ಮೆದುಳಿನ ಉರಿಯೂತ: ಒಂದೇ ದಿನದಲ್ಲಿ 20 ಮಕ್ಕಳು ಬಲಿ

Update: 2019-06-17 04:06 GMT

ಪಾಟ್ನಾ: ಬಿಹಾರದಲ್ಲಿ ಒಂದೇ ದಿನ 20 ಮಕ್ಕಳು ಮೆದುಳಿನ ಉರಿಯೂತಕ್ಕೆ ಬಲಿಯಾಗಿದ್ದು, ಮುಜಾಫರ್‌ಪುರ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ಮಾರಕ ರೋಗಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 93 ಆಗಿದೆ.

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ರವಿವಾರ ಮುಜಾಫರ್‌ ಪುರದ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ಮಾರಕ ರೋಗ ಹರಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಮತ್ತು ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆ ಜತೆಗಿದ್ದರು. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಜತೆ ಮತ್ತು ಎಸ್‌ಕೆಎಂಸಿಎಚ್ ವೈದ್ಯರ ಜತೆ ಉನ್ನತಮಟ್ಟದ ಸಭೆ ನಡೆಸಿದರು.

ಐದು ವರ್ಷದ ಮಗನನ್ನು ಕಳೆದುಕೊಂಡ ತಾಯಿಯೊಬ್ಬರು ಸಚಿವರ ಬಳಿ ದುಃಖ ತೋಡಿಕೊಂಡರು. ಸಚಿವರ ನಾಲ್ಕು ಗಂಟೆಯ ಭೇಟಿ ಅವಧಿಯಲ್ಲೇ ಮೂವರು ಮಕ್ಕಳು ಮೃತಪಟ್ಟಿರುವುದು ಸಚಿವರೂ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ದಂಗುಬಡಿಸಿತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು. ಬಳಿಕ ಸಚಿವರು ದೆಹಲಿಗೆ ತೆರಳುವ ಮುನ್ನ ಪಾಟ್ನಾದಲ್ಲಿ ಪರಾಮರ್ಶನಾ ಸಭೆ ನಡೆಸಿದರು.

ಎಸ್‌ಕೆಎಂಸಿಎಚ್‌ನಲ್ಲಿ 76 ಮಕ್ಕಳು ಮೃತಪಟ್ಟಿದ್ದರೆ, ಕೇಜ್ರಿವಾಲ್ ಮತ್ರಿಸದನದಲ್ಲಿ 17 ಮಕ್ಕಳು ಅಸುನೀಗಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ 115 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News