ಕತ್ತಲ ಕಾಲದಲ್ಲಿ ಬೆಳಕಿನ ಬೇಸಾಯ...

Update: 2019-06-21 18:26 GMT

ಬರಲಿರುವ ದಿನಗಳಲ್ಲಿ ರಾಜಿಯಾಗದ ಜನಪರ ಧ್ವನಿಗಳನ್ನು ಈ ರೀತಿ ಜೈಲಿಗಟ್ಟುವುದು ಮತ್ತು ಕೊಂದುಹಾಕುವುದು ಇನ್ನೂ ಹೆಚ್ಚಾಗಲಿದೆ. ಮೊದಮೊದಲು ಅವರು ‘ನಕ್ಸಲೈಟರ ಬೆಂಬಲಿಗ’ರನ್ನೋ ಅಥವಾ ‘ತುಕ್ಡೆ ತುಕ್ಡೆ ಗ್ಯಾಂಗ್’ಗಳನ್ನೋ ಹುಡುಕಿ ಬರಬಹುದು..ಆದರೆ ಈಗಾಗಲೇ ಸಾಬೀತಾಗಿರುವಂತೆ ಬಹಳ ವೇಗವಾಗಿ ಅವರು ಎಲ್ಲಾ ಭಿನ್ನಮತೀಯರ ಬೇಟೆ ಶುರು ಮಾಡಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿ ಇನ್ನೂ ಹತ್ತುದಿನಗಳು ಕಳೆದಿಲ್ಲ. ಆಗಲೇ ಹತ್ತೂ ಕಡೆಗಳಿಂದ ಪ್ರಜಾತಂತ್ರದ ಧ್ವನಿಗಳ ಮೇಲೆ ಪ್ರಭುತ್ವದ ಪ್ರಹಾರಗಳು ಪ್ರಾರಂಭವಾಗಿವೆ. 2002ರ ಗುಜರಾತ್ ನರಮೇಧದಲ್ಲಿ ನರೇಂದ್ರ ಮೋದಿಯವರ ಪಾತ್ರದ ಬಗ್ಗೆ ಖಚಿತ ಪುರಾವೆ ನೀಡಿ ಏಕಾಂಗಿ ಹೋರಾಟ ನಡೆಸಿದ್ದ ಹಿರಿಯ ಪೊಲೀಸ್ ಅಧಿಕಾರಿ ಸಂಜೀವ್ ಭಟ್‌ಗೆ 30 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಗುಜರಾತ್ ರಿಪಬ್ಲಿಕ್‌ನ ಜಿಲ್ಲಾ ಕೋರ್ಟೊಂದು ಆಜೀವ ಸೆರೆವಾಸದ ಶಿಕ್ಷೆ ಘೋಷಿಸಿದೆ. ಆದರೆ ಮೋದಿ-ಶಾ ಆಧಿಪತ್ಯದಲ್ಲಿ ಸರಿಯಾಗಿ ಕಪ್ಪ ಸಲ್ಲಿಸದ ಹತ್ತಾರು ಜನರನ್ನು ಎನ್‌ಕೌಂಟರ್ ಕೊಲೆಮಾಡಿದ ಪೊಲೀಸ್ ಅಧಿಕಾರಿ ವಂಝಾರನಂತಹವರು ಮಾತ್ರ ಕಳೆದ ಒಂದೆರಡು ವರ್ಷಗಳಿಂದ ಒಬ್ಬೊಬ್ಬರಾಗಿ ಬಿಡುಗಡೆಯಾಗುತ್ತಿದ್ದಾರೆ. ಇದಕ್ಕೆ ಕೇವಲ ಕೆಲವು ದಿನಗಳ ಮುನ್ನ ಬಿಜೆಪಿ ಸರಕಾರದ ಉಲ್ಲಂಘನೆ ಗಳನ್ನು ಕೋರ್ಟಿನಲ್ಲಿ ಮತ್ತು ಸಾರ್ವಜನಿಕವಾಗಿ ಬಯಲುಗೊಳಿಸುತ್ತಿರುವ ಹಿರಿಯ ಜನಪರ ವಕೀಲೆ ಇಂದಿರಾ ಜೈಸಿಂಗ್ ಅವರ ‘ಲಾಯರ್ಸ್ ಕಲೆಕ್ಟೀವ್’ ಸಂಸ್ಥೆಯ ಮೇಲೆ ಸಿಬಿಐ ಸುಳ್ಳು ಮೊಕದ್ದಮೆ ದಾಖಲಿಸಿದೆ. ಗುಜರಾತ್ ಗಲಭೆಯಲ್ಲಿ ಮೋದಿಯ ಪಾತ್ರದ ಬಗ್ಗೆ ತನಿಖೆಯನ್ನು ಒತಾಯಿಸುತ್ತಿರುವ ಝಕಿಯಾ ಜಾಫ್ರಿಯವರ ಪ್ರಕರಣ ಇದೇ ಜೂನ್ ತಿಂಗಳ ಅಂತ್ಯದ ವೇಳೆಗೆ ಸುಪ್ರೀಂ ಕೋರ್ಟಿನಲ್ಲಿ ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಅದಕ್ಕೆ ಒತ್ತಾಸೆಯಾಗಿ ನಿಂತಿರುವ ತೀಸ್ತಾ ಸೆಟಲ್‌ವಾಡ್ ಅವರ ಮೇಲೆ ಈಗಾಗಲೇ ಸಿಬಿಐ ಒಂದು ಸುಳ್ಳು ಮೊಕದ್ದಮೆ ಹೂಡಿದ್ದು ಸತತ ಕಿರುಕುಳ ನೀಡುತ್ತಿದೆ. ಪ್ರಖ್ಯಾತ ಚಿಂತಕ ಆನಂದ್ ತೇಲ್ತುಂಬ್ಡೆಯವರ ಮೇಲೆ ಹಾಕಿರುವ ಸುಳ್ಳು ದೇಶದ್ರೋಹ ಪ್ರಕರಣದ ನಿರೀಕ್ಷಣಾ ಜಾಮೀನಿನ ಅರ್ಜಿ ಇದೇ ಜುಲೈ 1ರಂದು ಪುಣೆ ಕೋರ್ಟಿನಲ್ಲಿ ಬರಲಿದೆ. ಆದರೆ ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿಸಲಾಗಿರುವ ವರವರರಾವ್, ಸುಧಾ ಭಾರದ್ವಾಜ್ ಇನ್ನಿತರ ಹಲವಾರು ಜನಧ್ವನಿಗಳ ಜಾಮೀನು ಅರ್ಜಿಗಳನ್ನು ಕ್ಷುಲ್ಲಕ ಕಾರಣಗಳನ್ನೊಡ್ಡಿ ತಿರಸ್ಕರಿಸುತ್ತಾ ಬರಲಾಗಿದೆ.

ಅದಕ್ಕೂ ಮುಂಚೆ ಹೋದ ವರ್ಷ ಜೂನ್‌ನಲ್ಲಿ ಬಂಧಿತರಾದ ದಲಿತ-ಕ್ರಾಂತಿಕಾರಿ ಕವಿ ಸುಧೀರ್, ಮಾನವ ಹಕ್ಕುಗಳ ಕಾರ್ಯಕರ್ತ ರೋನಾ ವಿಲ್ಸನ್, ಅಧ್ಯಾಪಕಿ ಶೋಮಾ ಸೇನ್ ಅವರ ಮೇಲೆ ಈವರೆಗೆ ಚಾರ್ಜ್ ಶೀಟನ್ನೂ ದಾಖಲಿಸಿಲ್ಲ. ಜಾಮೀನನ್ನೂ ನೀಡಿಲ್ಲ. ಇನ್ನು ಮಾವೋವಾದಿಗಳ ಬೆಂಬಲಿಗ ಎಂಬ ಸುಳ್ಳು ಆರೋಪಕ್ಕೆ ಶಿಕ್ಷೆ ಅನುಭವಿಸುತ್ತಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಾಪಕ ಸಾಯಿಬಾಬಾರವರು ಶೇ.80ರಷ್ಟು ಅಪಾಂಗಕ್ಕೆ ಗುರಿಯಾಗಿದ್ದರೂ ಮತ್ತು ಅವರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದ್ದರೂ, ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗವೂ ಸಹ ಜಾಮೀನು ನೀಡಬೇಕೆಂದು ಒತ್ತಾಯಿಸಿದ್ದರೂ, ಕನಿಷ್ಠ ಮತ್ತು ಅತ್ಯಗತ್ಯವಾದ ವೈದ್ಯಕೀಯ ಸಹಾಯವನ್ನೂ ದೊರಕಿಸದೆ ಅವರನ್ನು ‘ಸಹಜ ಸಾವಿನತ್ತ’ ದೂಡಲಾಗುತ್ತಿದೆ.

ಆದರೆ ಮತ್ತೊಂದು ಕಡೆ, ನೂರಾರು ಜನರ ಭೀಕರ ನರಮೇಧವನ್ನು ಮಾಡಿದ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುತ್ತಿದ್ದ ಬಾಬಾ ಭಜರಂಗಿಯನ್ನು ಮೋದಿ ಆಡಳಿತದಲ್ಲಿ ‘ಅನುಕಂಪ’ದ ಆಧಾರದ ಮೇಲೆ ಹಾಗೂ ಆರೋಗ್ಯದ ಕಾರಣಕ್ಕಾಗಿ ಶಾಶ್ವತ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಬರಲಿರುವ ದಿನಗಳಲ್ಲಿ ರಾಜಿಯಾಗದ ಜನಪರ ಧ್ವನಿಗಳನ್ನು ಈ ರೀತಿ ಜೈಲಿಗಟ್ಟುವುದು ಮತ್ತು ಕೊಂದುಹಾಕುವುದು ಇನ್ನೂ ಹೆಚ್ಚಾಗಲಿದೆ. ಮೊದಮೊದಲು ಅವರು ‘ನಕ್ಸಲೈಟರ ಬೆಂಬಲಿಗ’ರನ್ನೋ ಅಥವಾ ‘ತುಕ್ಡೆ ತುಕ್ಡೆ ಗ್ಯಾಂಗ್’ಗಳನ್ನೋ ಹುಡುಕಿ ಬರಬಹುದು..ಆದರೆ ಈಗಾಗಲೇ ಸಾಬೀತಾಗಿರುವಂತೆ ಬಹಳ ವೇಗವಾಗಿ ಅವರು ಎಲ್ಲಾ ಭಿನ್ನಮತೀಯರ ಬೇಟೆ ಶುರು ಮಾಡಿದ್ದಾರೆ. ಮೋದಿ ನೇತೃತ್ವ ಫ್ಯಾಶಿಸ್ಟ್ ಆಳ್ವಿಕೆಯ ಗುರಿ ‘ಕಾಂಗ್ರೆಸ್ ಮುಕ್ತ’ ಭಾರತವಲ್ಲ. ಅಷ್ಟೇ ಆಗಿದ್ದರೆ ಅದಕ್ಕೆ ಹೆಚ್ಚು ಕಷ್ಟಪಡಬೇಕಿಲ್ಲ. ಅಥವಾ ‘ವಿರೋಧ ಪಕ್ಷ ಮುಕ್ತ’ ಭಾರತವೂ ಅಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ಬಿಜೆಪಿಯ ಬೀಭತ್ಸ ಗೆಲುವಿನ ನಂತರ ಪ. ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ ಇನ್ನಿತರ ಪ್ರದೇಶಗಳಲ್ಲಿ ಸಾರಾಸಗಟಾಗಿ ನಡೆಯುತ್ತಿರುವ ಪಕ್ಷಾಂತರ ಪರ್ವಗಳು ‘ವಿರೋಧ ಪಕ್ಷ ಮುಕ್ತ’ ಭಾರತವೂ ಒಂದಲ್ಲ ಒಂದು ರೀತಿ ಸಾಧ್ಯ ಎನ್ನುವಂತೆ ಮಾಡಿಯಾಗಿದೆ.

ಅವರ ನಿಜವಾದ ಉದ್ದೇಶ ‘ಪ್ರತಿರೋಧ ಮುಕ್ತ’ ಭಾರತವೇ ಆಗಿದೆ. ಏಕೆಂದರೆ ಮೋದಿ ನೇತೃತ್ವದಲ್ಲಿ ಸಂಘಪರಿವಾರ ಜಾರಿ ಮಾಡಬಯಸುತ್ತಿರುವ ಹಿಂದೂ ರಾಷ್ಟ್ರವು ಸಾರಾಂಶದಲ್ಲಿ ಆದಾನಿ-ಅಂಬಾನಿಗಳಂತಹ ಮತ್ತು ಅವರ ಮೂಲಕ ಈ ದೇಶವನ್ನು ಮತ್ತಷ್ಟು ಲೂಟಿ ಮಾಡಬಯಸುವ ಜಾಗತಿಕ ಕಾರ್ಪೊರೇಟ್ ದೈತ್ಯರ ರಾಷ್ಟ್ರವಾಗಿದೆ. ರೈತರ ಜಮೀನು-ಬೆಳೆ, ಕಾರ್ಮಿಕರ ಬೆವರು, ದೇಶದ ಸಂಪನ್ಮೂಲ, ಬಡವರ ತೆರಿಗೆ ಎಲ್ಲವನ್ನೂ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮತ್ತು ರಾಮಜಪದ ಅಬ್ಬರದಲ್ಲಿ ಸದ್ದಿಲ್ಲದೆ ಪರಭಾರೆ ಮಾಡುವ ಉದ್ದೇಶದಿಂದಲೇ ನೀತಿ ಆಯೋಗ, ಹೊಸ ಶಿಕ್ಷಣ ನೀತಿ, ಹೊಸ ಕೃಷಿ ಮತ್ತು ಕಾರ್ಮಿಕ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ. ಕಾರ್ಪೊರೇಟ್ ಹಿತವನ್ನು ‘ದೇಶದ ಹಿತ’ದ ಹೆಸರಲ್ಲಿ ಅಮೂರ್ತಗೊಳಿಸಿ ಒಪ್ಪಿಸಲಾಗುತ್ತಿದೆ. ಆ ಮೂಲಕ ಈ ನೀತಿಗಳಿಗೆ ಬಲಿಯಾದ ಜನರ ನೋವಿನ ಮುಲುಗಾಟಕ್ಕೂ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ನೋಟು ನಿಷೇಧ, ಜಿಎಸ್‌ಟಿಗಳಂಥ ಜನಕಂಟಕ ಯೋಜನೆಗಳನ್ನು ಜಾರಿ ಮಾಡಿಯೂ ಬಿಜೆಪಿ ಗೆದ್ದುಕೊಂಡದ್ದು ‘‘ಜನರಿಗೆ ಕಷ್ಟವಾದರೂ ದೇಶಕ್ಕೆ ಒಳ್ಳೆಯದು’’ ಎಂಬ ನಯವಂಚಕ ದೇಶಪ್ರೇಮದ ಲೇಬಲ್ಲಿನಲ್ಲೇ. ಇವೆಲ್ಲವೂ ಜನರಿಗೆ ಅರ್ಥವಾಗುವಂತೆ ಮಾಡುವುದು ಮತ್ತು ಈ ಸುಳ್ಳುಗಳ ವಿರುದ್ಧ ಜನರನ್ನು ಸಂಘಟಿಸುವುದೇ ಇಂದು ನಿಜವಾದ ದೇಶಪ್ರೇಮಿ ಜನರ ಮುಂದಿರುವ ಸವಾಲಾದರೆ ಸತ್ಯ ಹೇಳುವವರನ್ನು ಕೊಲ್ಲುವ ಮೂಲಕ ಅಥವಾ ಅಮಾನ್ಯಗೊಳಿಸುವ ಮೂಲಕ ಸುಳ್ಳಿನ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗುವುದು ಈ ನಿಜವಾದ ಜನದ್ರೋಹಿಗಳ-ದೇಶದ್ರೋಹಿಗಳ ಮುಂದಿರುವ ಸವಾಲು. ಆದರೆ ಇಂದಿನ ಸಂದರ್ಭ ಮಾತ್ರ ಸತ್ಯಕ್ಕಿಂತ ಸುಳ್ಳಿಗೆ ಪೂರಕವಾಗಿದೆ. ಏಕೆಂದರೆ ಸುಳ್ಳು ಸಂಘಟಿತವಾಗಿದೆ. ಸತ್ಯ ಅಸಂಘಟಿತವಾಗಿದೆ. ಸುಳ್ಳಿನ ಸೈನಿಕರು ಊರತುಂಬಾ ಪಹರೆ ಕಾಯುತ್ತಿದ್ದರೆ ಸತ್ಯದ ಕಳೇಬರಕ್ಕೆ ವಾರಸುದಾರರು ಮುಂಬರದಂತಾಗಿದೆ.

ಈ ಸಂದರ್ಭವನ್ನು ಮೀರುವುದು ಹೇಗೆ? ಕಗ್ಗತ್ತಲ ಕಾಲದಲ್ಲಿ ಬೆಳಕಿನ ಬೇಸಾಯ ಮಾಡುವುದು ಹೇಗೆ? ಇದಕ್ಕೆ ನೇರ ಮತ್ತು ಸರಳ ಉತ್ತರಗಳಿಲ್ಲ. ಬರಲಿರುವ ದಿನಗಳಲ್ಲಿ ಜನರ ಬದುಕು ಮತ್ತಷ್ಟು ಮತ್ತು ಊಹಿಸಲಾಗದಷ್ಟು ಬವಣೆಗೆ ಗುರಿಯಾಗಲಿದೆ. ಅಂತಹ ನೂರು ಕಾನೂನುಗಳು ಈ ಚುನಾವಣೆ ಮುಗಿಯಲೆಂದೇ ಜಾರಿಗಾಗಿ ಕಾದು ನಿಂತಿದ್ದವು. ಪೆಟ್ರೋಲ್ ಬೆಲೆ ಏರಿಕೆಯಿಂದ ಮೊದಲುಗೊಂಡು, ಬೆಲೆ ಏರಿಕೆ, ನಿರುದ್ಯೋಗ, ಪಡಿತರ, ನೀರು, ಆರೋಗ್ಯ ಸೌಲಭ್ಯಕ್ಕೆ ಕತ್ತರಿಯಂತಹ ಕ್ರಮಗಳು ಈ ಬಜೆಟ್‌ನ ನಂತರದಲ್ಲಿ ಜನರ ಮೇಲೆ ಒಂದೊಂದಾಗಿ ದಾಳಿಮಾಡಲಿವೆ. ಆದರೆ ಕಳೆದ ಐದು ವರ್ಷಗಳ ಅನುಭವವು ತಿಳಿಸುವಂತೆ ಅವೆಲ್ಲವೂ ಹಸಿಹಸಿಯಾಗಿ ಮತ್ತು ನೇರವಾಗಿಯೇನೂ ಜಾರಿಯಾಗುವುದಿಲ್ಲ. ಅವಕ್ಕೆ ‘ಅಭಿವೃದ್ಧಿ’ ಮತ್ತು ‘ದೇಶಪ್ರೇಮ’ದ ಮುಸುಕನ್ನು ತೊಡಿಸಿ ಜನರ ಸಮ್ಮತಿಯನ್ನು ರೂಢಿಸಿಕೊಳ್ಳಲಾಗುತ್ತದೆ ಮತ್ತು ಅದರ ಜಾರಿಗೆ ಖಾಕಿ ಸೈನಿಕರ ಜೊತೆಗೆ ಕಾವಿ ಕೇಸರಿ ಸೈನಿಕರನ್ನೂ ನಿಯೋಜಿಸಲಾಗುತ್ತದೆ. ಅಷ್ಟು