ವೋಟು ಹಾಕದಿದ್ದವರಿಗೆ ರಸ್ತೆಯಿಲ್ಲ !: ರಾಜಕೀಯ ವೈಷಮ್ಯಕ್ಕೆ ವಿಲಕ್ಷಣ ತಿರುವು

Update: 2019-06-20 16:28 GMT

ವಿಜಯವಾಡ, ಜೂ.20: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ತೆಲುಗುದೇಶಂ ಪಕ್ಷದ ನಡುವಿನ ರಾಜಕೀಯ ವೈಷಮ್ಯ ಈಗ ವಿಲಕ್ಷಣ ರೂಪ ಪಡೆದಿದೆ. ಗುಂಟೂರಿನ ಗ್ರಾಮವೊಂದರಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ರಸ್ತೆಯೊಂದಕ್ಕೆ ಗೋಡೆ ನಿರ್ಮಿಸಿ, ಟಿಡಿಪಿ ಕಾರ್ಯಕರ್ತರು ಉಪಯೋಗಿಸದಂತೆ ತಡೆದ ಘಟನೆ ನಡೆದಿದೆ.

ಗುಂಟೂರಿನ ಪೊನುಗುಪಾಡು ಎಂಬಲ್ಲಿ ಗ್ರಾಮವನ್ನು ಪ್ರವೇಶಿಸುವ ರಸ್ತೆಯ ಮಧ್ಯೆ ಗೋಡೆ ನಿರ್ಮಿಸಲಾಗಿದೆ. ರಸ್ತೆ ಹಾದುಹೋಗುವ ಸ್ಥಳ ಖಾಸಗಿಯವರಿಗೆ ಸೇರಿದ್ದ ಕಾರಣ ರಸ್ತೆ ಮುಚ್ಚಲಾಗಿದೆ ಎಂಬುದು ಒಂದು ತಂಡದ ವಾದವಾಗಿದೆ. ಆದರೆ ಇದು ಕಂದಾಯ ಇಲಾಖೆಗೆ ಸೇರಿದ ರಸ್ತೆಯಾಗಿದ್ದು ಕಳೆದ 80 ವರ್ಷದಿಂದ ಜನರು ಬಳಸುತ್ತಿದ್ದಾರೆ. ಕಂದಾಯ ಇಲಾಖೆಗೆ ಸೇರಿದ ರಸ್ತೆಯಲ್ಲಿ ವೈಎಸ್‌ಆರ್ ಪಕ್ಷದ ಕಾರ್ಯಕರ್ತರು ಗೋಡೆ ನಿರ್ಮಿಸಿದ್ದಾರೆ ಎಂಬುದು ಟಿಡಿಪಿ ಪಕ್ಷದವರ ಆರೋಪವಾಗಿದೆ.

 ಸ್ಥಳದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದ್ದು ಎರಡೂ ಪಕ್ಷದವರ ಹೇಳಿಕೆಯನ್ನು ಕಂದಾಯ ಇಲಾಖೆಯ ಗಮನಕ್ಕೆ ತರಲಾಗಿದೆ. ಅವರು ದಾಖಲೆ ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಡಿ.ಶ್ರೀಹರಿ ಹೇಳಿದ್ದಾರೆ. ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಕಾರ್ಯಕರ್ತರು ಸುಮಾರು 10 ತಿಂಗಳ ಹಿಂದೆ ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯನ್ನು ಒಡೆದು ಹಾಕಿದ್ದಾರೆ. ಕಾರಣವಿಷ್ಟೇ, ಇಲ್ಲಿರುವ ಮುಸ್ಲಿಂ ಸಮುದಾಯ ವಾಸಿಸುವ ಕಾಲೊನಿಯನ್ನು ಸಂಪರ್ಕಿಸುವ ಈ ರಸ್ತೆಯನ್ನು ಟಿಡಿಪಿ ಸರಕಾರದ ಅವಧಿಯಲ್ಲಿ ನಿರ್ಮಿಸಲಾಗಿತ್ತು. ಅಲ್ಲದೆ ಕಾಲೊನಿ ನಿವಾಸಿಗಳು ಟಿಡಿಪಿ ಪಕ್ಷಕ್ಕೆ ಮತಹಾಕಿದ್ದರು.

 ಅವರು ವೈಎಸ್‌ಆರ್‌ಸಿಪಿಗೆ ಓಟು ಹಾಕದ ಕಾರಣ ರಸ್ತೆ ಬಳಸಲು ಅವರಿಗೆ ಅಧಿಕಾರವಿಲ್ಲ ಎಂಬ ಕಾರಣಕ್ಕೆ ರಸ್ತೆ ಒಡೆಯಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಪೊಲೀಸರು ಎರಡೂ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News