ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿಯಿಂದ ಮಗು ಬೇಕೆಂದು ಮಹಿಳೆ ಮನವಿ

Update: 2019-06-23 16:39 GMT

ಹೊಸದಿಲ್ಲಿ, ಜೂ. 22: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿಯಿಂದ ತನಗೆ ಎರಡನೇ ಮಗು ಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸಿ ಮಹಾರಾಷ್ಟ್ರದ 35 ವರ್ಷದ ಮಹಿಳೆಯೋರ್ವರು ಇಲ್ಲಿನ ಕುಟುಂಬ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಅಪರೂಪದ ಘಟನೆ ವರದಿಯಾಗಿದೆ.

ತನ್ನ ಋತುಚಕ್ರ ನಿಲ್ಲುವ ಮೊದಲು ದಾಂಪತ್ಯ ಸಂಬಂಧ ಮರು ಸ್ಥಾಪನೆ (ಆರ್‌ಸಿಆರ್) ಅಥವಾ ಕೃತಕ ಗರ್ಭದಾರಣೆ ಮೂಲಕ ಮಗು ಪಡೆಯಲು ಅವಕಾಶ ಮಾಡಿಕೊಡಬೇಕೆಂದು ಮಹಿಳೆ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದಾರೆ.

ಪ್ರತ್ಯುತ್ಪಾದನಾ ಹಕ್ಕುಗಳ ವಿಷಯ ಭಾವನಾತ್ಮಕವಾದುದು ಹಾಗೂ ಲಿಂಗ ಸಂಕೀರ್ಣತೆಯಿಂದ ಕೂಡಿದೆ. ಇದು ಕಾನೂನು ಹಾಗೂ ಸಾಮಾಜಿಕ ತೊಡಕು ಉಂಟು ಮಾಡಬಹುದು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಮಹಿಳೆಗೆ ಪ್ರತ್ಯುತ್ಪಾದನೆ ಹಕ್ಕು ಇದೆ ಹಾಗೂ ಈ ವಿಷಯ ಅಸ್ತಿತ್ವಕ್ಕೆ ತರಲು ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಲು ಸಾಧ್ಯ. ಆದರೆ, ಅದನ್ನು ಅಂಗೀಕರಿಸಲು ಕಾನೂನಿನಲ್ಲಿ ಕೆಲವು ಮಿತಿಗಳು ಇವೆ ಎಂದು ಅವರು ಹೇಳಿದರು.

ಸಂತಾನ ಪಡೆಯುವ ಆಕೆಯ ಆಯ್ಕೆ ನ್ಯಾಯಬದ್ಧವಾಗಿರುವುದರಿಂದ ಕೃತಕ ಗರ್ಭಧಾರಣೆ ನಡೆಸಲು ಪತಿ ವೀರ್ಯ ದಾನ ಮಾಡಬೇಕು ಎಂಬ ಮನವಿಯನ್ನು ನ್ಯಾಯಾಲಯ ಎತ್ತಿ ಹಿಡಿಯಿತು.

 ಇಬ್ಬರು ಪ್ರತ್ಯುತ್ಪಾದನಾ ತಂತ್ರಜ್ಞಾನದ ತಜ್ಞರ ನೆರವು ಪಡೆಯುವಂತೆ ನ್ಯಾಯಾಲಯ ನಿರ್ದೇಶಿಸಿತು. ವೀರ್ಯ ದಾನ ಮಾಡಲು ಪತಿಯ ಒಪ್ಪಿಗೆ ನಿರ್ಣಾಯಕ ಎಂದು ನ್ಯಾಯಾಲಯ ಹೇಳಿತು.

ಆದರೆ, ಈ ಮನವಿಗೆ ಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕಾನೂನು ಬಾಹಿರ ಹಾಗೂ ಸಾಮಾಜಿಕ ನಿಯಮಕ್ಕೆ ವಿರುದ್ಧವಾದುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News