ನೀಟ್, ಏಮ್ಸ್, ಜೆಇಇ, ಜೆಐಪಿಎಂಇಆರ್ ಎಲ್ಲದರಲ್ಲೂ ಅಯ್ಕೆಯಾದ ಈ ಪ್ರತಿಭಾವಂತೆ ಈ ಯಾವುದಕ್ಕೂ ದಾಖಲಾಗುತ್ತಿಲ್ಲ !

Update: 2019-06-19 07:07 GMT

ಸೂರತ್ : ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕೋರ್ಸುಗಳಿಗೆ ದಾಖಲಾತಿ ಪಡೆಯಲು ನಡೆಸಲಾಗುವ  ಪ್ರವೇಶ ಪರೀಕ್ಷೆಗಳಲ್ಲಿ ಯಾವುದಾದರೂ ಒಂದು ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದೇ ದೊಡ್ಡ ಸಾಧನೆಯಾಗಿರುವಾಗ ಎಲ್ಲಾ ಪ್ರವೇಶ ಪರೀಕ್ಷೆಗಳಲ್ಲೂ ತೇರ್ಗಡೆಯಾಗುವುದು ಅಪ್ರತಿಮ ಸಾಧನೆಯೇ ಹೌದು. ಇಂತಹ ಒಂದು ಸಾಧನೆಗೈದಿರುವವರು ಸೂರತ್ ನಗರದ ಸ್ತುತಿ ಖಂಡ್ವಾಲ. ಎಲ್ಲಾ ಪ್ರವೇಶ ಪರೀಕ್ಷೆಗಳಲ್ಲೂ ತೇರ್ಗಡೆ ಹೊಂದಿದ್ದಷ್ಟೇ ಅಲ್ಲ, ಜೆಇಇ ಮೈನ್ 2019 ಹೊರತಾಗಿ ನೀಟ್ 2019, ಜೆಐಪಿಎಂಇಆರ್ ಎಂಬಿಬಿಎಸ್ 2019 ಹಾಗೂ ಏಮ್ಸ್ ಎಂಬಿಬಿಎಸ್ 2019 ಮೆರಿಟ್ ಲಿಸ್ಟ್ ನಲ್ಲೂ ಈಕೆ ಸ್ಥಾನ ಪಡೆದಿದ್ದಾರೆ. ಆಕೆಗೆ ಭಾರತದ ಪ್ರಮುಖ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲಾ ಅರ್ಹತೆಯಿದ್ದರೂ ಆಕೆ ಅಲ್ಲಿ ಪ್ರವೇಶ ಪಡೆಯದೆ ವಿಶ್ವದ ಅತ್ಯುನ್ನತ ಶಿಕ್ಷಣ ಸಂಸ್ಥೆಯಾದ ಅಮೆರಿಕಾದ ಮೆಸಾಚುಸೆಟ್ಸ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಇಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ತೀರ್ಮಾನಿಸಿದ್ದು ಅಲ್ಲಿ ಆಕೆಗೆ ಈಗಾಗಲೇ ಪ್ರವೇಶಾತಿಯೂ ದೊರಕಿದೆ.

ರಾಜಸ್ಥಾನದ ಕೋಟಾದ ಅಲ್ಲೆನ್ ಕ್ಯಾರಿಯರ್ ಇನ್‍ಸ್ಟಿಟ್ಯೂಟ್ ನ ಕ್ಲಾಸ್‍ರೂಂ ಪ್ರೋಗ್ರಾಂ ವಿದ್ಯಾರ್ಥಿನಿಯಾಗಿದ್ದಾರೆ ಸ್ತುತಿ. ಆಕೆ ತನ್ನ ಬೋರ್ಡ್ ಪರೀಕ್ಷೆಯಲ್ಲಿ ಶೇ 98.8 ಅಂಕಗಳನ್ನು ಪಡೆದು ರಾಜಸ್ಥಾನದಲ್ಲಿ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದಾಳೆ. ಪ್ರವೇಶಾತಿ ಪರೀಕ್ಷೆಯಲ್ಲಿ ಆಕೆ ಏಮ್ಸ್ ಎಂಬಿಬಿಎಸ್ 2019 ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 10ನೇ ರ್ಯಾಂಕ್ ಪಡೆದಿದ್ದಾಳೆ. ನೀಟ್ ನಲ್ಲಿ ಆಕೆಗೆ ಅಖಿಲ ಭಾರತ ಮಟ್ಟದಲ್ಲಿ 71ನೇ ರ್ಯಾಂಕ್ ದೊರಕಿದ್ದರೆ ಜೆಐಪಿಎಂಇಆರ್ ನಲ್ಲಿ 27ನೇ ರ್ಯಾಂಕ್ ಹಾಗೂ ಜೆಇಇ ಮೈನ್ ನಲ್ಲಿ 1,086 ರ್ಯಾಂಕ್ ದೊರಕಿದೆ.

ಇದೀಗ ಎಂಐಟಿಯಲ್ಲಿ ದಾಖಲಾತಿ ಪಡೆದಿರುವ ಆಕೆ ಮುಂದೆ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯಲು ಬಯಸಿದ್ದಾಳೆ. ಸ್ತುತಿ ಹೆತ್ತವರು ವೈದ್ಯರಾಗಿದ್ದಾರೆ. ತಾಯಿ ಡಾ. ಹೇತಲ್ ವೃತ್ತಿಯಲ್ಲಿ ದಂತ ವೈದ್ಯೆಯಾಗಿದ್ದರೂ ಮಗಳ ಶಿಕ್ಷಣಕ್ಕಾಗಿ ಪ್ರಾಕ್ಟೀಸ್ ತೊರೆದು ಮೂರು ವರ್ಷಗಳ ಕಾಲ ಕೋಟಾದಲ್ಲಿ ಆಕೆಯೊಂದಿಗೆ ನೆಲೆಸಿದ್ದರು. ಪೆಥಾಲಜಿಸ್ಟ್ ಆಗಿರುವ ಆಕೆಯ ತಂದೆ ಡಾ. ಶೀತಲ್ ಖಂಡ್ವಾಲ ವಾರಾಂತ್ಯಕ್ಕೆ ಬಂದು ಅವರನ್ನು ಭೇಟಿಯಾಗುತ್ತಿದ್ದರು.

ತನ್ನ ಯಶಸ್ಸಿಗೆ ತನ್ನ ಹೆತ್ತವರು, ಕಾಲೇಜು ಹಾಗೂ ಅಲ್ಲೆನ್ ಇನ್‍ಸ್ಟಿಟ್ಯೂಟ್ ಗೆ ಆಭಾರಿಯಾಗಿರುವ ಸ್ತುತಿ ಪ್ರತಿ ದಿನ 12ರಿಂದ 13 ಗಂಟೆಗಳ ಕಾಲ ಅಧ್ಯಯನ ನಡೆಸುತ್ತಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News