ಹಾಕಿ ಸಿರೀಸ್ ಫೈನಲ್ಸ್ ಟೂರ್ನಿ: ಭಾರತಕ್ಕೆ ಪ್ರಶಸ್ತಿ

Update: 2019-06-16 18:57 GMT

ಭುವನೇಶ್ವರ, ಜೂ.16: ಹಾಕಿ ಸಿರೀಸ್ ಫೈನಲ್ಸ್‌ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 5-1 ಅಂತರದಿಂದ ಮಣಿಸಿದ ಭಾರತ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಮಾತ್ರವಲ್ಲ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಭಾರತದ ಪರ ಹರ್ಮನ್‌ಪ್ರೀತ್ ಸಿಂಗ್ ಹಾಗೂ ವರುಣ್ ಕುಮಾರ್ ತಲಾ ಎರಡು ಗೋಲುಗಳನ್ನು ಬಾರಿಸಿದರೆ, ವಿವೇಕ್ ಪ್ರಸಾದ್ ಒಂದು ಗೋಲು ಹೊಡೆದರು. ದಕ್ಷಿಣ ಆಫ್ರಿಕದ ಪರ ರಿಚರ್ಡ್ ಪೌಟ್ಜ್ ಏಕೈಕ ಗೋಲು ಗಳಿಸಿದರು.

ಕಳಿಂಗ ಸ್ಟೇಡಿಯಂನಲ್ಲಿ 12,000 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಫೈನಲ್‌ನಲ್ಲಿ ಭಾರತ ತನಗೆ ಲಭಿಸಿದ್ದ ಐದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಮೂರನ್ನು ಗೋಲಾಗಿ ಪರಿವರ್ತಿಸಲು ಯಶಸ್ವಿಯಾಗಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಜಪಾನ್ ತಂಡ ಅಮೆರಿಕವನ್ನು 4-2 ಅಂತರದಿಂದ ರೋಚಕವಾಗಿ ಮಣಿಸಿ ಕಂಚಿನ ಪದಕ ಜಯಿಸಿದೆ. ಮನ್‌ಪ್ರೀತ್ ಸಿಂಗ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರೆ, ವಿವೇಕ್ ಪ್ರಸಾದ್ ಶ್ರೇಷ್ಠ ಜೂನಿಯರ್ ಆಟಗಾರ, ಜೋನಾಥನ್ ಕ್ಲಾಗೆಸ್(ಅಮೆರಿಕ)ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿಗೆ ಭಾಜನರಾದರು.

ಹರ್ಮನ್‌ಪ್ರೀತ್ ಸಿಂಗ್(ಭಾರತ), ವರುಣ್ ಕುಮಾರ್(ಭಾರತ) ಹಾಗೂ ಸಿಮೆನ್ ಮಟ್ಕೊವ್‌ಸ್ಕಿ(ರಶ್ಯ)ತಲಾ ಆರು ಗೋಲುಗಳನ್ನು ಗಳಿಸಿ ಅಗ್ರ ಸ್ಕೋರರ್‌ಗಳೆನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News