ಮಾತ್ರವಲ್ಲ. ಬಲಿಯಾಗುವ ಜನ ಸಮುದಾಯದೊಳಗಿನ ಕೆಲವು ಮಹತ್ವಾಕಾಂಕ್ಷಿ ವ್ಯಕ್ತಿಗಳಿಗೇ ಇದರ ಉಸ್ತುವಾರಿಯನ್ನು ವಹಿಸಿ ಕೇಳಬೇಕಾದ ಪ್ರಶ್ನೆಗಳನ್ನೇ ಬಾಯಿಂದ ಕಿತ್ತುಕೊಳ್ಳಲಾಗುತ್ತದೆ. ಆ ಅವಕಾಶವಾದವನ್ನು ಐತಿಹಾಸಿಕ ಮೇಲ್ಚಲನೆಯೆಂದೂ ಬಣ್ಣಿಸಲಾಗುತ್ತದೆ. ಹಾಗೆಂದು ಜನ ಸುಮ್ಮನೆ ಅನುಭವಿಸುತ್ತಾ ಏನೂ ಕೂರುವುದಿಲ್ಲ. ಈ ಹಿಂದೆಯೂ ಸುಮ್ಮನೆ ಶೋಷಣೆಯನ್ನು ಅನುಭವಿಸಿಲ್ಲ. ಕರಾಳ ನೀತಿಗಳಿಗೆ ಬಲಿಯಾದ ಜನರು ಖಂಡಿತವಾಗಿ ಬೀದಿಗಿಳಿದು ಹೋರಾಡುತ್ತಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಅಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಆಳವಾಗಿ ಬೇರು ಬಿಟ್ಟಿದ್ದರೂ ನೋಟು ನಿಷೇಧದ ನಂತರ ಬದುಕು ಕಳೆದುಕೊಂಡ ಅಲ್ಲಿನ ತೊಗರಿ ಮತ್ತು ಸೋಯಾ ರೈತರು ಬಂಡೇಳಲಿಲ್ಲವೇ?

ಅಷ್ಟು ಮಾತ್ರವಲ್ಲ ಮಂಡಸೂರಿನಲ್ಲಿ ಬಿಜೆಪಿ ಸರಕಾರ ಗೋಲಿಬಾರ್ ಮಾಡಿ ಹತ್ತಾರು ರೈತರನ್ನು ಬಲಿ ತೆಗೆದುಕೊಂಡರೂ ಹೋರಾಟವನ್ನು ದಮನ ಮಾಡಲಾಗಲಿಲ್ಲ. ಆದರೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಡೀ ಮಂಡಸೂರ್ ಪ್ರಾಂತದ ಅಷ್ಟೂ ಕ್ಷೇತ್ರಗಳು ಬಿಜೆಪಿಯ ಪಾಲಾದವು. ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲೂ ಅದೇ ಕಥೆ ಮರುಕಳಿಸಿತು. ಹಾಗೆಯೇ ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ಮುನ್ನ ಮಹದಾಯಿ ನೀರಿನ ವಿಷಯದಲ್ಲಿ ಬಿಜೆಪಿ ಮಾಡಿದ ಅನ್ಯಾಯದ ವಿರುದ್ಧ ನರಗುಂದ-ನವಲಗುಂದ ಪ್ರಾಂತದ ರೈತಾಪಿ ಜನರು ಸಾವಿರ ದಿನಗಳ ಹೋರಾಟವನ್ನು ನಡೆಸಿದ್ದರು. ಆದರೂ ವಿಧಾನ ಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅಲ್ಲಿನ ರೈತಾಪಿ ಮೊದಲಿಗಿಂತ ಹೆಚ್ಚಿನ ವೋಟುಗಳೊಂದಿಗೆ ಬಿಜೆಪಿಯನ್ನು ಗೆಲ್ಲಿಸಿದರು. ಹೀಗೆ ಇದು ಮೈಗೆ ಬಿದ್ದ ಪೆಟ್ಟು ಮೆದುಳಿಗೆ ತಲುಪದಂತಹ ಮೊದಲಿಗಿಂತ ವಿಭಿನ್ನವಾದ ಸಂದರ್ಭ. ಜನರ ಭೌತಿಕ ಬದುಕು ಸಹಜವಾಗಿ ಕೊಡಬೇಕಿದ್ದ ಪ್ರತಿರೋಧ ಪ್ರಜ್ಞೆಯನ್ನು ಪಾರಂಪರಿಕವಾದ ಮೇಲ್ಜಾತಿ ಹಾಗೂ ಇತರ ಸಂಕುಚಿತ ಭಾವನೆಗಳು ಮತ್ತು ಆರೆಸ್ಸೆಸ್ ಪ್ರಣೀತ ದೇಶಪ್ರೇಮ ಮತ್ತು ದೇಶದ ಆತಂಕದ ಪ್ರಶ್ನೆಗಳು ನುಂಗಿಹಾಕುತ್ತಿವೆ. ಇದಕ್ಕೆ ಕಾರಣ ಮತ್ತು ಪರಿಹಾರಗಳನ್ನು ಹುಡುಕಿಕೊಳ್ಳದೆ ಕತ್ತಲ ಕಳೆಯನ್ನು ಬೆಳಕಿನ ಬೇಸಾಯದ ಮೂಲಕ ಕಿತ್ತುಹಾಕಲು ಆಗುವುದೇ ಇಲ್ಲ. ಬರಲಿರುವ ದಿನಗಳಲ್ಲಿ ಕೂಡಾ ಜನರು ಕುಡಿಯುವ ನೀರು, ಪಡಿತರ ಅಕ್ಕಿ, ಸ್ಕೂಲಿನ ಫೀಸು, ತಮ್ಮವರ ಹೆಣವನ್ನು ಕೊಡದ ಆಸ್ಪತ್ರೆಗಳು, ಭೂಮಿಯನ್ನು ಕಿತ್ತುಕೊಳ್ಳುವ ಕಾರ್ಪೊರೇಟುಗಳು, ಉದ್ಯೋಗ ನಿರಾಕರಿಸುವ ಉದ್ದಿಮೆಗಳು, ಹಿಂದಿ-ಸಂಸ್ಕೃತ ಹೇರುವ ಹುನ್ನಾರಗಳು, ದಲಿತರ ಬೆತ್ತಲೆ ಮೆರವಣಿಗೆಗಳು, ತ್ರಿವರ್ಣ ಧ್ವಜದ ರಕ್ಷಣೆಯಲ್ಲಿ ಹಸುಕಂದಮ್ಮಗಳ ರೇಪ್‌ಗಳು, ಮುಸ್ಲಿಮರ ಲಿಂಚಿಂಗ್‌ಗಳು, ಅಮೆರಿಕದ ಗುಲಾಮಿತನಗಳನ್ನು ಜನರು ಸುಮ್ಮನೇ ಸಹಿಸುವುದಿಲ್ಲ. ಜನ ಹೋರಾಡುತ್ತಾರೆ. ಆಗ ಜನರ ಜೊತೆಗೆ, ಜನರ ಮುಂದೆ, ಜನರ ಹಿಂದೆ ಯಾರಿರುತ್ತಾರೆ ಎನ್ನುವುದರ ಮೇಲೆ ಈ ಯುದ್ಧ ನಿರ್ಧಾರವಾಗುತ್ತದೆ.

