ಎನ್‌ಐಎ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಪ್ರಜ್ಞಾ ಸಿಂಗ್ ಒಂದು ದಿನ ವಿನಾಯತಿ

Update: 2019-06-21 18:00 GMT

ಮುಂಬೈ, ಜೂ. 20: 2008ರ ಮಾಲೇಂಗಾವ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಂಬೈಯ ವಿಶೇಷ ಎನ್‌ಐಎ ನ್ಯಾಯಾಲಯ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಮತ್ತೊಮ್ಮೆ ಶುಕ್ರವಾರ ತನ್ನ ಮುಂದೆ ಹಾಜರಾಗುವುದರಿಂದ ವಿನಾಯತಿ ನೀಡಿದೆ.

ಸಂಸತ್ ಅಧಿವೇಶನದ ಕಾರಣಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವು ದಿಲ್ಲ. ಆದುದರಿಂದ ವಿನಾಯಿತಿ ನೀಡುವಂತೆ ಠಾಕೂರ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಾರಕ್ಕೆ ಒಂದು ದಿನ ಮಾತ್ರ ನ್ಯಾಯಾಲಯದ ಮುಂದೆ ಹಾಜರಾಗಲು ಅನುಮತಿ ನೀಡುವಂತೆ ಕೋರಿ ಠಾಕೂರ್ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ, ಹಾಜಾರಾಗುವುದಕ್ಕೆ ನ್ಯಾಯಾಲಯ ಶುಕ್ರವಾರ ಮಾತ್ರ ವಿನಾಯಿತಿ ನೀಡಿದೆ. ಠಾಕೂರ್ ಈ ಹಿಂದೆ ಮನವಿ ಸಲ್ಲಿಸಿದಾಗ ನ್ಯಾಯಾಲಯದಲ್ಲಿ ಹಾಜರಾಗದಿರಲು ಅನಾರೋಗ್ಯ, ಪ್ರಯಾಣದ ಅಂತರ, ಭದ್ರತೆ, ಸಂಸತ್ತಿಗೆ ದಿನನಿತ್ಯ ಹಾಜರಾಗಬೇಕಾಗದ ಅಗತ್ಯ, ಧಾರ್ಮಿಕ ನಾಯಕಿಯಾಗಿರುವುದು ಮೊದಲಾದ ಕಾರಣಗಳನ್ನು ನೀಡಿದ್ದರು. ಅನಾರೋಗ್ಯದ ಕಾರಣ ಒಡ್ಡಿ ಠಾಕೂರ್ ಜೂನ್ 6ರ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ, ಅದೇ ದಿನ ಅವರು ರಜಪೂತರ ರಾಜ ಮಹಾರಾಣಾ ಪ್ರತಾಪ್‌ರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಬೋಫಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆದರೆ, ಠಾಕೂರ್ ಅವರ ವಕೀಲ, ಠಾಕೂರ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಅಲ್ಲದೆ ಅವರು ಭೋಪಾಲದಿಂದ ಮುಂಬೈಗೆ ಪ್ರಯಾಣಿಸುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಹೇಳಿದ್ದರು. ನ್ಯಾಯಾಲಯ ಠಾಕೂರ್ ಅವರಿಗೆ ಹಾಜರಾಗುವುದರಿಂದ ಒಂದು ದಿನ ವಿನಾಯಿತಿ ನೀಡಿತ್ತು. ಆದರೆ, ಮುಂದಿನ ದಿನ ಹಾಜರಾಗದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News