ಇಂಗ್ಲೆಂಡ್‌ಗೆ ಅಫ್ಘಾನಿಸ್ತಾನ ಎದುರಾಳಿ

Update: 2019-06-17 18:58 GMT

 ಮಾಂಚೆಸ್ಟರ್, ಜೂ.17: ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಕನಸು ಕಾಣುತ್ತಿರುವ ಆತಿಥೇಯ ಇಂಗ್ಲೆಂಡ್ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ಇಂಗ್ಲೆಂಡ್‌ನ ಕೆಲವು ಆಟಗಾರರು ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ನಾಯಕ ಇಯಾನ್ ಮೊರ್ಗನ್ ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬೆನ್ನು ನೋವಿನ ಕಾರಣದಿಂದಾಗಿ ಕ್ರೀಡಾಂಗಣದಿಂದ ಹೊರ ನಡೆದಿದ್ದರು.

 ಆರಂಭಿಕ ದಾಂಡಿಗ ಜೇಸನ್ ರಾಯ್ ಮಂಡಿರಜ್ಜು ಗಾಯದ ಸಮಸ್ಯೆಯಿಂದಾಗಿ ಅದೇ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದರು. ಮುಂದಿನ ಎರಡು ಪಂದ್ಯಗಳಿಗೆ ಅವರು ಅಲಭ್ಯ. ಆದರೆ ಮೊರ್ಗನ್ ಆಡುವುದನ್ನು ನಿರೀಕ್ಷಿಸಲಾಗಿದೆ.

ಒಂದು ವೇಳೆ ಮೊರ್ಗನ್ ಫಿಟ್ನೆಸ್ ಸಮಸ್ಯೆಯಿಂದ ಹೊರಬರದಿದ್ದರೆ ಉಪನಾಯಕ ಜೋಸ್ ಬಟ್ಲರ್ ನಾಯಕರಾಗಿ ತಂಡವನ್ನು ಮುನ್ನಡೆಸುವರು. ಅಂತಿಮ ಹನ್ನೊಂದರ ಬಳಗದಲ್ಲಿ ಅವಕಾಶಕ್ಕಾಗಿ ಟಾಮ್ ಕುರ್ರನ್ ಹಾಗೂ ಮೊಯಿನ್ ಅಲಿ ಎದುರು ನೋಡುತ್ತಿದ್ದಾರೆ.

      ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದ ಬಳಿಕ ಇಂಗ್ಲೆಂಡ್ ತನ್ನ ದೌರ್ಬಲ್ಯವನ್ನು ಸರಿಪಡಿಸಿಕೊಂಡಿದೆ. ಗೆಲುವಿನ ಹಳಿಗೆ ಮರಳಿದೆ. ಅಫ್ಘಾನಿಸ್ತಾನ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಆಡುತ್ತಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಈ ತನಕ ಒಂದು ಪಂದ್ಯದಲ್ಲೂ ಗೆಲ್ಲಲು ಸಾಧ್ಯವಾಗಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲೂ ಸೋಲು ಅನುಭವಿಸಿದೆ. ದಕ್ಷಿಣ ಆಫ್ರಿಕ ವಿರುದ್ಧ ಅಫ್ಘಾನಿಸ್ತಾನದ ಆರಂಭಿಕ ದಾಂಡಿಗರಾದ ಹಝ್ರತುಲ್ಲಾ ಝಝಾಯಿ ಮತ್ತು ನೂರ್ ಅಲಿ ಝರ್ದಾನ್ ಆರಂಭದಲ್ಲಿ ಚೆನ್ನಾಗಿ ಆಡಿದ್ದರು. ಬಳಿಕ ತಂಡದ ಬ್ಯಾಟಿಂಗ್ ಸೊರಗಿತ್ತು. ಶ್ರೀಲಂಕಾ ವಿರುದ್ಧ ಮಳೆಬಾಧಿತ ಪಂದ್ಯದಲ್ಲಿ 34 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಆಲ್‌ರೌಂಡರ್ ರಶೀದ್ ಖಾನ್ ಚೆನ್ನಾಗಿ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News