​ಇದು ಮಹಿಳೆಯರಿಗೆ ಶುಭ ಸುದ್ದಿ...

Update: 2019-06-23 06:36 GMT

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಲಿಂಗಾನುಪಾತ ಹೆಚ್ಚಳವಾಗಿದ್ದು, ಕೇರಳ ಹಾಗೂ ಛತ್ತೀಸ್‌ಗಢ ಅಗ್ರಸ್ಥಾನದಲ್ಲಿವೆ.
2015-16ರಲ್ಲಿ 1000 ಗಂಡುಮಕ್ಕಳಿಗೆ 923 ಹೆಣ್ಣುಮಕ್ಕಳಿದ್ದರೆ ಇದೀಗ 931 ಆಗಿದೆ. ಕೇರಳ ಹಾಗೂ ಛತ್ತೀಸ್‌ಗಡದಲ್ಲಿ ಲಿಂಗಾನುಪಾತ 959 ಇದ್ದು, ಮಿಜೋರಾಂ (958), ಗೋವಾ (954) ನಂತರದ ಸ್ಥಾನಗಳಲ್ಲಿವೆ. ದಿಯು ಹಾಗೂ ದಮನ್ (889), ಲಕ್ಷದ್ವೀಪ (891) ಮತ್ತು ಪಂಜಾಬ್ (900) ಕೊನೆಯ ಸ್ಥಾನಿಗಳು.

ಅಖಿಲ ಭಾರತ ಮಟ್ಟದಲ್ಲಿ ಲಿಂಗಾನುಪಾತ 2015-16ರಲ್ಲಿ 923 ಇದ್ದುದು, ಮರುವರ್ಷ 926 ಹಾಗೂ 2017-18ರಲ್ಲಿ 923ಕ್ಕೆ ಹೆಚ್ಚಿದೆ ಎಂದು ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಲೋಕಸಭೆಯಲ್ಲಿ ಉತ್ತರ ನೀಡಿದೆ.

21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 2017-18ರಲ್ಲಿ ಲಿಂಗಾನುಪಾತ ಹೆಚ್ಚಿದ್ದು, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಗರಿಷ್ಠ (51) ಏರಿಕೆಯಾಗಿದೆ. 897ರಷ್ಟಿದ್ದ ಲಿಂಗಾನುಪಾತ ಇಲ್ಲಿ ಈಗ 948ಕ್ಕೇರಿದೆ. ಸಿಕ್ಕಿಂನಲ್ಲಿ 928ರಿಂದ 948ಕ್ಕೆ ಹಾಗೂ ತೆಲಂಗಾಣದಲ್ಲಿ 925ರಿಂದ 943ಕ್ಕೆ ಏರಿಕೆಯಾಗಿದೆ. 12 ರಾಜ್ಯಗಳಲ್ಲಿ ಮಾತ್ರ ಲಿಂಗಾನುಪಾತ 2017-18ನೇ ಸಾಲಿಗೆ ಹೋಲಿಸಿದರೆ ಕುಸಿತ ಕಂಡಿದೆ. ಅರುಣಾಚಲ ಪ್ರದೇಶದಲ್ಲಿ ಭಾರಿ ಕುಸಿತ ಕಂಡುಬಂದಿದ್ದು, ಇಲ್ಲಿ ಲಿಂಗಾನುಪಾತ 956ರಿಂದ 914ಕ್ಕೆ ಕುಸಿದಿದೆ.

ಕೇರಳದ ಜತೆ ಅಗ್ರಸ್ಥಾನ ಹಂಚಿಕೊಂಡಿರುವ ಛತ್ತೀಸ್‌ಗಢದಲ್ಲಿ ಲಿಂಗಾನುಪಾತ 2017-18ಕ್ಕೆ ಹೋಲಿಸಿದರೆ ಕುಸಿದಿದೆ. 2017-18ರಲ್ಲಿ ಛತ್ತೀಸ್‌ಗಢದ ಲಿಂಗಾನುಪಾತ 964 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News