ಮುಂಗಾರು ವಿಳಂಬ: ಬರಗಾಲದ ಪರಿಸ್ಥಿತಿ ಉಲ್ಬಣ

Update: 2019-06-16 18:54 GMT

ಕರ್ನಾಟಕ ಕಳೆದ ಕೆಲ ವರ್ಷಗಳಿಂದ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಲೆ ಇದೆ. ಒಂದು ವರ್ಷ ಜೂನ್‌ನಲ್ಲಿ ಚೆನ್ನಾಗಿ ಮಳೆ ಬಂದರೆ ಮರುವರ್ಷ ಜುಲೈ ಕೊನೆಯಲ್ಲೂ ಮಳೆಯಾಗುವುದಿಲ್ಲ. ಈ ಬಾರಿಯೂ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆ ಅಭಾವ ಎದ್ದು ಕಾಣುತ್ತಿದೆ, ಅಂತಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶನಿವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಬರಗಾಲದ ಪರಿಸ್ಥಿತಿ ಬಗ್ಗೆ ವಿವರಿಸಿ ವಿಶೇಷ ನೆರವನ್ನು ಕೋರಿದ್ದಾರೆ

ಕರ್ನಾಟಕ ಮಾತ್ರವಲ್ಲ ದೇಶದ ಶೇ.58 ರಷ್ಟು ಪ್ರದೇಶದಲ್ಲಿ ಬರಗಾಲದ ಕರಾಳ ಛಾಯೆ ಕವಿದಿದೆ. ಈ ವರ್ಷ ಬರಗಾಲದ ತೀವ್ರತೆ ಎಷ್ಟಿದೆ ಅಂದರೆ ಮಹಾರಾಷ್ಟ್ರದಲ್ಲಿ ಹನ್ನೊಂದು ಆಣೆಕಟ್ಟುಗಳ ಜಲಾಶಯಗಳು ಒಣಗಿ ಹೋಗಿವೆ. ಕರ್ನಾಟಕದ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ, ತುಂಗಭದ್ರಾ, ಸೇರಿದಂತೆ ಬಹುತೇಕ ಅಣೆಕಟ್ಟೆಗಳು ಬರಿದಾಗಿವೆ. ರಾಜ್ಯದ ಶೇ. 88.6 ರಷ್ಟು ಪ್ರದೇಶ ಬರಪೀಡಿತವಾಗಿದೆ ಎಂದು ಅಧ್ಯಯನದಿಂದ ಖಚಿತವಾಗಿದೆ.

ಕರ್ನಾಟಕದ ಮೂವತ್ತು ಜಿಲ್ಲೆಗಳ ಪೈಕಿ 25 ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ತೀವ್ರವಾಗಿದೆ. 136 ತಾಲೂಕುಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಅನೇಕ ಕಡೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲು ಸರಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಎದುರಿಸಲು ಮುಖ್ಯಮಂತ್ರಿಗಳು ಮಾಡಿದ ಮನವಿಗೆ ಪ್ರಧಾನ ಮಂತ್ರಿಗಳು ಸ್ಪಂದಿಸಬೇಕಾಗಿದೆ. ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಯ 1,500 ಕೋಟಿ ರೂ.ಯನ್ನು ಬಾಕಿ ಉಳಿಸಿಕೊಂಡಿದೆ. ಅದನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕುಮಾರಸ್ವಾಮಿ ಅವರು ಮಾಡಿಕೊಂಡ ಮನವಿ ಸೂಕ್ತವಾಗಿದೆ.

