ಇತಿಹಾಸ ಸೇರಿದ ಈಜಿಪ್ಟ್‌ನ ಪ್ರಪ್ರಥಮ ಪ್ರಜಾತಾಂತ್ರಿಕ ಚುನಾಯಿತ ಅಧ್ಯಕ್ಷ

Update: 2019-06-18 04:06 GMT

ಕೈರೋ, ಜೂ.18: ಮುಹಮ್ಮದ್ ಮುರ್ಸಿ ಈಜಿಪ್ಟ್ ನ ಮೊದಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿದ್ದ ಅಧ್ಯಕ್ಷರಾಗಿದ್ದರೂ ಕೇವಲ ಒಂದು ವರ್ಷ ಅಧಿಕಾರದಲ್ಲಿದ್ದರು. 2013, ಜು.3ರಂದು ಸೇನೆಯು ಅವರನ್ನು ಪದಚ್ಯುತಗೊಳಿಸಿತ್ತು.

ಹಲವಾರು ದಿನಗಳ ಸಾಮೂಹಿಕ ಸರಕಾರ ವಿರೋಧಿ ಪ್ರತಿಭಟನೆಗಳು ಮತ್ತು 2011ರಲ್ಲಿ ಹುಸ್ನಿ ಮುಬಾರಕ್ ಅವರು ಅಧಿಕಾರ ಕಳೆದುಕೊಂಡಾಗಿನಿಂದ ಈಜಿಪ್ಟ್‌ನ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವಂತೆ ಸೇನೆಯ ಜನರಲ್‌ಗಳ ಎಚ್ಚರಿಕೆಯನ್ನು ಮುರ್ಸಿ ತಿರಸ್ಕರಿ ಸಿದ ಬಳಿಕ ಸೇನೆಯು ಈ ಕ್ರಮವನ್ನು ಕೈಗೊಂಡಿತ್ತು.

ಹೆಚ್ಚುಕಡಿಮೆ ಎರಡು ತಿಂಗಳ ಕಾಲ ವಿವಿಧ ಸ್ಥಳ ಗಳಲ್ಲಿ ದಿಗ್ಬಂಧನದಲ್ಲಿರಿಸಿದ ಬಳಿಕ ಓರ್ವ ಪತ್ರಕರ್ತ ಮತ್ತು ಇಬ್ಬರು ವಿರೋಧಿ ಪ್ರತಿ ಭಟನಾಕಾರರ ಹತ್ಯೆಗೆ ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಹಾಗೂ ಇತರರಿಗೆ ಚಿತ್ರಹಿಂಸೆ ಮತ್ತು ಅಕ್ರಮ ಬಂಧನಕ್ಕೆ ಆದೇಶಿಸಿದ್ದಕ್ಕಾಗಿ ಮುರ್ಸಿ ವಿಚಾರಣೆ ಗೊಳಪಡಲಿದ್ದಾರೆ ಎಂದು ಸರಕಾರಿ ಪ್ರಾಸಿ ಕ್ಯೂಟರ್‌ಗಳು 2013, ಸೆಪ್ಟಂಬರ್‌ನಲ್ಲಿ ಪ್ರಕಟಿಸಿದ್ದರು.

ಆರೋಪಗಳು 2012, ಡಿಸೆಂಬರ್‌ನಲ್ಲಿ ಕೈರೋದ ಅಧ್ಯಕ್ಷೀಯ ಅರಮನೆಯ ಹೊರಗೆ ವಿರೋಧಿ ಪ್ರತಿಭಟನಾಕಾರರು ಮತ್ತು ಮುಸ್ಲಿಂ ಬ್ರದರ್‌ಹುಡ್ ಬೆಂಬಲಿಗರ ನಡುವೆ ನಡೆದಿದ್ದ ಘರ್ಷಣೆಗಳಿಗೆ ಸಂಬಂಧಿಸಿದ್ದವು. ಮುರ್ಸಿ ಮತ್ತು 14 ಹಿರಿಯ ಬ್ರದರ್‌ಹುಡ್ ನಾಯಕರ ವಿಚಾರಣೆ 2013,ನವೆಂಬರ್‌ನಲ್ಲಿ ನಡೆದಿತ್ತು.

ಮೊದಲ ವಿಚಾರಣೆಯಲ್ಲಿಯೇ ತಾನು ಸೇನಾ ಕ್ರಾಂತಿಯ ಬಲಿ ಪಶುವಾಗಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಮುರ್ಸಿ, ತನ್ನನ್ನು ವಿಚಾರಣೆಗೊಳಪಡಿಸುವ ನ್ಯಾಯಾಲಯದ ಅಧಿಕಾರವನ್ನು ತಿರಸ್ಕರಿಸಿದ್ದರು. ‘ದೇಶದ ಸಂವಿಧಾನದಂತೆ ನಾನು ಈಜಿಪ್ಟ್ ಗಣರಾಜ್ಯದ ಅಧ್ಯಕ್ಷನಾಗಿದ್ದೇನೆ ಮತ್ತು ನನ್ನನ್ನು ಬಲವಂತದಿಂದ ಬಂಧನದಲ್ಲಿರಿಸಲಾಗಿದೆ’ ಎಂದು ಅವರು ಹೇಳಿದ್ದರು.

