲ್ಲಿ ಅವರು ಈ ಊಟವನ್ನು ಒತ್ತಡಕ್ಕೊಳಗಾಗಿ ಸೇವಿಸುತ್ತಿದ್ದಾರೆ. ಇಂತಹ ಆಹಾರವನ್ನು ತಿರಸ್ಕರಿಸುವ ಆಯ್ಕೆ ಅವರಿಗೆ ಇಲ್ಲದಿರುವುದು ವಿಷಾದನೀಯ. ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಒಳಗೊಂಡ ಯಾವುದೇ ಆಹಾರವು ಅನಾರೋಗ್ಯಕರವಾದುದೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಇವೆರಡೂ ಆರೋಗ್ಯಕ್ಕೆ ಪ್ರಯೋಜನಕಾರಿಯೆಂದು ವೈದ್ಯಕೀಯ ಸಮುದಾಯ ಯಾವತ್ತೂ ಸೂಚಿಸುತ್ತಲೇ ಬಂದಿದೆಯೆಂಬ ಬಗ್ಗೆ ನನಗೆ ಖಾತರಿಯಿದೆ. ವಾಸ್ತವವಾಗಿ, ಅಕ್ಷಯಪಾತ್ರ ಯೋಜನೆಯು ಭಾರತೀಯ ಸವರ್ಣೀಯ ಸಸ್ಯಾಹಾರಿ ಚಿಂತನೆಯಲ್ಲದೆ ಬೇರೇನೂ ಅಲ್ಲ. ಊಟದ ಹೆಸರಿನಲ್ಲಿ ಈ ಚಿಂತನೆಯನ್ನು ದೇಶಾದ್ಯಂತ ಹೇರಲಾಗುತ್ತಿದೆ. ಸಂಸ್ಕೃತಿಯ ಹೆಸರಿನಲ್ಲಿ ಈ ರೀತಿಯ ‘ಸಸ್ಯಾಹಾರಿ ಹಿಂಸಾಚಾರ’ವನ್ನು ದೇಶಾದ್ಯಂತ ಹರಡಲಾಗುತ್ತಿದೆ. ಮೇನಕಾಗಾಂಧಿಯವರು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾಗ ಮಧ್ಯಾಹ್ನದೂಟದಲ್ಲಿ ಮಕ್ಕಳಿಗೆ ಮೊಟ್ಟೆಗಳನ್ನು ವಿತರಿಸುವುದನ್ನು ವಿರೋಧಿಸಿದ್ದರು. ಮಧ್ಯಪ್ರದೇಶ ಸರಕಾರವು ಮಧಾಹ್ನದೂಟದಲ್ಲಿ ಮೊಟ್ಟೆ ವಿತರಣೆಯನ್ನು ನಿಲ್ಲಿಸಿತ್ತು. ‘ಸಂಸ್ಕೃತಿ’ಯ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯನ್ನು ಈ ನಾಯಕರು ನಿಲ್ಲಿಸಿರುವುದು ಕಪಟತನದ ತುರೀಯಾವಸ್ಥೆಯಾಗಿದೆ. ಮೇನಕಾಗಾಂಧಿ ಮಾಂಸಾಹಾರದ ಕಟ್ಟಾ ವಿರೋಧಿಯಾಗಿದ್ದಾರೆ. ಆರೋಗ್ಯಕ್ಕಾಗಿ ಪ್ರೊಟೀನ್ ಮೂಲದ ಮಾಂಸಾಹಾರ ಸೇವನೆಯನ್ನು ಬಡ ಹಾಗೂ ಕಡೆಗಣಿಸಲ್ಪಟ್ಟ ಜನರಿಗೆ ನಿರಾಕರಿಸುವ ಈ ಸವರ್ಣೀಯ ಮನಸ್ಥಿತಿಯನ್ನು ಹೊಂದಿರುವ ಅವರು ಮಾಂಸಾಹಾರದ ವಿರುದ್ಧ ಸಾವಿರಾರು ವಾದಗಳನ್ನು ಮಂಡಿಸುತ್ತಾರೆ.
