ಸರಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಆಂಗ್ಲಮಾಧ್ಯಮ ಕಲಿಕೆ ಬೇಕೇ?

Update: 2019-06-19 18:36 GMT

 ಸರಕಾರಿ ಶಾಲೆಗಳಲ್ಲೂ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸುವ ಸರಕಾರದ ನಿರ್ಧಾರವು ಮಕ್ಕಳ ಹೆಚ್ಚಿನ ಪೋಷಕರಿಗೆ ಸಂತಸವನ್ನುಂಟು ಮಾಡಿದರೆ, ನನಗಂತೂ ಆಶ್ಚರ್ಯ, ಖೇದವನ್ನುಂಟು ಮಾಡುವುದಾಗಿದೆ. ಸರಕಾರದ ಈ ನಿರ್ಧಾರಕ್ಕೆ ಮೂಲತಃ ಕಾರಣವಾದರೂ ಏನು? ಈ ನಿರ್ಧಾರದ ಉದ್ದೇಶವಾದರೂ ಏನೆಂದು ತಿಳಿಯದು. ಎಳೆಯ ಮಕ್ಕಳ ಹಿತದೃಷ್ಟಿಯಿಂದಲೇ ಅಥವಾ ಸರಕಾರಿ ಶಾಲೆಗಳ ಉಳಿವಿಗಾಗಿಯೇ, ಅಥವಾ ಆಂಗ್ಲಮಾಧ್ಯಮ ಶಾಲೆಗಳ ಜೊತೆ ಪೈಪೋಟಿಯೇ? ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಖಂಡಿತ ಅಲ್ಲ ಎಂಬುದೇ ನನ್ನ ವಾದ. ವಿಷಯ ವಿಮರ್ಶೆಗೆ ಆಧಾರವಾಗಿ ಕಲಿಕೆ ಎಂದರೇನು ಎಂಬುದನ್ನು ಅರಿಯುವುದು ಸೂಕ್ತ.
ಈ ಸಮಸ್ಯೆಯನ್ನು ಶಿಕ್ಷಣ ಶಾಸ್ತ್ರದ ಚೌಕಟ್ಟಿನೊಳಗೆ ನಾವು ಅರ್ಥೈಸಿಕೊಳ್ಳಬೇಕಾದರೆ ಮೊದಲು ಮಗುವಿನ ಬುದ್ಧಿ ಮತ್ತು ಭಾಷೆಗಳ ನಡುವಿನ ಸಂಬಂಧವನ್ನು ಮನೋಭಾಷಿಕ (Psycholinguistic ) ನೆಲೆಯಲ್ಲಿ ನೋಡಬೇಕಾಗಿದೆ. ಬೆಳೆಯುತ್ತಿರುವ ಮಗುವಿನ ಬುದ್ಧಿ ಮತ್ತು ಭಾಷೆಗಳ ಬೇರುಗಳು ಮೂಲತಃ ಪ್ರತ್ಯೇಕವಾಗಿದ್ದರೂ, ಕ್ರಮೇಣ ಅವು ಬೆಸೆದುಕೊಳ್ಳುವುವು. ಮಗು