ಆದರೆ 2015, ಎಪ್ರಿಲ್‌ನಲ್ಲಿ ಮುರ್ಸಿ ಮತ್ತು ಇತರ ಸಮರ್ಥಕರನ್ನು ಕೊಲೆಗೆ ಪ್ರಚೋದಿಸಿದ್ದ ಆರೋಪದಿಂದ ಖುಲಾಸೆಗೊಳಿಸಲಾಗಿತ್ತಾದರೂ, ಪ್ರತಿಭಟನಾಕಾರರಿಗೆ ಹಿಂಸೆ ಮತ್ತು ಅವರ ಬಂಧನಕ್ಕೆ ಆದೇಶಿಸಿದ್ದ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

2011ರ ಅರಬ್ ಕ್ರಾಂತಿಯ ಸಂದರ್ಭ ವಿದೇಶಿ ಉಗ್ರರೊಂದಿಗೆ ಶಾಮೀಲಾತಿಯಿಂದ ಹಿಡಿದು ಸರಕಾರಿ ರಹಸ್ಯಗಳ ಸೋರಿಕೆ,ವಂಚನೆ ಮತ್ತು ನ್ಯಾಯಾಂಗಕ್ಕೆ ಅವಮಾನದ ವರೆಗೆ ಹಲವಾರು ಇತರ ಆರೋಪ ಗಳನ್ನೂ ಮುರ್ಸಿ ವಿರುದ್ಧ ಹೊರಿಸಲಾಗಿತ್ತು.

ಇಂಜಿನಿಯರ್: 1951ರಲ್ಲಿ ಶರ್ಕಿಯಾದ ನೈಲ್ ಡೆಲ್ಟಾ ಪ್ರಾಂತದ ಎಲ್-ಅಡ್ವಾ ಗ್ರಾಮದಲ್ಲಿ ಜನಿಸಿದ್ದ ಮುರ್ಸಿ 1970ರಲ್ಲಿ ಕೈರೋ ವಿವಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಪಿಎಚ್‌ಡಿ ಮಾಡಲು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಂದ ಈಜಿಪ್ಟ್‌ಗೆ ಮರಳಿದ ಬಳಿಕ ಝಗಾಝಿಗ್ ವಿವಿಯಲ್ಲಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು. ಮುಸ್ಲಿಂ ಬ್ರದರ್‌ಹುಡ್‌ನಲ್ಲಿ ಹಂತಹಂತವಾಗಿ ಮೇಲಕ್ಕೇರಿದ್ದ ಅವರು 2000ದಿಂದ 2005ರವರೆಗೆ ಪಕ್ಷೇತರರಾಗಿ ಸಂಸತ್ ಸದಸ್ಯರಾಗಿದ್ದರು. ಬಳಿಕ ತನ್ನ ಸ್ವಂತ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. ಸಂಸದನಾಗಿ ಅವರು ತನ್ನ ವಾಕ್ಪಟುತ್ವಕ್ಕಾಗಿ ಪ್ರಶಂಸೆಗೊಳಗಾಗಿದ್ದರು.

2012,ಎಪ್ರಿಲ್‌ನಲ್ಲಿ ಮುಸ್ಲಿಂ ಬ್ರದರ್‌ಹುಡ್‌ನ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿಯಾಗಿದ್ದ ಅವರು ಅಲ್ಪ ಅಂತರದಲ್ಲಿ ವಿಜಯ ಗಳಿಸಿ 2012,ಜೂನ್‌ನಲ್ಲಿ ಅಧಿಕಾರಕ್ಕೇರಿದ್ದರು. ಆದರೆ ಅವರ ಟೀಕಾಕಾರರು ಅವರ ವಿರುದ್ಧ ಹಲವಾರು ಆರೋಪಗಳನ್ನು ಹೊರಿಸತೊಡಗಿದ್ದು, 2012 ಡಿಸೆಂಬರ್‌ನಲ್ಲಿ ಜನಾಭಿಪ್ರಾಯ ಅವರ ವಿರುದ್ಧ ರೂಪುಗೊಳ್ಳತೊಡಗಿತ್ತು. ಈ ಮಧ್ಯೆ ಮುರ್ಸಿ ಸೇನೆಯನ್ನು ಎದುರು ಹಾಕಿಕೊಂಡಿದ್ದರು. ಅಂತಿಮವಾಗಿ 2013,ಜು.3ರಂದು ಸಂವಿಧಾನವನ್ನು ಅಮಾನತುಗೊಳಿಸಿದ್ದ ಸೇನೆಯು ಹೊಸ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಮಧ್ಯಂತರ ಸರಕಾರದ ರಚನೆಯನ್ನು ಪ್ರಕಟಿಸಿತ್ತು. ಮುರ್ಸಿಯವರನ್ನು ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿತ್ತು ಮತ್ತು ವಾರಗಳ ಕಾಲ ಅವರ ಬಗ್ಗೆ ಸುದ್ದಿಯೇ ಇರಲಿಲ್ಲ. ಅವರ ಬಿಡುಗಡೆಗೆ ಆಗ್ರಹಿಸಿ ಬೆಂಬಲಿಗರು ನಡೆಸಿದ್ದ ಪ್ರತಿಭಟನೆಯನ್ನು ಬಗ್ಗುಬಡಿಯುವಲ್ಲಿ ಸೇನೆಯು ಯಶಸ್ವಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News