​ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಚಿವ ಅಠಾವಳೆ ಹೇಳಿದ್ದೇನು ಗೊತ್ತೇ?

Update: 2019-06-20 04:02 GMT

ಹೊಸದಿಲ್ಲಿ, ಜೂ.20: ಕೇಂದ್ರ ಸಚಿವ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) ಮುಖಂಡ ರಾಮದಾಸ್ ಅಠಾವಳೆ ಬುಧವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸ್ವಾರಸ್ಯಕರ ಘಟನೆ ನಡೆಯಿತು.

ನೂತನ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಭಿನಂದನೆ ಸಲ್ಲಿಸುವ ಭಾಷಣದಲ್ಲಿ ಅಠಾವಳೆ, "ನಾನು ಮೊದಲು ಯುಪಿಎ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ಜತೆಗಿದ್ದೆ. ಆದರೆ ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎನ್ನುವುದನ್ನು ತಿಳಿದುಕೊಂಡು ಎನ್‌ಡಿಎಗೆ ಬಂದೆ" ಎಂದು ಹೇಳಿದರು.

ಚುನಾವಣೆಗೆ ಮುನ್ನ ಕಾಂಗ್ರೆಸ್ ಕಡೆಗೆ ಬರುವಂತೆ ಆ ಪಕ್ಷದ ಮುಖಂಡರು ಕೇಳಿದರು. ಆಗ ನಿಮ್ಮೆಡೆಗೆ ಯಾಕೆ ಬರಬೇಕು? ಗಾಳಿ ಯಾವ ಕಡೆಗೆ ಬೀಸುತ್ತಿದೆ ಎನ್ನುವುದನ್ನು ಕಂಡುಕೊಂಡಿದ್ದೇನೆ. ಗಾಳಿ ಮೋದಿಯವರ ಕಡೆಗೆ ಬೀಸುತ್ತಿದೆ ಎಂದು ಹೇಳಿದ್ದಾಗಿ ಅಠಾವಳೆ ವಿವರಿಸಿದರು.

ತಮ್ಮ ಭಾಷಣದಲ್ಲಿ ರಾಹುಲ್ ಹೆಸರನ್ನೂ ಉಲ್ಲೇಖಿಸಿ, "ರಾಹುಲ್ ನನ್ನ ಸ್ನೇಹಿತ. ನೀವು ಎಲ್ಲಿದ್ದೀರೋ ಅದಕ್ಕೆ ನಾನು ನಿಮಗೆ ಅಭಿನಂದನೆ ಹೇಳುತ್ತೇನೆ. ನೀವು ಕಠಿಣ ಪರಿಶ್ರಮ ಹಾಕಿದ್ದೀರಿ. ಆದರೆ ಪ್ರಜಾಪ್ರಭುತ್ವದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೋ ಅವರನ್ನೇ ಜನ ಬೆಂಬಲಿಸುತ್ತಾರೆ" ಎಂದು ಹೇಳಿದರು.

ಕವಿತೆಯ ಮೂಲಕ ತಮ್ಮ ಭಾಷಣ ಆರಂಭಿಸಿದ ಅಠಾವಳೆ, ಹೊಸ ಸ್ಪೀಕರ್ ಅವರನ್ನು ನಗಿಸುವ ಭರವಸೆ ನೀಡಿದರು. "ನೀವು ನಗುವುದಿಲ್ಲ; ಆದರೆ ನಾನು ನಿಮ್ಮನ್ನು ನಗುವಂತೆ ಮಾಡುತ್ತೇನೆ" ಎಂದೇ ಭಾಷಣ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News