ತಮಿಳುನಾಡು, ಮಧ್ಯಾಹ್ನದೂಟ ಯೋಜನೆಯನ್ನು ಬಹಳಷ್ಟು ವರ್ಷಗಳ ಹಿಂದೆಯೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೊಳಿಸಿದ ರಾಜ್ಯವಾಗಿದೆ. ಸ್ಥಳೀಯ ಸಾಂಸ್ಕೃತಿಕ ಆಹಾರಕ್ರಮಗಳಿಗೆ ಅನುಗುಣವಾಗಿಯೇ ಅಲ್ಲಿ ಮಕ್ಕಳಿಗೆ ಮಧ್ಯಾಹ್ನದೂಟವನ್ನು ನೀಡಲಾಗುತ್ತಿದೆ. ಈ ಯೋಜನೆಯು ಆಗ ಎಷ್ಟು ಜನಪ್ರಿಯವಾಗಿತ್ತೆಂದರೆ, ಶಾಲೆಗೆ ಮಕ್ಕಳು ಬರುವುದನ್ನು ಉತ್ತೇಜಿಸಲು ಹಾಗೂ ದೇಶದಲ್ಲಿರುವ ಅಪೌಷ್ಟಿಕತೆ ಮತ್ತು ಹಸಿವಿನ ವಿರುದ್ಧ ಹೋರಾಡಲು ಕೂಡಾ ಅಖಿಲ ಭಾರತ ಮಟ್ಟದಲ್ಲಿ ಮಧ್ಯಾಹ್ನದೂಟ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವನ್ನು ನೀತಿ ನಿರೂಪಕರು ಮನಗಂಡರು.
ಸಂಸ್ಕೃತಿ ಕುರಿತ ಅಕ್ಷಯಪಾತ್ರದ ದೃಷ್ಟಿಕೋನವು ಅಪಾಯಕಾರಿಯಾದುದಾಗಿದೆ. ಅದು ಆಹಾರದ ಕ್ರಮಗಳನ್ನು ಏಕರೂಪ ಗೊಳಿಸಲು ಪ್ರಯತ್ನಿಸುತ್ತಿದೆ. ಶುಚಿತ್ವ ಹಾಗೂ ‘ಉತ್ತಮ ಆರೋಗ್ಯ’ದ ಹೆಸರಿನಲ್ಲಿ ಸಸ್ಯಾಹಾರಿ ಸಂಸ್ಕೃತಿಯನ್ನು ಅದು ಹೇರು ವುದನ್ನು ಪ್ರಶ್ನಿಸಬೇಕಾಗಿದೆ. ಆದರೆ ಸರಕಾರ ಹಾಗೂ ಅಧಿಕಾರಿಗಳಿಗೆ ಅತ್ಯಂತ ಮುಖ್ಯವಾದ ಪ್ರಶ್ನೆಯೊಂದು ಮುಂದಿದೆ. ಇಂತಹ ಸಂಸ್ಥೆಗಳಿಗೆ ಆಹಾರಕ್ರಮ ಕುರಿತ ಚರ್ಚೆಗಳಲ್ಲಿ ಪ್ರಾಬಲ್ಯತೆ ಸ್ಥಾಪಿಸಲು ಯಾಕೆ ಅವಕಾಶ ನೀಡಬೇಕೆಂಬುದಾಗಿದೆ. ಸರಕಾರವು ಮಧ್ಯಾಹ್ನದೂಟ ಯೋಜನೆಗೆ ದೊಡ್ಡ ಮೊತ್ತದ ನಿಧಿಯನ್ನು ವಿತರಿಸುವಾಗ, ತಾನು ಏನನ್ನು ಬಯಸುತ್ತಿದ್ದೇನೆಂಬುದನ್ನು ಅದು ಸ್ಪಷ್ಟವಾಗಿ ಸೂಚಿಸಬೇಕು. ಆದರೆ ದೊಡ್ಡ ದೊಡ್ಡ ಬಾಬಾಗಳು ಹಾಗೂ ಸ್ವಾಮೀಜಿಗಳ ಮುಂದೆ ಮಂಡಿಯೂರುವ ರಾಜಕಾರಣಿಗಳು ಈ ಎಲ್ಲಾ ವಿಷಯವನ್ನು ತಮ್ಮ ತಲೆಗೆ ಹಾಕಿಕೊಳ್ಳಲಾರರು. ದೊಡ್ಡ ಸಂಖ್ಯೆಯ ಬಾಬಾಗಳು ಹಾಗೂ ಸ್ವಾಮೀಜಿಗಳು, ಮಾಂಸಾಹಾರ ಸೇವನೆಯು ಜೀವನಕ್ರಮವೆಂಬುದನ್ನು ಯಾವತ್ತೂ ಸೂಚಿಸಲಾರರು.
