ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನಾಗಿ ಅಧಿರ್ ರಂಜನ್ ಚೌಧರಿ ಆಯ್ಕೆ

Update: 2019-06-18 09:41 GMT

ಹೊಸದಿಲ್ಲಿ, ಜೂ.18: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಹಿರಿಯ ಸಂಸದ ಅಧಿರ್ ರಂಜನ್ ಚೌಧರಿ ಇಂದು ಆಯ್ಕೆಯಾಗಿದ್ದಾರೆ.

 ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚೌಧರಿ ಅವರ ಆಯ್ಕೆ ನಡೆದಿದೆ.

ಇಂದು ಬೆಳಗ್ಗೆ ದೀರ್ಘಕಾಲ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉಪಸ್ಥಿತರಿದ್ದು, ಚರ್ಚೆ ನಡೆಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಚೌಧರಿ ಕಾರ್ಯನಿರ್ವಹಿಸಲಿದ್ದು, ಎಲ್ಲ ಪ್ರಮುಖ ಆಯ್ಕೆ ಸಮಿತಿಗಳಲ್ಲಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಲೋಕಸಭೆಗೆ ಪತ್ರ ಬರೆಯಲಾಗಿದೆ.

ಪಶ್ಚಿಮಬಂಗಾಳದ ಬಹರಾಂಪುರ ಕ್ಷೇತ್ರದಲ್ಲಿ ಟಿಎಂಸಿಯ ಅಪೂರ್ವ ಸರ್ಕಾರ್‌ರನ್ನು ಸುಮಾರು 80,000 ಮತಗಳ ಅಂತರದಿಂದ ಸೋಲಿಸಿ ಲೋಕಸಭೆಗೆ ಆಯ್ಕೆಯಾಗಿರುವ ಚೌಧರಿ ಅವರನ್ನು ಓರ್ವ ಉತ್ತಮ ಹೋರಾಟಗಾರ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದರು.

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ 16ನೇ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಕಾರ್ಯನಿರ್ವಹಿಸಿ ಗಮನ ಸೆಳೆದಿದ್ದರು. ಈ ಬಾರಿ ಅವರು ಕಲಬುರ್ಗಿ ಕ್ಷೇತ್ರದಲ್ಲಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News