ಈ ಸಲದ ಬೇಸಿಗೆ ಎಷ್ಟು ತೀವ್ರವಾಗಿದೆ ಅಂದರೆ ನದಿ, ಜಲಾಶಯ, ಕೆರೆ, ಬಾವಿ, ಹಳ್ಳ ಕೊಳ್ಳಗಳು ಬರಿದಾಗಿ ತಾಪಮಾನವು ಜೂನ್ ತಿಂಗಳ ಬಂದರೂ ಕಡಿಮೆಯಾಗಿಲ್ಲ. ನಾಡಿನ ಪಪ್ಪುಸದಂತಿರುವ ಮಲೆನಾಡಿನಲ್ಲೂ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕಾಡಿನಲ್ಲಿ ನೀರಿಲ್ಲದೆ ವನ್ಯಪ್ರಾಣಿಗಳು ವಿಲಿ ವಿಲಿ ಒದ್ದಾಡಿ ಸಾಯುತ್ತಿವೆ. ಅಸಹಾಯಕ ಸರಕಾರ ಮಳೆಗಾಗಿ ಹೋಮ ಪೂಜೆಗಳ ಮೊರೆ ಹೋಗಿದೆ. ಜನ ಕಪ್ಪೆಗಳ ಮದುವೆ ಮಾಡಿಸುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಬರಗಾಲ ಕರ್ನಾಟಕವನ್ನು ಬೆಂಬತ್ತಿ ಕಾಡುತ್ತಿದೆ. ಈ ವರ್ಷವೂ ಮುಂಗಾರು ಮಳೆ ನಿರೀಕ್ಷಿಸಿದ ಪ್ರಮಾಣದಲ್ಲಿ ಬರುವ ಸಂಭವವಿಲ್ಲ. ಅಂತಲೇ ಸರಕಾರ 91 ಕೋಟಿ ರೂಪಾಯಿ ಖರ್ಚುಮಾಡಿ ಮೋಡ ಬಿತ್ತನೆ ಮಾಡಲು ಹೊರಟಿದೆ. ಆದರೆ ಇದು ತಾತ್ಕಾಲಿಕ ಸಮಾಧಾನ ಮಾತ್ರ. ಮಳೆಯನ್ನು ತರುವ ನೈಸರ್ಗಿಕ ಜಲಚಕ್ರ ವ್ಯವಸ್ಥೆಯೇ ನಾಶವಾಗಿ ಹೋಗುತ್ತಿರುವಾಗ ಮೋಡ ಬಿತ್ತನೆಯಂಥ ಕೃತಕ ವಿಧಾನಕ್ಕೆ ಮೊರೆ ಹೋಗುವುದರಿಂದ ಪ್ರಯೋಜನವಿಲ್ಲ. ಅರಣ್ಯ ನಾಶಕ್ಕೆ ಅವಕಾಶ ನೀಡಿ, ನಗರಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಗಿಡ ಮರಗಳನ್ನು ಕಡಿದು, ಕೆರೆಗಳನ್ನು ನಾಶ ಮಾಡಿ ಬಡಾವಣೆಗಳನ್ನು ನಿರ್ಮಿಸಿ ಮಳೆಗಾಗಿ ಹೋಮಗಳನ್ನು ಮಾಡಿದರೆ, ಮೋಡ ಬಿತ್ತನೆ ಮಾಡಿದರೆ ಏನು ಪ್ರಯೋಜನ?

ರಾಜ್ಯದ ಸುಮಾರು ನೂರು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪಿದೆ. ಮಳೆಯ ಅಭಾವದಿಂದಾಗಿ ಅಂತರ್ಜಲದ ಮೇಲಿನ ಅವಲಂಬನೆ ಹೆಚ್ಚಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಿತವಾಗಿ ಉಪಯೋಗಿಸಬೇಕಾದ ಅಂತರ್ಜಲ ಬೇಕಾಬಿಟ್ಟಿ ಬಳಸುವ ಪ್ರವೃತ್ತಿ ಹೆಚ್ಚಾಗಿದೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಭೂ ಮಾಫಿಯಾ, ಮೈನಿಂಗ್ ಮಾಫಿಯಾದಂತೆ ವಾಟರ್ ಮಾಫಿಯಾವೊಂದು ತಲೆ ಎತ್ತಿದೆ. ನೀರನ್ನು ಮಾರಿ ಲಾಭ ಮಾಡಿಕೊಳ್ಳುವ ಈ ಮಾಫಿಯಾದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ.

