ಭಾರತದ ಗೆಲುವಿನ ಸಂಭ್ರಮಾಚರಣೆ ನಡೆಸಿದ ದಲಿತ ವ್ಯಕ್ತಿಯ ಸಜೀವ ದಹನ
Update: 2019-06-17 22:54 IST
ಲಕ್ನೋ, ಜೂ.17: ಇಂಗ್ಲೆಂಡಿನಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ರವಿವಾರ ನಡೆದ ಪಂದ್ಯದಲ್ಲಿ ಭಾರತ ಗೆದ್ದ ಬಳಿಕ ಸಂಭ್ರಮಾಚರಿಸಿದ್ದ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರಪ್ರದೇಶದ ರಾಂಪುರ ಬೇಲಾ ಗ್ರಾಮದಲ್ಲಿ ನಡೆದಿದೆ.
ಭಾರತ-ಪಾಕ್ ಮಧ್ಯೆ ರವಿವಾರ ರಾತ್ರಿ ನಡೆದ ಪಂದ್ಯವನ್ನು ವೀಕ್ಷಿಸಿದ್ದ ವಿನಯ್ ಪ್ರಕಾಶ್ ಎಂಬಾತ ಬಳಿಕ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ. ಈ ವೇಳೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಬಳಿಕ ಈತ ಮನೆಗೆ ತೆರಳಿದ್ದಾನೆ.
ಸೋಮವಾರ ಬೆಳಿಗ್ಗೆ ಈತ ಮನೆ ಬೆಂಕಿಗೆ ಆಹುತಿಯಾಗಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದೆ. ವಿನಯ್ ಪ್ರಕಾಶ್‌ನ ಮೃತದೇಹ ಗುರುತು ಸಿಗದಂತೆ ಬೆಂಕಿಯಲ್ಲಿ ಬೆಂದಿದೆ. ಘಟನೆಗೆ ರವಿವಾರ ರಾತ್ರಿ ನಡೆದ ಘಟನೆಯೇ ಕಾರಣ ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯದ ಎಸ್ಸಿ/ಎಸ್ಟಿ ಆಯೋಗ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದೆ.