ಚೆನ್ನೈ-ಬೆಂಗಳೂರು-ಮೈಸೂರು ಹೈ ಸ್ಪೀಡ್ ರೈಲು ಕಾರಿಡಾರ್: ರೈಲ್ವೆ ಇಲಾಖೆಯಿಂದ ಅಧ್ಯಯನ ವರದಿ
Update: 2019-06-21 23:34 IST
ಹೊಸದಿಲ್ಲಿ, ಜೂ.21: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗವಾಗಿ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣದ ಬಗ್ಗೆ ರೈಲ್ವೆ ಇಲಾಖೆಯು ಕಾರ್ಯಸಾಧ್ಯತಾ ಅಧ್ಯಯನ ವರದಿಯೊಂದನ್ನು ನಡೆಸಿದೆಯೆಂದು ಶುಕ್ರವಾರ ಸಂಸತ್‌ಗೆ ತಿಳಿಸ ಲಾಯಿತು.
ಜರ್ಮನಿ ಸರಕಾರದ ಸಹಕಾರದೊಂದಿಗೆ ಈ ಅಧ್ಯಯನವನ್ನು ನಡೆಸಲಾಯಿತೆಂದು ರೈಲ್ವೆ ಸಚಿವ ಪಿಯೂಶ್ ಗೊಯೆಲ್ ರಾಜ್ಯಸಭೆಗೆ ಲಿಖಿತ ಉತ್ತರವೊಂದರಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಈ ಬಗ್ಗೆ ಯಾವುದೇ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿಲ್ಲವೆಂದು ಅವರು ತಿಳಿಸಿದರು. ಆದರೆ ಕಾರಿಡಾರ್ ಕುರಿತು ವಿಸ್ತೃತವಾದ ಪ್ರಾಜೆಕ್ಟ್ ವರದಿಯನ್ನು ಸಿದ್ದಪಡಿಸುವ ಯಾವುದೇ ಯೋಜನೆಯನ್ನು ರೈಲ್ವೆ ಹೊಂದಿಲ್ಲವೆಂದು ಅವರು ತಿಳಿಸಿದರು. ಪ್ರಸಕ್ತ ರೈಲ್ವೆ ಇಲಾಖೆಯು ಜಪಾನ್‌ನ ಸಹಯೋಗದಲ್ಲಿ ಮುಂಬೈ ಹಾಗೂ ಅಹ್ಮದಾಬಾದ್ ನಡುವಣ ಹೈಸ್ಪೀಡ್ ರೈಲ್ ಕಾರಿಡಾರ್ ಅನ್ನು ಅನುಷ್ಟಾನಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.