ವಿಶ್ವಕಪ್: ಜಯದ ಹೊಸ್ತಿಲಲ್ಲಿ ಎಡವಿದ ವಿಂಡೀಸ್

Update: 2019-06-23 03:35 GMT

ಮ್ಯಾಂಚೆಸ್ಟರ್: ಕಾರ್ಲೋಸ್ ಬ್ರೆತ್‌ವೈಟ್ ಅವರ ಕೊನೆಯ ಹೊಡೆತ ಒಂದಿಂಚು ಮುಂದೆ ಹೋಗಿದ್ದರೆ ಅದು ವಿಜಯದ ಹೊಡೆತವಾಗುತ್ತಿತ್ತು; ವೆಸ್ಟ್‌ಇಂಡೀಸ್ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ನಂಬಲಸಾಧ್ಯ ವಿಜಯ ಸಾಧಿಸುತ್ತಿತ್ತು.

ಆದರೆ ಟ್ರೆಂಟ್ ಬೋಲ್ಟ್ ಲಾಂಗ್ ಆನ್ ಬೌಂಡರಿಯಲ್ಲಿ ಹಿಡಿದ ಅದ್ಭುತ ಕ್ಯಾಚ್ ಫಲಿತಾಂಶವನ್ನು ನ್ಯೂಝಿಲೆಂಡ್ ಕಡೆಗೆ ತಿರುಗಿಸಿತು. ಐದು ರನ್‌ಗಳ ರೋಚಕ ಜಯದೊಂದಿಗೆ ಕಿವೀಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಬ್ರೆತ್‌ವೈಟ್ ಅವರ ಶತಕ (82 ಎಸೆತಗಳಲ್ಲಿ 101, 5 ಸಿಕ್ಸ್ 9 ಬೌಂಡರಿ) ಹಾಗೂ ಕೊನೆಯ ವಿಕೆಟ್‌ಗೆ ಬಂದ 41 ರನ್‌ಗಳು ವ್ಯರ್ಥವಾದವು. ಇದರೊಂದಿಗೆ ವೆಸ್ಟ್‌ಇಂಡೀಸ್‌ನ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಿದೆ.

"ವೆಸ್ಟ್‌ಇಂಡೀಸ್ ತಂಡ ಕೆಳಕ್ರಮಾಂಕದಲ್ಲೂ ಅಪಾಯಕಾರಿ; ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಸ್ಪರ್ಧಾರ್ಹ ಮೊತ್ತ ದಾಖಲಿಸಿದ ನಮ್ಮ ತಂಡಕ್ಕೆ ನಿಜವಾದ ಕೀರ್ತಿ ಸಲ್ಲುತ್ತದೆ" ಎಂದು ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪಂದ್ಯದ ಬಳಿಕ ಹೇಳಿದರು.

"ಇದು ನಮಗೆ ದೊಡ್ಡ ಪಾಠ ಕಲಿಸಿದೆ. ಕೊನೆಯಲ್ಲಿ ಪಂದ್ಯ ಕೈಜಾರಿದರೂ, ನಮ್ಮ ಹುಡುಗರ ಬಗ್ಗೆ ಅದರಲ್ಲೂ ಮುಖ್ಯವಾಗಿ ಬ್ರೆತ್‌ವೈಟ್ ಬಗ್ಗೆ ಹೆಮ್ಮೆ ಇದೆ" ಎಂದು ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಪ್ರತಿಕ್ರಿಯಿಸಿದರು.

292 ರನ್‌ಗಳನ್ನು ಬೆನ್ನಟ್ಟುವ ಪ್ರಯತ್ನದಲ್ಲಿ 164 ರನ್‌ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್‌ಇಂಡೀಸ್ ತಂಡದ ಸೋಲು ಬಹುತೇಕ ಖಚಿತವಾಗಿತ್ತು. ಆದರೆ ಬಾಲಂಗೋಚಿಗಳ ಜತೆ ಸೇರಿ ಬ್ರೆತ್‌ವೈಟ್ ಅಸಾಧ್ಯ ಗೆಲುವನ್ನು ತಂಡಕ್ಕೆ ತಂದುಕೊಡುವಲ್ಲಿ ಹೋರಾಡಿದರೂ ಅಂತಿಮವಾಗಿ ಅದೃಷ್ಟ ನ್ಯೂಝಿಲೆಂಡ್ ಪರವಾಯಿತು.

ಇದಕ್ಕೂ ಮುನ್ನ ಆರಂಭಿಕ ಆಟಗಾರ ಕ್ರಿಸ್‌ಗೇಲ್ 84 ಎಸೆತಗಳಲ್ಲಿ 87 ರನ್ (8 ಬೌಂಡರಿ 6 ಸಿಕ್ಸರ್) ಸಿಡಿಸಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದರು. ಆದರೆ 28 ಎಸೆತಗಳಲ್ಲಿ 22 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಹಿನ್ನೆಲೆಯಲ್ಲಿ ವಿಂಡೀಸ್ ತಂಡ ಸೋಲಿನ ಸುಳಿಗೆ ಸಿಲುಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News