ಇಂದು ಪಾಕಿಸ್ತಾನ-ದಕ್ಷಿಣ ಆಫ್ರಿಕ ಮುಖಾಮುಖಿ

Update: 2019-06-22 18:34 GMT

ಲಂಡನ್, ಜೂ.22: ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಈ ತನಕ ಕೇವಲ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕ್ರಮವಾಗಿ 8ನೇ ಹಾಗೂ 9ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನ ತಂಡಗಳು ರವಿವಾರ ಲೀಗ್‌ನ 30ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ದ. ಆಫ್ರಿಕ ಪ್ರತಿಷ್ಠೆಗಾಗಿ ಆಡಲಿದೆ. ಪಾಕಿಸ್ತಾನ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬಂದರೆ ಮಾತ್ರ ಸೆಮಿಫೈನಲ್‌ಗೆ ತಲುಪುವ ಅಲ್ಪ ಅವಕಾಶ ಸಿಗಲಿದೆ.

ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಜೆ.ಪಿ. ಡುಮಿನಿ ಟೂರ್ನಮೆಂಟ್ ಕೊನೆಗೊಂಡ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.

 ‘‘ದಕ್ಷಿಣ ಆಫ್ರಿಕ ವಿರುದ್ಧ ಪಂದ್ಯದ ಮಹತ್ವವೇನೆಂದು ನಮ್ಮ ತಂಡದ ಎಲ್ಲ ಸದಸ್ಯರು ಅರಿತುಕೊಂಡಿದ್ದಾರೆ. ಮಾಡು-ಇಲ್ಲವೇ ಮಡಿ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡುವ ವಿಶ್ವಾಸ ನಮಗಿದೆ’’ಎಂದು ಪಾಕ್‌ನ ವೇಗದ ಬೌಲರ್ ವಹಾಬ್ ರಿಯಾಝ್ ಹೇಳಿದ್ದಾರೆ. ಎರಡೂ ತಂಡಗಳ ದಾಂಡಿಗರು ಏಕರೂಪ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇದು ವಿಶ್ವಕಪ್‌ನ ಅಂಕಪಟ್ಟಿಯಲ್ಲಿ ಎರಡೂ ತಂಡಗಳು ಕೆಳ ಸ್ಥಾನದಲ್ಲಿರಲು ಮುಖ್ಯ ಕಾರಣ ವಾಗಿದೆ. ‘‘ನಮ್ಮ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದೆ. ಟೂರ್ನಮೆಂಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಮಾತ್ರ 300 ರನ್ ಗಳಿಸಿದೆ. ಆದರೆ ಆ ಪಂದ್ಯವೂ ಕೈತಪ್ಪಿ ಹೋಗಿದೆ. ಸ್ಕೋರ್ ಬೋರ್ಡ್ ನಲ್ಲಿ ಸಾಕಷ್ಟು ರನ್ ಗಳಿಸಲು ವಿಫಲವಾಗಿದ್ದೇವೆ. ನಾವು ಬಯಸಿದಂತಹ ಬೌಲಿಂಗ್ ಪಡೆ ನಮ್ಮಲಿಲ್ಲ. ಹಾಗಾಗಿ ಹೆಚ್ಚು ರನ್ ಗಳಿಸುವುದು ನಮಗೆ ಅನಿವಾರ್ಯವಾಗಿದೆ’’ ಎಂದು ದಕ್ಷಿಣ ಆಫ್ರಿಕದ ಕೋಚ್ ಒಟ್ಟಿಸ್ ಗಿಬ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News