ಅಮೆರಿಕದ ಬೇಹುಗಾರಿಕಾ ಡ್ರೋನ್ ಹೊಡೆದುರುಳಿಸಿದ್ದೇವೆ: ಇರಾನ್

Update: 2019-06-20 17:02 GMT

ಟೆಹರಾನ್, ಜೂ. 20: ಅಮೆರಿಕದ ಬೇಹುಗಾರಿಕಾ ಡ್ರೋನ್ ಒಂದು ಇರಾನ್ ವಾಯುಪ್ರದೇಶವನ್ನು ಉಲ್ಲಂಘಿಸಿದ ಬಳಿಕ, ಕರಾವಳಿ ರಾಜ್ಯ ಹೊರ್ಮೊಝ್ಗನ್‌ನಲ್ಲಿ ಹೊಡೆದುರುಳಿಸಿರುವುದಾಗಿ ಇರಾನ್‌ನ ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್ ಗುರುವಾರ ಹೇಳಿದೆ.

ಅಮೆರಿಕ ನಿರ್ಮಿತ ‘ಗ್ಲೋಬಲ್ ಹಾಕ್’ ಬೇಹುಗಾರಿಕಾ ಡ್ರೋನನ್ನು ತನ್ನ ವಾಯುಪಡೆಯು ಜಸ್ಕ್ ಕೌಂಟಿ ಎಂಬ ಜಿಲ್ಲೆಯ ಕೌಹೆ ಮುಬಾರಕ್‌ಗೆ ಸಮೀಪ ಹೊಡೆದುರುಳಿಸಿತು ಎಂದು ಕಾರ್ಪ್ಸ್ ಹೇಳಿರುವುದಾಗಿ ಸರಕಾರಿ ಒಡೆತನದ ‘ಪ್ರೆಸ್ ಟಿವಿ’ ವರದಿ ಮಾಡಿದೆ.

ಆದಾಗ್ಯೂ, ಗುರುವಾರ ಯಾವುದೇ ಅಮೆರಿಕ ವಿಮಾನವು ಇರಾನ್ ವಾಯುಪ್ರದೇಶದಲ್ಲಿ ಇರಲಿಲ್ಲ ಎಂಬುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ವಕ್ತಾರ ಬಿಲ್ ಅರ್ಬನ್ ಹೇಳಿದ್ದಾರೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅದೇ ವೇಳೆ, ಡ್ರೋನ್‌ನ ಚಿತ್ರವನ್ನೂ ಪ್ರೆಸ್ ಟಿವಿ ಒದಗಿಸಿಲ್ಲ.

ಜೂನ್ 13ರಂದು ಒಮಾನ್ ಕೊಲ್ಲಿಯಲ್ಲಿ ಇರಾನ್ ಎರಡು ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದೆ ಎಂಬುದಾಗಿ ಅಮೆರಿಕ ಆರೋಪಿಸಿದ ಬೆನ್ನಿಗೇ ಈ ಘಟನೆ ವರದಿಯಾಗಿದೆ.

ಹೊರ್ಮೊಝ್ಗನ್ ರಾಜ್ಯಕ್ಕೆ ಹೊಂದಿಕೊಂಡು ಹೋರ್ಮುಝ್ ಜಲಸಂಧಿ ಇದೆ. ಹೋರ್ಮುಝ್ ಜಲಸಂಧಿಯಲ್ಲೇ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿದ್ದವು.

30 ಗಂಟೆ ಕಾಲ ನಿರಂತರ ಕಾರ್ಯಾಚರಣೆ ಸಾಮರ್ಥ್ಯ

  ಮಾನವರಹಿತ ‘ಆರ್‌ಕ್ಯೂ-4 ಗ್ಲೋಬಲ್ ಹಾಕ್’ ವಿಮಾನವು ಅತಿ ಎತ್ತರದಲ್ಲಿ ಹಾರುತ್ತಾ, ಎಲ್ಲ ವಿಧದ ಹವಾಮಾನ ಪರಿಸ್ಥಿತಿಗಳಲ್ಲಿ ಬೃಹತ್ ಭೂಪ್ರದೇಶಗಳ ಅತ್ಯುನ್ನತ ಗುಣಮಟ್ಟದ ಚಿತ್ರಗಳನ್ನು ತೆಗೆಯಬಲ್ಲದು ಹಾಗೂ 30 ಗಂಟೆಗಳ ಕಾಲ ನಿರಂತರವಾಗಿ ಈ ರೀತಿಯ ಕಾರ್ಯಾಚರಣೆ ನಡೆಸಬಲ್ಲದು ಎಂದು ಅದರ ತಯಾರಕ ಕಂಪೆನಿ ನಾರ್ತ್‌ರಾಪ್ ಗ್ರಮ್ಮನ್ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News