ಮ್ಯಾನ್ಮಾರ್‌ನ ರೊಹಿಂಗ್ಯಾ ಸಮಸ್ಯೆಯನ್ನು ನಿಬಾಯಿಸುವಲ್ಲಿ ವ್ಯವಸ್ಥಿತ ವೈಫಲ್ಯ ಒಪ್ಪಿಕೊಂಡ ವಿಶ್ವಸಂಸ್ಥೆ

Update: 2019-06-18 17:23 GMT

ಲಂಡನ್, ಜೂ.18: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಸಮಸ್ಯೆಯನ್ನು ನಿಬಾಯಿಸಿರುವ ಕುರಿತು ಸಿದ್ಧಪಡಿಸಿರುವ ವರದಿಯಲ್ಲಿ ತನ್ನನ್ನೇ ದೂರಿಕೊಂಡಿರುವ ವಿಶ್ವಸಂಸ್ಥೆ, ಮ್ಯಾನ್ಮಾರ್‌ನಲ್ಲಿ ಯುಎನ್ ನಿರ್ವಹಣೆ ಖಂಡಿತವಾಗಿಯೂ ಸ್ಫೂರ್ತಿದಾಯಕವಾಗಿರಲಿಲ್ಲ ಮತ್ತು ಅದು ಮಾನವ ಹಕ್ಕುಗಳನ್ನು ರಕ್ಷಿಸುವ ತನ್ನ ಉದ್ದೇಶವನ್ನು ಸಾಧಿಸುವಲ್ಲಿ ವ್ಯವಸ್ಥಿತಿ ವೈಫಲ್ಯ ಕಂಡಿದೆ ಎಂದು ತಿಳಿಸಿದೆ. 2017ರಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ 7,30,000ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್‌ನಿಂದ ಸಮೀಪದ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ಮಾನವ ಹಕ್ಕುಗಳ ವಿಚಾರದಲ್ಲಿರುವ ಋಣಾತ್ಮಕ ವಿನ್ಯಾಸವನ್ನು ಬದಲಿಸಲು ಮತ್ತು ಇತರ ಕ್ಷೇತ್ರಗಳಲ್ಲಿ ಗುಣಾತ್ಮಕ ವಿನ್ಯಾಸವನ್ನು ಉಳಿಸಲು ಮ್ಯಾನ್ಮಾರ್ ಸರಕಾರದ ಜೊತೆ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ವಿಶ್ವಸಂಸ್ಥೆಯ ವ್ಯವಸ್ಥೆ ಒಟ್ಟಾರೆಯಾಗಿ ಅಸಮರ್ಥವಾಗಿದೆ ಎಂದು ಈ ವರದಿಯನ್ನು ಸಿದ್ಧಪಡಿಸಿರುವ ಗ್ವಾಟೆಮಾಲದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಗೆರ್ಟ್ ರೊಸೆಂತಲ್ ತಿಳಿಸಿದ್ದಾರೆ. 2010ರಿಂದ 2018ರ ವರೆಗೆ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ಮೇಲೆ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ವಿಶ್ವ ಸಂಘಟನೆಗಳು ಅಲ್ಲಿ ನಿರ್ವಹಿಸಿದ್ದ ಪಾತ್ರಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಈ ವರದಿಯನ್ನು ಸಿದ್ಧಪಡಿಸಲು ಆದೇಶಿಸಿದ್ದರು. ವಿಶ್ವಸಂಸ್ಥೆಯ ವಿವಿಧ ವಿಭಾಗಗಳಿಂದ ತನಗೆ ಸಿಕ್ಕ ಮಾಹಿತಿಯನ್ನು ಮ್ಯಾನ್ಮಾರ್ ಸರಕಾರ ತನ್ನ ಲಾಭಕ್ಕೆ ಬಳಸಿದೆ ಎಂದು ರೊಸೆಂತಲ್ ತಿಳಿಸಿದ್ದಾರೆ. ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆದ ದೌರ್ಜನ್ಯಗಳಿಗೆ ಸರಕಾರವೇ ಹೊಣೆಯಾಗಿದೆ. ವಿಶ್ವಸಂಸ್ಥೆಯ ವ್ಯವಸ್ಥಿತ ವೈಫಲ್ಯ ಕೇವಲ ಒಂದು ವಿಭಾಗ ಅಥವಾ ವ್ಯಕ್ತಿಗೆ ಸೀಮಿತವಾಗಿಲ್ಲ. ಆದರೆ ರಚನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸರಕಾರದ ಜೊತೆ ಕೈಜೋಡಿಸುವ ಜವಾಬ್ದಾರಿಯಿಂದ ನುಣುಚಿಕೊಂಡ ಎಲ್ಲ ಸಂಘಟನೆಗಳ ವೈಫಲ್ಯವಾಗಿದೆ ಎಂದು ರೊಸೆಂತಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News