ಆಗ ಪಾಕ್ ಜೊತೆ ಆಡಬಾರದು ಎಂದ ಗಂಭೀರ್ ಈಗ ಭಾರತ- ಪಾಕ್ ಪಂದ್ಯಕ್ಕೆ ವೀಕ್ಷಕ ವಿವರಣೆಗಾರ !

Update: 2019-06-17 03:52 GMT

ಹೊಸದಿಲ್ಲಿ: ವಿಶ್ವಕಪ್‌ನಲ್ಲಿ ಭಾರತ- ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಏಕಪಕ್ಷೀಯವಾಗಿ ಕೊನೆಗೊಂಡಿದೆ. ಪಂದ್ಯ ಮುಗಿದರೂ ನೆರೆರಾಷ್ಟ್ರಗಳ ನಡುವಿನ ಪಂದ್ಯದ ಬಗೆಗಿನ ಚರ್ಚೆಗಳು ಮಾತ್ರ ಮುಂದುವರಿದಿವೆ.

ಅಂಥ ಕುತೂಹಲಕರ ಚರ್ಚೆಗೆ ಗ್ರಾಸವಾದವರು ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್.

ವಿಶ್ವಕಪ್‌ನಲ್ಲಿ ಪಾಕ್ ಜತೆಗಿನ ಪಂದ್ಯ ಆಡಲೇಬಾರದು ಎಂದು ಹಿಂದೆ ಹೇಳಿಕೆ ನೀಡಿದ್ದ ಗಂಭೀರ್, ಸ್ಟಾರ್ ಸ್ಪೋರ್ಟ್ಸ್‌ಗೆ ವೀಕ್ಷಕ ವಿವರಣೆಗಾರರಾಗಿದ್ದ ಬಗ್ಗೆ ಹಲವು ಮಂದಿ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗಂಭೀರ್ ದ್ವಂದ್ವದ ಬಗ್ಗೆ ಕಾಲೆಳೆದಿದ್ದಾರೆ.

ಮಾಜಿ ಕ್ರಿಕೆಟಿಗ ಪುಲ್ವಾಮಾ ಉಗ್ರರ ದಾಳಿ ಬಳಿಕ, ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಬಾರದು ಎಂದು ವಾದಿಸಿದ್ದರು. ಸ್ಪೋರ್ಟ್ಸ್‌ ಸ್ಟಾರ್ ಜತೆ ಮಾತನಾಡಿದ ಅವರು, "ಅವರ ಜತೆ ಎಲ್ಲೂ ಆಡಬಾರದು ಅಥವಾ ಅವರಿಗೆ ದ್ವಾರ ತೆರೆಯಬಾರದು. ಪುಲ್ವಾಮಾ ಘಟನೆಯನ್ನು ಯಾರೂ ಒಪ್ಪಿಕೊಳ್ಳಲಾಗದು.." ಎಂದು ಹೇಳಿದ್ದರು. ಇದಾದ ಮೂರು ದಿನಗಳಲ್ಲಿ ಅವರು ಬಿಜೆಪಿ ಸೇರಿದ್ದರು. ಪಕ್ಷ ಅವರನ್ನು ಪೂರ್ವದೆಹಲಿ ಕ್ಷೇತ್ರದಿಂದ ಲೋಕಸಭೆ ಕಣಕ್ಕೆ ಇಳಿಸಿತ್ತು.

ನೀವು ವಿರೋಧಿಸಿದ ಪಂದ್ಯಕ್ಕೆ ವೀಕ್ಷಕ ವಿವರಣೆ ನೀಡಿ ಹಣ ಪಡೆಯುತ್ತಿದ್ದೀರಾ ? ಎಂದು ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಈ ಪಂದ್ಯವನ್ನು ಬಹಿಷ್ಕರಿಸುವುದಿಲ್ಲವೇ ? ನಿಲ್ಲಿ; ನೀವು ವೀಕ್ಷಕ ವಿವರಣಕಾರರ ತಂಡದಿಂದಲೂ ಹೊರ ನಡೆಯುವುದಿಲ್ಲವೇ ? ಅಭಿನಂದನೆಗಳು; ನೀವು ಯಶಸ್ವಿಯಾಗಿ ರಾಜಕಾರಣಿ ವೃತ್ತಿಗೆ ತಿರುಗಿದ್ದೀರಿ ಎಂದು ಮತ್ತೊಬ್ಬರು ಚುಚ್ಚಿದ್ದಾರೆ.

ವೈಯಕ್ತಿಕ ಲಾಭಕ್ಕಾಗಿ ರಾಷ್ಟ್ರೀಯತೆಯನ್ನು ಬಳಸಿಕೊಂಡಿದ್ದೀರಿ ಎಂದು ಲೇವಡಿ ಮಾಡಿದ್ದಾರೆ. ರಾಷ್ಟ್ರೀಯತೆಗಾಗಿ ವಿಶ್ವಕಪ್‌ನ ಎರಡು ಅಂಕ ಕಳೆದುಕೊಳ್ಳುವುದು ದೊಡ್ಡದಲ್ಲ ಎಂದು ಹೇಳಿಕೆ ನೀಡಿದ್ದೀರಿ. ಪಂದ್ಯಕ್ಕೆ ಸಂಬಂಧಿಸಿದ ಎಲ್ಲವನ್ನೂ ಏಕೆ ಬಹಿಷ್ಕರಿಸುತ್ತಿಲ್ಲ ? ರಾಷ್ಟ್ರೀಯತೆ ಅಷ್ಟೊಂದು ಅನುಕೂಲಸಿಂಧುವೇ ? ಇಂದೇಕೆ ವೀಕ್ಷಕ ವಿವರಣೆ ನೀಡುತ್ತಿದ್ದೀರಿ ? ಎಂದು ಪ್ರಶ್ನಿಸಿದ್ದಾರೆ.

ಅವರನ್ನು ನಾನು ಹಣ ಠಂಕಿಸುವ ಭಾರತ- ಪಾಕ್ ಪಂದ್ಯದ ಭಾಗವಾಗಿ ನೋಡುತ್ತೇನೆ. ವೈಯಕ್ತಿಕ ಲಾಭಕ್ಕಾಗಿ ಸಮಾಜದಲ್ಲಿ ದ್ವೇಷದ ವಿಷ ಬಿತ್ತಿದ್ದೀರಿ ಎಂದು ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News