ಪ್ರಧಾನಿ ಮೋದಿ ಸಹಿತ ನೂತನ ಸಂಸದರ ಪ್ರಮಾಣವಚನ

Update: 2019-06-17 18:42 GMT

ಹೊಸದಿಲ್ಲಿ, ಜೂ.17: ಸೋಮವಾರ 17ನೇ ಲೋಕಸಭೆಯ ಸದಸ್ಯರಾಗಿ ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸುವಾಗ ಬಿಜೆಪಿ ಸಂಸದರು ‘ಮೋದಿ, ಮೋದಿ’ ಎಂಬ ಹರ್ಷೋದ್ಗಾರದಿಂದ ಸಂಭ್ರಮಿಸಿದರು. ಸಾರ್ವತ್ರಿಕ ಚುನಾವಣೆಯ ನಂತರದ ಸಂಸತ್ತಿನ ಪ್ರಪ್ರಥಮ ಅಧಿವೇಶನ ಸೋಮವಾರ ಆರಂಭಗೊಂಡಿದ್ದು ನೂತನ ಸಂಸದ್ ಸದಸ್ಯರು ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮೃತಿ ಇರಾನಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಪ್ರಮುಖರಾಗಿದ್ದಾರೆ.

 ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸೋಲಿಸಿರುವ ಸ್ಮೃತಿ ಇರಾನಿ ಪ್ರಮಾಣ ವಚನ ಸ್ವೀಕರಿಸುವಾಗ ಭಾರೀ ಕರತಾಡನ ಕೇಳಿ ಬಂದಿತು. ಪ್ರಧಾನಿ ಮೋದಿ, ರಾಜನಾಥ್ ಸಿಂಗ್ ಡೆಸ್ಕ್ ಬಡಿದು ಸ್ವಾಗತಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ಮೃತಿ ಇರಾನಿ ಹಂಗಾಮಿ ಸ್ಪೀಕರ್ ವೀರೇಂದ್ರ ಕುಮಾರ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬಳಿ ಹೋಗಿ ಅವರನ್ನು ಅಭಿನಂದಿಸಿದರು. ಇದಕ್ಕೆ ಪ್ರತಿಯಾಗಿ ಸೋನಿಯಾ ಕೈಮುಗಿದರು. ತ್ರಿವಳಿ ತಲಾಖ್ ಪದ್ಧತಿ ನಿಷೇಧಿಸುವ ಮಸೂದೆ ಸೇರಿದಂತೆ ಹಲವು ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News