ಬೆಳೆಯುತ್ತಾ ಬಲಿಯುತ್ತಾ ಬಂದಂತೆ, ತನಗೆದುರಾದ ಹೊಸ ಅನುಭವ ಸಂವೇದನಗಳ ತುಣುಕುಗಳನ್ನು ತನಗೆ ಅರ್ಥವಾಗುವ ರೀತಿಯಲ್ಲಿ ತನ್ನ ಜ್ಞಾನಕೋಶಕ್ಕೆ ಸೇರಿಸಿ ಪುನಾರಚಿಸುವ ಪ್ರಕ್ರಿಯೆಯೇ ಕಲಿಕೆ. ಕಲಿಕೆ ಎನ್ನುವುದು ಅನುಕ್ತವಾಗಿ ನಡೆಯುವ ಪ್ರಕ್ರಿಯಾತ್ಮಕ ಸಂಗತಿ. ತೀರಾ ವ್ಯಕ್ತಿಗತವಾದ ಈ ಪ್ರಕ್ರಿಯೆಯಲ್ಲಿ ಕಲಿಯುವಾತನು ತನ್ನಲ್ಲಿ ಈಗಾಗಲೇ ಹುದುಗಿರುವ ಜ್ಞಾನವನ್ನು ಹೊರಗೆಳೆದು ಅದಕ್ಕೆ ಜೀವ ತುಂಬುವ ಕಾರ್ಯವೇ ಕಲಿಕೆಯಾಗಿದೆ. ಕಲಿಕೆಗೆ ಒದಗುವ ಅತ್ಯಂತ ಪರಿಣಾಮಕಾರಿಯಾದ ಸಾಧನವೇ ಭಾಷೆ. ಬಾಹ್ಯ ಪ್ರಪಂಚವನ್ನು ಅಂತರ್ಯದಲ್ಲಿ ಪ್ರತಿನಿಧೀಕರಿಸಲು ಯಾ ರೂಪಿಸಲು ವ್ಯಕ್ತಿಗೆ ಭಾಷೆ ಬೇಕು. ಹಾಗೇ, ತನ್ನ ಮನಸ್ಸಿನಲ್ಲಿ ಮೂಡುವ ವಿಚಾರ, ಭಾವನೆ, ಕಲ್ಪನೆಗಳ ಅಭಿವ್ಯಕ್ತಿಗೂ ಭಾಷೆ ಬೇಕು. ಬುದ್ಧಿಯ ವ್ಯಕ್ತಾಂಶ ಭಾಷೆಯಾದರೆ ಭಾಷೆಯ ಅವ್ಯಕ್ತಾಂಶ ಬುದ್ಧಿಯಾಗಿದೆ. ಇದರ ಕುರಿತಾಗಿ ಪಿಯಾಜೆ, ವ್ಯಗೋಸ್ಕಿ, ಚೋಂಸ್ಕಿ, ಬ್ರೂನರ್ ಮೊದಲಾದವರು ಸಾಕಷ್ಟು ಸೈದ್ಧಾಂತಿಕ ವಿವರಣೆಯನ್ನಿತ್ತಿರುವರು. ಮಗು ಬೆಳೆದಂತೆ, ಮನಸ್ಸು ವಿಕಾಸಗೊಂಡಂತೆ, ತನ್ನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಅವಶ್ಯಕತೆಯೂ ಬೆಳೆಯುವುದು. ತನ್ನ ಸಂಬಂಧಿಗಳು, ಆಪ್ತರು, ನೆರೆಕರೆಯವರು ಬಳಸುವ ಭಾಷೆ ಈ ಅವಶ್ಯಕತೆಯನ್ನು ಪೂರೈಸುವ ಸಾಧನವಾಗಬಹುದು.
ಇದಕ್ಕೆ ಪೂರಕವಾಗಿ ಗೋಪಾಲಕೃಷ್ಣ ಗೋಖಲೆ, ಗಾಂಧೀಜಿ, ರವೀಂದ್ರನಾಥ್ ಠಾಗೋರ್ ಮೊದಲಾದವರು ಮಕ್ಕಳ ಶಿಕ್ಷಣದಲ್ಲಿ ಮಾತೃಭಾಷೆಯೇ ಮುಖ್ಯ ವಿಷಯವಾಗಿಯೂ, ಕಲಿಕಾ ಮಾಧ್ಯಮವಾಗಿಯೂ ಇರಬೇಕೆಂದು ಒತ್ತಿ ಹೇಳಿದುದನ್ನು ಇಲ್ಲಿ ಸ್ಮರಿಸಬೇಕಾಗಿದೆ. ಇದಕ್ಕೆ ಒತ್ತಿಯೇ 1953ರಲ್ಲಿ ಯುನೆಸ್ಕೊ ಮಾಡಿದ ಘೋಷಣೆಯನ್ನು ಗಮನಿಸಿ: ‘‘ಮಗುವಿನ ಶಿಕ್ಷಣವು ಮಾತೃಭಾಷೆಯಲ್ಲಿಯೇ ನಡೆಯಬೇಕಾದುದು ಸಾರ್ವಕಾಲಿಕ ಸತ್ಯವಾಗಿದೆ. ಮನಃಶಾಸ್ತ್ರೀಯವಾಗಿ ನೋಡಿದರೆ, ಮಾತೃಭಾಷೆಯ ಸಂಜ್ಞಾಪದ್ಧತಿಯಿಂದ ಮಗುವಿನ ಅಭಿವ್ಯಕ್ತಿ ಮತ್ತು ಗ್ರಹಿಕೆಯೂ ಸಾಧ್ಯವಾಗುವುದು. ಸಾಮಾಜಿಕವಾಗಿ ನೋಡಿದರೆ, ಮಗು ತನ್ನ ಸಮುದಾಯದ ಇತರರೊಡನೆ ಬೆರೆಯಲೂ ಸಹಾಯವಾಗುವುದು. ಶೈಕ್ಷಣಿಕವಾಗಿ ನೋಡಿದರೆ, ಅನ್ಯಭಾಷಾ ಮಾಧ್ಯಮಕ್ಕಿಂತ ಮಾತೃ ಭಾಷೆಯ ಮೂಲಕ ಮಗು ವಿಷಯವನ್ನು ಸುಲಭವಾಗಿ ಅರಿಯಲು ಸಾಧ್ಯ.’’ (ಪು. 11)
ಮಗುವಿನ ಪರಿಸರದ ಸಂಪರ್ಕ ಭಾಷೆ ಅಥವಾ ಚಿರಪರಿಚಿತ ಭಾಷೆ ಪ್ರಥಮ ಭಾಷೆ ಆಗಿದೆ. ಅಭಿವ್ಯಕ್ತಿ ಮತ್ತು ಸಂವಹನ ಯಾವ ಭಾಷೆಯಲ್ಲಿ ನೈಸರ್ಗಿಕವಾಗಿ ನಡೆಯುವುದೋ ಅದೇ ಮಾಧ್ಯಮದ ಮೂಲಕ ಕಲಿಕೆಯೂ ನಡೆದರೆ ಆ ಕಲಿಕೆಯು ವ್ಯಕ್ತಿಗತವಾಗಿಯೂ ಅರ್ಥಪೂರ್ಣವಾಗಿಯೂ ಇರುವುದು. ಇಲ್ಲವಾದರೆ ಈ ಪ್ರಕ್ರಿಯೆ ದುರ್ಬಲಗೊಂಡು ಕಲಿಕೆ ಕೃಶವಾಗುವುದು. ಮಗುವಿನ ಸಹಜ ಪ್ರವೃತ್ತಿಗಳ ಉದ್ದೀಪನಕ್ಕೆ ತಡೆಯಾಗುವುದು.
ಶಾಲೆಗಳಲ್ಲಿ ಭಾಷೆಯ ಕುರಿತಾಗಿ, ಭಾಷಾ ಮಾಧ್ಯಮದ ಕುರಿತಾಗಿ ನಿರ್ದಿಷ್ಟವಾದ ನೀತಿ ನಿಯಮಗಳಿಲ್ಲದ ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳನ್ನು ಯಾವುದೇ ಹಂತದಲ್ಲಿ ಯಾವುದೇ ಮೀಡಿಯಂಗೆ ಸೇರಿಸುವ ಪೂರ್ಣ ಸ್ವಾತಂತ್ರ್ಯ ಮಕ್ಕಳ ಪಾಲಕರಿಗಿದೆ. ಆದರೆ ಮಕ್ಕಳ ಹಿತಾಸಕ್ತಿಯನ್ನು ಕಲಿಕೆಯ ಸಹಜ ಪ್ರಕ್ರಿಯೆಯನ್ನು ಕಡೆಗಣಿಸಿ ಅಲ್ಲ.
ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದ ಮಾತ್ರಕ್ಕೆ ಮಗು ಕಲಿಕೆಯಲ್ಲಿ ಅಭಿವೃದ್ಧಿಯನ್ನು ಸಾಧಿಸುವುದು ಎಂಬುದು ಮಿಥ್ಯವಿಚಾರ. ಜೊತೆಯಲ್ಲೇ ಇಂಗ್ಲಿಷಿನ ಮೇಲೆ ಸಹಜವಾದ ಒಲವು ಮೂಡಿಸುವ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಪರಿಸರ ಇರಬೇಕು. ಪ್ರಾದೇಶಿಕ ಯಾ ಪ್ರಥಮ ಭಾಷಾ ಬೆಳವಣಿಗೆಯೊಂದಿಗೆ ಸಾಧ್ಯವಿದ್ದಲೆಲ್ಲಾ ಪರಸ್ಪರ ಪೂರಕವಾದ ಇಂಗ್ಲಿಷ್ ಎನ್‌ರಿಚ್‌ಮೆಂಟ್ ನಡೆದರೆ ಅದರಿಂದ ಲಾಭವಿದೆ. ಚಿರಪರಿಚಿತವಾದ ಪ್ರಥಮ ಭಾಷೆ ಸಾಕಷ್ಟು ಬೆಳೆದಾಗ, ಕಲಿಕೆಯ ಸಹಜ ಪ್ರಕ್ರಿಯೆಗೆ ಧಕ್ಕೆಯಾಗದ ರೀತಿಯಲ್ಲಿ ಅದಕ್ಕೆ ಪೂರಕವಾಗುವ ರೀತಿಯಲ್ಲಿ ಇಂಗ್ಲಿಷ್ ಎನ್‌ರಿಚ್‌ಮೆಂಟ್ ನಡೆಯಬೇಕು. ಆದರೆ ಸಮಸ್ಯೆಯೇನೆಂದರೆ, ನಮ್ಮಲ್ಲಿ ಇಂಗ್ಲಿಷ್ ಮೀಡಿಯಂ ಎಂದೆನಿಸಿಕೊಳ್ಳುವ ಬಹುತೇಕ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯಾಗಲೀ ಸಹಜ ಕಲಿಕೆಯಾಗಲೀ ಇರುವುದಿಲ್ಲ. ಅಂದರೆ ಇಂಗ್ಲಿಷ್ ಭಾಷೆಯನ್ನು ಅಂತರ ವ್ಯಕ್ತಿ ಸಂವಹನಕ್ಕಾಗಲೀ, ಬೋಧನಾ ಮಾಧ್ಯಮವಾಗಲೀ ಬಳಸುವುದಿಲ್ಲ. ಕೇವಲ ಪರೀಕ್ಷಾ ಪತ್ರಿಕೆಯ ಮಾಧ್ಯಮವಾಗಿ ಬಳಸಲಾಗುತ್ತಿದೆ. ಇದಕ್ಕಾಗಿಯೇ ಪರೀಕ್ಷೆಯ ಪ್ರಶ್ನೋತ್ತರಗಳನ್ನು ಮಾತ್ರ ಇಂಗ್ಲಿಷಿನಲ್ಲಿ ಬರೆಯಿಸಿ ಉರು ಹೊಡೆಸಲಾಗುತ್ತಿದೆ. ಕೇವಲ ಕಾಪಿ ಬರೆಸಿ, ಕಾಗುಣಿತ ತಿದ್ದಿ, ನರ್ಸರಿ ಹಾಡುಗಳನ್ನು ಬಾಯಿಪಾಠ ಕಲಿತರೆ ಸಾಲದು. ಅಪ್ರಾಪ್ತ ಹಂತದಲ್ಲಿ ಅಂದರೆ, ತನ್ನ ಪ್ರಥಮ ಭಾಷೆ ಬಲಿಯುವ ಮೊದಲೇ, ದಿಢೀರಾಗಿ ಇಂಗ್ಲಿಷ್ ಮೀಡಿಯಂ ಶಾಲೆಗೆ ಮಗುವನ್ನು ಬಲವಂತವಾಗಿ ತಳ್ಳಿದರೆ ಮಗುವಿನ ಸಂವಹನಾ ಸಾಮರ್ಥ್ಯ, ಇಂಗ್ಲಿಷ್ ಭಾಷಾಜ್ಞಾನ ಸಹಜವಾಗಿ ಬೆಳೆಯದೆ, ಕಲಿಕೆ ಕುಂಠಿತಗೊಂಡು, ಕಲಿಕಾ ದೋಷಗಳು ವ್ಯಕ್ತಿತ್ವ ಸಮಸ್ಯೆಗಳು ಹುಟ್ಟುವುವು.