ಅಕ್ಷಯಪಾತ್ರೆ ಹಾಗೂ ಅದರ ಬೆಂಬಲಿಗರು, ತಾವು ಜನರಿಗಾಗಿ ಕೇವಲ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೇವೆಂದು ಎದೆತಟ್ಟಿಕೊಂಡು ಹೇಳಬಹುದು. ದೊಡ್ಡ ಸಂಖ್ಯೆಯ ಇಸ್ಕಾನ್ ಅನುಯಾಯಿಗಳು ಹಣವನ್ನು ದೇಣಿಗೆ ನೀಡುತ್ತಿದ್ದಾರೆಂಬುದನ್ನು ನಾವು ಅರಿತುಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ಅವರು ಖಂಡಿತವಾಗಿಯೂ ಜಗತ್ತಿನಾದ್ಯಂತ ದೇಣಿಗೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮಕ್ಕಳಿಗೆ ರುಚಿಯಿರದ ಸಸ್ಯಾಹಾರವನ್ನು ಒದಗಿಸಲು ದಾನಿಗಳು ಒತ್ತಡ ಹೇರುವುದಿಲ್ಲವೆಂಬ ಭರವಸೆಯನ್ನು ಹೊಂದಿದ್ದೇವೆ. ಒಂದು ವೇಳೆ ವ್ಯಕ್ತಿಗತ ಅಥವಾ ಕಾರ್ಪೊರೇಟ್ ದಾನಿಗಳು ಶಾಲಾಮಕ್ಕಳಿಗೆ ಸಸ್ಯಾಹಾರವನ್ನು ಒದಗಿಸಲು ಹಣವನ್ನು ದೇಣಿಗೆ ನೀಡಿದರೂ ಕೂಡಾ, ಈ ಯೋಜನೆಯ ಅತಿ ದೊಡ್ಡ ದಾನಿಯಾದ ರಾಜ್ಯ ಸರಕಾರವು ಮಕ್ಕಳಿಗೆ ನೀಡುವ ಆಹಾರವು ಸಸ್ಯಾಹಾರವೇ ಆಗಿರಬೇಕೆಂದು ಸೂಚಿಸಿಲ್ಲ. ಒಂದು ವೇಳೆ ಮಕ್ಕಳಿಗೆ ನೀಡುವ ಮಧ್ಯಾಹ್ನದೂಟದಲ್ಲಿ ಯಾವುದೇ ರೀತಿಯ ಪೂರ್ವಶರತ್ತನ್ನು ವಿಧಿಸುವುದನ್ನು ಕರ್ನಾಟಕ ಸರಕಾರವು ತಿರಸ್ಕರಿಸಬೇಕಾಗಿದೆ. ಕೇವಲ ಸಸ್ಯಾಹಾರ ಮಾತ್ರವೇ ಸ್ವಾದಿಷ್ಟ ಹಾಗೂ ಆರೋಗ್ಯಕರವೆಂಬುದಾಗಿ ಸೂಚಿಸುವುದು ಊಟದ ಬಟ್ಟಲಿನಲ್ಲಿ ಜಾತಿಯನ್ನು ಇರಿಸುವುದಲ್ಲದೆ ಬೇರೇನೂ ಅಲ್ಲ. ಭಾರತವು ಪ್ರಬುದ್ಧವಾಗಿ ಬೆಳೆಯಬೇಕು ಹಾಗೂ ಆಹಾರ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸಬೇಕಾಗಿದೆ. ಕೇವಲ ಯಾರೋ ಒಬ್ಬರು ಇಂಗ್ಲಿಷ್ ಮಾತನಾಡುತ್ತಾರೆ ಹಾಗೂ ವ್ಯಾಪಕವಾದ ಅಂತರ್‌ರಾಷ್ಟ್ರೀಯ ಬೆಂಬಲ ಹೊಂದಿದ್ದಾರೆಂಬ ಕಾರಣಕ್ಕಾಗಿ ಶುಚಿಯಾದ ಹಾಗೂ ಆರೋಗ್ಯಕರ ಆಹಾರವನ್ನು ಒದಗಿಸುವ ಹೆಸರಿನಲ್ಲಿ ಮುಗ್ಧ ಮಕ್ಕಳ ಮೇಲೆ ತನ್ನ ಸಾಂಸ್ಕೃತಿಕ ರಿವಾಜುಗಳನ್ನು ಹೇರಲು ಅವರಿಗೆ ಯಾವುದೇ ಹಕ್ಕಿಲ್ಲ. ಈ ನಡೆಯ ಬಗ್ಗೆ ಕೂಲಂಕಶ ತನಿಖೆೆಯಾಗಬೇಕಿದೆ ಹಾಗೂ ಅದನ್ನು ತಿರಸ್ಕರಿಸಬೇಕಾಗಿದೆ.
ಕೃಪೆ: sabrangindia.in

Writer - ವಿದ್ಯಾಭೂಷಣ್ ರಾವತ್

contributor

Editor - ವಿದ್ಯಾಭೂಷಣ್ ರಾವತ್

contributor

Similar News

ಜಗದಗಲ
ಜಗ ದಗಲ