ಮುಝಫ್ಫರಪುರ್: ನೂರಾರು ಮಕ್ಕಳು ಮೆದುಳಿನ ಉರಿಯೂತದಿಂದ ಸಾವಿಗೀಡಾಗಲು ಈ ಹಣ್ಣು ಕಾರಣ?

Update: 2019-06-20 06:09 GMT

ಪಾಟ್ನಾ, ಜೂ.20: ಬಿಹಾರದ ಮುಝಫ್ಫರಪುರದಲ್ಲಿ ಬೆಳೆಸಲಾಗುವ ಲಿಚೀ ಎಂಬ ಹೆಸರಿನ ಸಣ್ಣ ಕೆಂಪು ಬಣ್ಣದ ಹಣ್ಣಿಗೂ ರಾಜ್ಯದಲ್ಲಿ ಮೆದುಳಿನ ಉರಿಯೂತದಿಂದ ಸಂಭವಿಸಿದ ಕನಿಷ್ಠ 150 ಮಕ್ಕಳ ಸಾವಿಗೂ ಸಂಬಂಧವಿದೆಯೇ ಎಂಬ ವಿಚಾರ ಈಗ ವ್ಯಾಪಕವಾಗಿ ಚರ್ಚೆಗೀಡಾಗುತ್ತಿದೆ.

ಚೀನಾದಲ್ಲಿ ಮೂಲತಃ ಬೆಳೆಸಲಾಗುತ್ತಿದ್ದ ಈ ಲಿಚೀ ಹಣ್ಣಿನಲ್ಲಿರುವ ಕೆಲ ವಿಷಕಾರಕ ಅಂಶಗಳೇ ಸುಮಾರು 200 ಮಕ್ಕಳಲ್ಲಿ ಎನ್ಸಿಫಾಲಿಟಿಸ್ ಅಥವಾ ಮೆದುಳಿನ ಉರಿಯೂತ ಲಕ್ಷಣಗಳಿಗೆ ಕಾರಣವಾಗಿದ್ದು, ಅವರಲ್ಲಿ 100 ಮಂದಿ ಗಂಭೀರ ಸ್ಥಿತಿ ತಲುಪಲು ಕಾರಣವೆಂದು ಶಂಕಿಸಲಾಗಿದೆ. ಬಿಹಾರದಲ್ಲಿ ಪ್ರತಿ ವರ್ಷ ಈ ಹಣ್ಣು ಲಭ್ಯವಾಗುವ ಬೇಸಿಗೆಯ ಸಮಯದಲ್ಲಿಯೇ ಮೆದುಳಿನ ಉರಿಯೂತ ಸಮಸ್ಯೆ ಕಾಡುತ್ತದೆಯಾದರೂ ಈ ಬಾರಿ ಸಾವಿನ ಪ್ರಮಾಣ ಆಘಾತಕಾರಿಯಾಗಿದೆ.

ಮಕ್ಕಳು, ಮುಖ್ಯವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರೇ ಹೆಚ್ಚಾಗಿ ಸಾವಿಗೀಡಾಗಿರುವುದರಿಂದ ಈ ಹಣ್ಣು ಯಾವ ರೀತಿ ಮಕ್ಕಳಿಗೆ ಹಾನಿಕರವೆಂಬ ಪ್ರಶ್ನೆಯೂ ಎದ್ದಿದೆ.

ಲಿಚೀ ಹಣ್ಣಿನ ಬೀಜದಲ್ಲಿ ಅಸಾಮಾನ್ಯ ಅಮಿನೋ ಆ್ಯಸಿಡ್ ಎಂದು ತಿಳಿಯಲಾದ ಹಿಪೊಗ್ಲೈಸಿನ್-ಎ ಅಥವಾ ಮಿಥೈಲೀನ್ ಸೈಕ್ಲೊಪ್ರೊಪೈಲ್ ಗ್ಲೈಸೀನ್ (ಎಂಸಿಪಿಜಿ)- ಒಂದು ನೈಸರ್ಗಿಕ ಹಣ್ಣು ಆಧರಿತ ವಿಷಕಾರಕ ಅಂಶವಿದೆ ಎಂದು 2017ರಲ್ಲಿ ಲಾನ್ಸೆಟ್ ಗ್ಲೋಬಲ್ ಹೆಲ್ತ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನಾ ವರದಿ ತಿಳಿಸಿತ್ತು. ಮುಝಫ್ಫರಪುರ್ ನಲ್ಲಿ ವರದಿಯಾದ ಮೆದುಳಿನ ಉರಿಯೂತ ಪ್ರಕರಣಗಳನ್ನಾಧರಿಸಿ ಈ ಅಧ್ಯಯನ ನಡೆಸಲಾಗಿತ್ತು.

ಹೈಪೋಗ್ಲೈಸಿನ್ ಎ ಅಥವಾ ಎಂಸಿಪಿಜಿ ಮಾನವ ದೇಹದ ವಿವಿಧ ಚಯಾಪಚಯ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆಯಲ್ಲದೆ ದೇಹದಲ್ಲಿನ ಗ್ಲುಕೋಸ್ ಪ್ರಮಾಣದ ಮೇಲೂ ಪರಿಣಾಮ ಬೀರುವುದರಿಂದ ಹೈಪೋಗ್ಲೈಸೀಮಿಯಾ ಅಂದರೆ ದೇಹದಲ್ಲಿನ ಸಕ್ಕರೆ ಅಂಶ ತೀರಾ ಕುಸಿದು ಎನ್ಸಿಫಾಲೋಪತಿಗೆ ಕಾರಣವಾಗುತ್ತದೆ. ಈ ಹಣ್ಣಿನ ಬೀಜ ಮಾತ್ರವಲ್ಲದೆ ಅದರ ತಿರುಳು ಕೂಡ ಎಂಸಿಪಿಜಿ ಹೊಂದಿದೆ ಎನ್ನಲಾಗಿದ್ದು, ಇದನ್ನು ಹೈಪೋಗ್ಲೈಸಿನ್-ಜಿ ಎಂದು ಹೆಸರಿಸಲಾಗಿದೆ.

ಲಿಚೀ ತಿಂದಾಗ ಏನಾಗುತ್ತದೆ ?
ಮುಝ್ಝಫರಪುರ್ ನಲ್ಲಿ ಹಲವು ಮಕ್ಕಳಿಗೆ ಅಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಂ (ಎಇಎಸ್) ಕಾಡುತ್ತಿದೆ. ಸಾಮಾನ್ಯವಾಗಿ ಮೆದುಳಿನ ಉರಿಯೂತ ಸಂಭವಿಸಿದಾಗ ತೀವ್ರ ಜ್ವರ, ಮಾನಸಿಕ ಗೊಂದಲ, ಡೆಲಿರಿಯಂ ಹಾಗೂ ಕೋಮಾ ಸ್ಥಿತಿಗೆ ರೋಗಿ ತಲುಪುತ್ತಾನೆ. ಹೆಚ್ಚಾಗಿ 15 ವರ್ಷದ ಕೆಳಗಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.

ಭಾರತದಲ್ಲಿ ಅತ್ಯಂತ ಹೆಚ್ಚು ಲಿಚೀ ಬೆಳೆಯುವ ಪ್ರದೇಶ ಮುಝಫ್ಫರಪುರ್ ನಲ್ಲಿದೆ. ಬಹಳಷ್ಟು ಗಂಟೆಗಳ ಕಾಲ ಊಟ ಮಾಡದೇ ಅಥವಾ ಉಪವಾಸವಿದ್ದವರು ಮುಖ್ಯವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಲಿಚಿ ತಿಂದರೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದು ಹಲವು ಅಧ್ಯಯನಗಳು ಕಂಡುಕೊಂಡಿವೆ.

ಮುಝಫ್ಫರಪುರ್ ನಲ್ಲಿ ಅಲ್ಲಲ್ಲಿ ಬೆಳೆಸಲಾಗುವ ಲಿಚೀಯನ್ನು ತಿನ್ನುವ ಮಕ್ಕಳು ಮನೆಗೆ ಮರಳಿದ ನಂತರ ಹೊಟ್ಟೆ ತುಂಬಿದ ಕಾರಣ ಊಟ ಮಾಡದೇ ಇರುವುದರಿಂದ ಅವರ ದೇಹದ ಸಕ್ಕರೆಯಂಶ ಕುಸಿದು ಸಮಸ್ಯೆ ಸೃಷ್ಟಿಸುತ್ತವೆ ಎಂದು ಅಧ್ಯಯನಗಳು ತಿಳಿಸಿವೆ.

ಲಿಚೀ ಹಣ್ಣನ್ನು ಆದಷ್ಟು ಕಡಿಮೆ ಸೇವಿಸುವ ಮೂಲಕ ಹಾಗೂ ಅದನ್ನು ತಿಂದ ನಂತರ ಊಟ ಮಾಡದೇ ಹಾಗೆಯೇ ಮಲಗುವ ಬದಲು ಊಟ ಮಾಡಿ ಮಲಗಿದಲ್ಲಿ ಈ ಸಮಸ್ಯೆ ಕಾಡುವ ಸಾಧ್ಯತೆ ಕಡಿಮೆ ಎಂದೂ ಕೆಲ ಅಧ್ಯಯನಗಳು ತಿಳಿಸಿವೆ.

ಆದರೆ ಬಿಹಾರದಲ್ಲಿ ಸಾವಿಗೀಡಾದ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆಂಬುದು ಇಲ್ಲಿ ಉಲ್ಲೇಖಾರ್ಹ. ಬಿಹಾರದಲ್ಲಿ ಈ ಸಮಸ್ಯೆ 2013ರಿಂದ ಪ್ರತಿ ಬೇಸಿಗೆ ಕಾಲದಲ್ಲೂ ಕಾಡುತ್ತಿದೆ. ಆದರೂ ಸರಕಾರ ಈ ಸಮಸ್ಯೆಯನ್ನು ಎದುರಿಸಲು ಅಥವಾ ನಿವಾರಿಸಲು ಸಾಕಷ್ಟು ಪ್ರಯತ್ನ ಪಟ್ಟಿಲ್ಲ ಎಂಬುದು ವಾಸ್ತವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News