ಫೋಕ್ಸಾಮ್ ಗ್ರ್ಯನ್‌ಪ್ರಿ: 1,500 ಮೀ. ಓಟದಲ್ಲಿ ಚಿನ್ನ ಗೆದ್ದ ಚಿತ್ರಾ

Update: 2019-06-19 18:35 GMT

ಹೊಸದಿಲ್ಲಿ, ಜೂ.19: ಏಶ್ಯನ್ ಚಾಂಪಿಯನ್ ಪಿ.ಯು. ಚಿತ್ರಾ ಸ್ವೀಡನ್‌ನ ಸೊಲ್ಲೆನ್‌ಟುನಾದಲ್ಲಿ ನಡೆದ ಫೋಕ್ಸಾಮ್ ಗ್ರಾನ್ ಪ್ರಿ ಅಥ್ಲೆಟಿಕ್ಸ್ ಕೂಟದಲ್ಲಿ ಮಹಿಳೆಯರ 1,500 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಿದರು.

ಮಂಗಳವಾರ ನಡೆದ 1,500 ಮೀ. ಓಟದ ಸ್ಪರ್ಧೆಯಲ್ಲಿ ಕೇರಳದ ಅಥ್ಲೀಟ್ ಚಿತ್ರಾ 4 ನಿಮಿಷ, 12.65 ಸೆಕೆಂಡ್‌ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 5000 ಮೀ. ಓಟದಲ್ಲಿ ಚಿನ್ನ ಜಯಿಸಿರುವ ಕೀನ್ಯದ ಮರ್ಸಿ ಚೆರೊನೊರನ್ನು ಹಿಂದಿಕ್ಕಿದರು.

ಚಿತ್ರಾ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಇದೇ ವೇಳೆೆ, ಏಶ್ಯನ್ ಗೇಮ್ಸ್ ಚಾಂಪಿಯನ್ ಜಿನ್ಸನ್ ಜಾನ್ಸನ್ ಪುರುಷರ 1,500 ಮೀ.ಓಟದಲ್ಲಿ 3 ನಿಮಿಷ, 39.69 ಸೆಕೆಂಡ್‌ನಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಜಯಿಸಿದರು.

ಹಾಲೆಂಡ್‌ನಲ್ಲಿ ಜೂ.15 ರಂದು ನಡೆದಿದ್ದ ನೆಕ್ಟ್ಸ್‌ಜನರೇಶನ್ ಅಥ್ಲೆಟಿಕ್ಸ್ ಕೂಟದಲ್ಲಿ 3:37.62 ಸೆಕೆಂಡ್‌ನಲ್ಲಿ ಗುರಿ ತಲುಪಿದ ಜಾನ್ಸನ್ ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡಿದ್ದರು.

ಮತ್ತೊಂದು ಪ್ರತ್ಯೇಕ ಸ್ಪರ್ಧೆಯಲ್ಲಿ ಲಾಂಗ್‌ಜಂಪ್ ಪಟು ಮುರಳಿ ಶ್ರೀಶಂಕರ್ ಡೆನ್ಮಾರ್ಕ್ ನಲ್ಲಿ ನಡೆದ ಕೋಪನ್‌ಹೇಗನ್ ಅಥ್ಲೆಟಿಕ್ಸ್ ಗೇಮ್ಸ್‌ನ ಮೊದಲಸುತ್ತಿನಲ್ಲಿ 7.93 ಮೀ. ದೂರಕ್ಕೆ ಜಿಗಿದು ಚಿನ್ನದ ಪದಕ ಜಯಿಸಿ ಗಮನ ಸೆಳೆದಿದ್ದಾರೆ.

ಶ್ರೀಶಂಕರ್ ಇನ್ನುಳಿದ ಸುತ್ತಿನಲ್ಲಿ 7.89 ಮೀ., 7.88 ಮೀ. ಹಾಗೂ 7.61 ಮೀ. ದೂರಕ್ಕೆ ಜಿಗಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News