ನೀರಿನ ಅಭಾವಕ್ಕೆ ಬರಗಾಲವೊಂದೇ ಕಾರಣವಲ್ಲ. ಇಂಥ ಬರಗಾಲದಲ್ಲೂ ಹಣವಿದ್ದವರಿಗೆ ನೀರು ಧಾರಾಳವಾಗಿ ಸಿಗುತ್ತದೆ. ಲಕ್ಷಾಂತರ ಲೀಟರ್ ನೀರು ಕೈಗಾರಿಕೆಗಳಿಗೆ ಹರಿದು ಹೋಗುತ್ತದೆ. ಜೊತೆಗೆ ರೈತರು ಕಬ್ಬು ಮುಂತಾದ ಹೆಚ್ಚು ನೀರು ಬೇಡುವ ಬೆಳೆಗಳನ್ನು ಬೆಳೆಯುತ್ತಾರೆ. ಇದರಿಂದಾಗಿ ಭೂಮಿಯ ಒಡಲು ಬರಿದಾಗುತ್ತಿದೆ.ಮನಬಂದಂತೆ ಕೊಳವೆ ಬಾವಿಗಳನ್ನು ಕೊರೆಯಲು ಸರಕಾರ ಅವಕಾಶ ನೀಡಬಾರದು.

ಈಗ ಕರಾವಳಿ ಭಾಗದಲ್ಲಿ ಮಳೆ ಬೀಳುತ್ತಿದೆ. ಆದರೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗಗಳಲ್ಲಿ ಜೂನ್ ಎರಡನೇ ವಾರ ದಾಟಿದರೂ ಮಳೆಯ ಮುನ್ಸೂಚನೆ ಕಾಣುತ್ತಿಲ್ಲ. ಹೈದರಾಬಾದ್ ಕರ್ನಾಟಕದಲ್ಲಿ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಗಿದೆಯೆಂದರೆ ದನ ಕರುಗಳನ್ನು ಸಾಕಲಾಗದೆ ರೈತರು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರವೊಂದೇ ಬರ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರವೂ ನೆರವಿಗೆ ಬರಬೇಕು. ರಾಜ್ಯದ ಬಿಜೆಪಿ ನಾಯಕರು ಪ್ರಧಾನಮಂತ್ರಿ ಮೋದಿಯವರ ಮೇಲೆ ಒತ್ತಡ ತಂದು ಹೆಚ್ಚಿನ ಪ್ರಮಾಣದಲ್ಲಿ ಬರಪರಿಹಾರ ರಾಜ್ಯಕ್ಕೆ ಬರುವಂತೆ ನೋಡಿಕೊಳ್ಳಬೇಕು. ಬರಗಾಲದಂಥ ನೈಸರ್ಗಿಕ ಪ್ರಕೋಪದ ಸನ್ನಿವೇಶದಲ್ಲಿ ಪಕ್ಷ ರಾಜಕೀಯ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಬಾರದು.

ಬರಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರುದ್ಯೋಗಿಗಳಗೆ ಕೆಲಸ ಕೊಡಬೇಕು. ರಾಜ್ಯದ ಯಾವ ಹಳ್ಳಿಯಲ್ಲೂ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಬರ ಪರಿಹಾರ ಕಾಮಗಾರಿ ಹೊಣೆಯನ್ನು ಅಧಿಕಾರಿಗಳಿಗೆ ವಹಿಸಿದರೆ ಸಾಲದು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜನ ಪ್ರತಿನಿಧಿಗಳು ಗ್ರಾಮೀಣ ಪ್ರದೇಶಕ್ಕೆ ಹೋಗಿ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಳ್ಳಬೇಕು. ಮುಖ್ಯ ಮಂತ್ರಿಗಳು ಮಾತ್ರವಲ್ಲ ಎಲ್ಲ ಸಚಿವರೂ ಗ್ರಾಮ ವಾಸ್ತವ್ಯ ಮಾಡಿ ಬರಪೀಡಿತ ಜನರಲ್ಲಿ ಭರವಸೆಯನ್ನು ತುಂಬಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News