ಇದು ಸುಲಭವಲ್ಲ. ಇದು ಸತ್ಯದ ಆಗ್ರಹಕ್ಕೆ ಮಣಿದು ಕೇಳಿದ್ದರಲ್ಲಿ ಅಲ್ಪಭಾಗವನ್ನಾದರೂ ಕೊಡಬಹುದಾಗಿದ್ದ ಕಲ್ಯಾಣ ರಾಜ್ಯ ಸರಕಾರವಲ್ಲ. ಬದಲಿಗೆ ಇದು ಜನರ ಬಳಿ ಇರುವುದನ್ನೂ ಕಿತ್ತುಕೊಳ್ಳುವ ಸರಕಾರ. ಕೇಳುವುದನ್ನೇ ಕ್ರಿಮಿನಲ್ ಅಪರಾಧಗೊಳಿಸುವ ವ್ಯವಸ್ಥೆ. ಅಷ್ಟು ಮಾತ್ರವಲ್ಲ ಧಿಕ್ಕಾರಕ್ಕೆ ಕೋರಸ್ಸಿಲ್ಲದಂತೆ ಮಾಡುವ, ಜನರ ನಡುವಿನ ಸೌಹಾರ್ದದಲ್ಲಿ ಬಿರುಕಿನ ಬೀಜಗಳನ್ನು ಬಿತ್ತುವ ಸರಕಾರ. ಹೀಗಾಗಿಯೇ ಅದು ದೇಶವನ್ನು ಹಿಂದಿಗಿಂತ ಹೆಚ್ಚಿನ ದಮನ, ಅವಕಾಶವಾದಿಗಳ ದ್ರೋಹ, ಜನಧ್ವನಿಗಳ ಕಗ್ಗೊಲೆ, ಒಂದಾಗಬೇಕಾದವರ ನಡುವಿನ ಸಣ್ಣತನ, ಅನುಮಾನ, ಅವಿಶ್ವಾಸ, ಅಸಹಾಯಕತೆ, ಹೋರಾಟಗಳ ಏಳು-ಬೀಳು, ತ್ಯಾಗ -ಬಲಿದಾನಗಳ ಒಂದು ಸುದೀರ್ಘ ಪಯಣಕ್ಕೆ ಭಾರತವನ್ನು ದೂಡಿದೆ.

ಆದ್ದರಿಂದ ಇಂದು ಬೆಳಕಿನ ಬೇಸಾಯ ಹಿಂದೆಂದಿಗಿಂತಲೂ ಕಷ್ಟ. ಆದರೂ ಆ ಕಷ್ಟದ ಆಯಾಮಗಳೆಲ್ಲವನ್ನೂ ಅರ್ಥಮಾಡಿಕೊಂಡು ಮುನ್ನಡೆಯಲು ಬೇಕಾದ ಸೈದ್ಧಾಂತಿಕ ಸ್ಪಷ್ಟತೆ, ಜನರ ಬಗ್ಗೆ ಮತ್ತು ಈ ದೇಶದ ಭವಿಷ್ಯದ ಬಗ್ಗೆ ಅಚಲ ಬದ್ಧತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಷ್ಟದಲ್ಲಿರುವ ಜನರೆಲ್ಲರನ್ನು ಸಮಾನ ಬಿಡುಗಡೆಯ ವ್ಯಾಕರಣದಲ್ಲಿ ಒಂದಾಗಿ ಕಟ್ಟುವ ಬಲಿಷ್ಠ ಸಂಘಟನೆಗಳನ್ನು ಕಟ್ಟಿದಲ್ಲಿ ಮಾತ್ರ ಕತ್ತಲು ಉಂಟು ಮಾಡುವ ನಷ್ಟದ ಪ್ರಮಾಣ, ಬೆಳಕು ದೊರೆಯಲು ಬೇಕಾದ ಅವಧಿ ಸಾಪೇಕ್ಷವಾಗಿ ಕಡಿಮೆಯಾಗಬಹುದು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News