ನನಗನಿಸುವುದೇನೆಂದರೆ, ಪ್ರಾಥಮಿಕ ಹಂತದಲ್ಲಿ ಅಂದರೆ ಪ್ರಾಯ 6ರಿಂದ 12-13ರ ವರೆಗೆ ಕನ್ನಡವನ್ನು ಕಲಿಕಾ ಮಾಧ್ಯಮವಾಗಿ ಬಳಸಿದಲ್ಲಿ, ಕಲಿಕೆಯ ದೃಷ್ಟಿಯಲ್ಲಿ ಮಗುವಿಗೆ ಲಾಭವಿದೆ. ಜೊತೆಯಲ್ಲಿ ಇಂಗ್ಲಿಷನ್ನು ಪೂರಕ ಭಾಷೆಯಾಗಿ ಬಳಸಬಹುದು. ಈ ಹಂತದಲ್ಲಿ ಕನ್ನಡ ಬಲಗೊಂಡಷ್ಟೂ ಲಾಭವಿದೆ. ತನ್ನಲ್ಲಿ ಅಂತರ್ಗತವಾದ ಭಾಷಾ ವ್ಯಾಕರಣ ತನ್ನಿಂದ ತಾನೇ ಈ ಹಂತದಲ್ಲಿ ನಿಖರತೆಯನ್ನು ಪಡೆಯುವುದು. ವ್ಯಗೋಸ್ಕಿ, ಪಿಯಾಜೆ, ಚೋಂಸ್ಕಿ, ಪೆನ್‌ಫೀಲ್ಡ್, ಕಮಿನ್ಸ್ ಮೊದಲಾದವರ ಅಭಿಪ್ರಾಯಗಳು ಇದುವೇ ಆಗಿದೆ. ಆ ಬಳಿಕ, ಕಲಿಯುವಾತನ ಅಂತರ್ಗತ ಭಾಷಾ ವ್ಯಾಕರಣ ಭದ್ರವಾದ ಮೇಲೆ, ಇಂಗ್ಲಿಷನ್ನು ಬೇಕಾದರೆ ಮಾಧ್ಯಮವಾಗಿ ಬಳಸಬಹುದು. ಸಾದೃಶ್ಯ ಮತ್ತು ಸಾಮಾನ್ಯೀಕರಣ (analogy and generation) ನಿಯಮಕ್ಕನುಸಾರವಾಗಿ ಕಲಿಕೆ ಸುಲಭವಾಗುವುದು. ಇದು ಸೈದ್ಧಾಂತಿಕ ಮತ್ತು ಸಂಶೋಧನಾಧಾರಿತ ಸತ್ಯ. ಇಲ್ಲಿ ದಕ್ಷ ಶಿಕ್ಷಕರ ನೆರವು ಮಾತ್ರ ಅತೀ ಅಗತ್ಯ ಬೇಕಾಗಿದೆ.
