ಜೆಟ್ ಏರ್‌ವೇಸ್ ದಿವಾಳಿತನ ಪ್ರಕ್ರಿಯೆ 90 ದಿನದಲ್ಲಿ ಪೂರ್ಣಗೊಳಿಸಲು ಸೂಚನೆ

Update: 2019-06-20 18:03 GMT

ಹೊಸದಿಲ್ಲಿ, ಜೂ.20: ಜೆಟ್ ಏರ್‌ವೇಸ್‌ನ ದಿವಾಳಿತನ ಪ್ರಕ್ರಿಯೆಯನ್ನು ಆರಂಭಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರುವ ‘ದಿ ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್(ಎನ್‌ಸಿಎಲ್‌ಟಿ)’, 90 ದಿನಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ. 

ಇದು ರಾಷ್ಟ್ರೀಯ ಮಹತ್ವದ ವಿಷಯವಾಗಿದೆ. ಅಲ್ಲದೆ ಪ್ರಕ್ರಿಯೆಯ ಪ್ರಗತಿಯ ಬಗ್ಗೆ ಪ್ರತೀ ಎರಡು ವಾರಕ್ಕೊಮ್ಮೆ ಯಥಾಸ್ಥಿತಿ ವರದಿ ಸಲ್ಲಿಸಬೇಕು ಎಂದು ಎನ್‌ಸಿಎಲ್‌ಟಿ ಸೂಚಿಸಿದೆ. ಎಪ್ರಿಲ್ 17ರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ನಿಂದ ಬರಬೇಕಿರುವ 8,500 ಕೋಟಿ ರೂ.ಗೂ ಹೆಚ್ಚಿನ ಸಾಲವನ್ನು ವಸೂಲು ಮಾಡುವ ಕುರಿತು 26 ಬ್ಯಾಂಕ್‌ಗಳ ಜೊತೆ ಭಾರತೀಯ ಸ್ಟೇಟ್ ಬ್ಯಾಂಕ್ ಮುಂಬೈಯಲ್ಲಿ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ಹಿನ್ನೆಲೆಯಲ್ಲಿ ಬುಧವಾರ ಎನ್‌ಸಿಎಲ್‌ಟಿಗೆ ಅರ್ಜಿ ಸಲ್ಲಿಸಿದ್ದ ಜೆಟ್ ಏರ್‌ವೇಸ್‌ನ ಪೈಲಟ್‌ಗಳ ಯೂನಿಯನ್, ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ತಮ್ಮನ್ನೂ ಒಂದು ಪಕ್ಷವೆಂದು ಪರಿಗಣಿಸುವಂತೆ ಕೋರಿದ್ದರು. ಜೆಟ್‌ಏರ್‌ವೇಸ್‌ನ ಸಿಬ್ಬಂದಿಗಳಿಗೆ ಸುಮಾರು 3 ಸಾವಿರ ಕೋಟಿ ರೂ. ವೇತನ ಪಾವತಿಸಲು ಬಾಕಿಯಿದೆ ಎನ್ನಲಾಗಿದೆ.

ಇದೇ ವೇಳೆ, ಜೆಟ್‌ಏರ್‌ವೇಸ್ ಸಂಸ್ಥೆಗೆ ಸರಕು ಸಾಗಣೆಗೆ ನೆರವು, ದಾಸ್ತಾನು ಸೌಲಭ್ಯ ಪೂರೈಸಿದ್ದ ಹಾಲಂಡಿನ ಎರಡು ಸಂಸ್ಥೆಗಳೂ ತಮಗೆ ಬರಬೇಕಿರುವ ಬಾಕಿಯ ಹಿನ್ನೆಲೆಯಲ್ಲಿ ಜೆಟ್‌ಏರ್‌ವೇಸ್‌ನ ವಿಮಾನವೊಂದನ್ನು ಜಫ್ತಿ ಮಾಡಿಕೊಂಡಿರುವ ಬಗ್ಗೆ ಸಲ್ಲಿಸಿರುವ ಅರ್ಜಿಯನ್ನೂ ನ್ಯಾಯಾಲಯ ವಿಚಾರಣೆಗೆ ಎತ್ತಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News