ಶಾಲೆಯ ಪ್ರಥಮ ಭಾಷಾ ಸಾಮರ್ಥ್ಯ ಬಲಗೊಂಡಷ್ಟು ಇಂಗ್ಲಿಷ್ ಭಾಷೆ ಕಲಿಕೆಗೆ ಹೆಚ್ಚು ಪ್ರಯೋಜನವಿದೆ. ಮಕ್ಕಳ ಭಾಷಾ ಸಾಮರ್ಥ್ಯ ಬೆಳೆಯಬೇಕಾದರೆ, ದ್ವಿತೀಯ ಭಾಷೆ ಕಲಿಕಾ ಮಾಧ್ಯಮವಾಗಿರಬೇಕೆಂಬುದಕ್ಕೆ ಯಾವುದೇ ಆಾರವಿಲ್ಲ. ಸ್ವೀಡನ್‌ನಂತಹ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಥಮ ಭಾಷಾ ಮಾಧ್ಯಮದಲ್ಲಿ ಕಲಿಕೆ ನಡೆದರೆ, ದ್ವಿತೀಯ ಭಾಷೆಯನ್ನು ಭಾಷಾ ವಿಷಯವಾಗಿಯೇ ಕಲಿತು ಅದರಲ್ಲಿ ಪರಿಣತಿಯನ್ನು ಸಾಧಿಸುವರು. 2005ರ ಯುನೆಸ್ಕೊ ನಿಯೋಜಿತ ವರದಿಯೂ ಇದನ್ನೇ ಸಮರ್ಥಿಸುತ್ತದೆ. ಮಾತ್ರವಲ್ಲ, ಮಕ್ಕಳ ಸೃಜನಶೀಲತೆಯ ಬೆಳವಣಿಗೆಗೆ ಅವಶ್ಯವಾಗುವ ಸಾರದ್ರವ್ಯ ದೊರಕುವುದು ಪ್ರಥಮ ಭಾಷೆಯಲ್ಲೇ ಎಂಬುದನ್ನು ನಾವು ಮನಗಾಣಬೇಕಾಗಿದೆ.
ಈ ನಿಟ್ಟಿನಲ್ಲಿ ನಾವು ಅಗತ್ಯ ಗಮನಿಸಬೇಕಾದುದು ಏನೆಂದರೆ, ಭಾಷಾ ಕ್ರಿಯೆಗಳಲ್ಲಿ ಕೇವಲ ಸಂವಹನ ಕ್ರಿಯೆ ಒಂದೇ ಅಲ್ಲ. ತರಗತಿಗಳಲ್ಲಿ ನಡೆಯುವ ಮಾಮೂಲಿ ಪಠ್ಯಾಧಾರಿತ ಪ್ರಶ್ನೋತ್ತರಗಳಿಂದ ಭಾಷಾಭಿವೃದ್ಧಿಯಾಗದು. ಹಾಲಿಡೇಯವರ ಪ್ರಕಾರ ನಾನಾ ಭಾಷಾ ಕ್ರಿಯೆಗಳಿವೆ. ಶಾಲೆಗಳಲ್ಲಿ ಅವುಗಳೆಲ್ಲದರ ಉದ್ದೀಪನವಾಗಬೇಕಾಗಿದೆ. ಅದು ಪ್ರಥಮ ಭಾಷೆಯಲ್ಲೇ ಸಾಧ್ಯ ಎಂದು ಸಾರಿ ಹೇಳಬೇಕಾಗಿದೆ.

Writer - ಎನ್. ಸುಕುಮಾರ ಗೌಡ

contributor

Editor - ಎನ್. ಸುಕುಮಾರ ಗೌಡ

contributor

Similar News

ಜಗದಗಲ
ಜಗ ದಗಲ