ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಜಾ ಕೋರಿ ಪ್ರಧಾನಿಗೆ ಪತ್ರ ಬರೆದ ಸಿಜೆಐ ಗೊಗೋಯಿ

Update: 2019-06-23 17:18 GMT

ಹೊಸದಿಲ್ಲಿ, ಜೂ.23: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಎಸ್ ಎನ್ ಶುಕ್ಲರನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಕೋರಿ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಆಂತರಿಕ ಸಮಿತಿಯೊಂದು ನ್ಯಾಯಾಧೀಶ ಎಸ್ ಎನ್ ಶುಕ್ಲ ವಿರುದ್ಧದ ದುರ್ನಡತೆಯ ದೂರನ್ನು ಎತ್ತಿಹಿಡಿದ ತಿಂಗಳ ಬಳಿಕ ನ್ಯಾ. ಗೊಗೊಯಿ ಪತ್ರ ಬರೆದಿದ್ದಾರೆ.

ನ್ಯಾ. ಶುಕ್ಲ ವಿರುದ್ಧದ ಆರೋಪವು ಅತ್ಯಂತ ಗಂಭೀರವಾದುದು ಎಂದು ಸಮಿತಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಈ ವಿಷಯದ ಬಗ್ಗೆ ಮುಂದಿನ ಕ್ರಮವನ್ನು ನಿಮ್ಮಿಂದ ನಿರೀಕ್ಷಿಸಲಾಗಿದೆ ಎಂದು ಗೊಗೊಯಿ ಬರೆದಿದ್ದ ಪತ್ರದಲ್ಲಿ ತಿಳಿಸಲಾಗಿದೆ.

ನ್ಯಾ. ಶುಕ್ಲಾ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿದ್ದು ಈ ಆರೋಪ ಅತ್ಯಂತ ಗಂಭೀರವಾಗಿರುವ ಕಾರಣ, ಶುಕ್ಲರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಂತರಿಕ ಸಮಿತಿ ಜನವರಿ 18ರಂದು ವರದಿ ನೀಡಿತ್ತು.

ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ, ಸಿಕ್ಕಿಂ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಎಸ್‌ಕೆ ಅಗ್ನಿಹೋತ್ರಿ ಹಾಗೂ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶ ಪಿಕೆ ಜೈಸ್ವಾಲ್ ಸಮಿತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ, ರಾಜೀನಾಮೆ ನೀಡುವಂತೆ ಅಥವಾ ಸ್ವಯಂ ನಿವೃತ್ತಿ ಪಡೆಯುವಂತೆ ನ್ಯಾ. ಶುಕ್ಲಾಗೆ ಆಗ ಮುಖ್ಯ ನ್ಯಾಯಾಧೀಶರಾಗಿದ್ದ ದೀಪಕ್ ಮಿಶ್ರ ಸಲಹೆ ನೀಡಿದ್ದರು. ಆದರೆ ಅವರು ಇದಕ್ಕೆ ನಿರಾಕರಿಸಿದ್ದ ಕಾರಣ ಅವರಿಗೆ ನ್ಯಾಯಾಲಯದಲ್ಲಿ ಯಾವುದೇ ಕಾರ್ಯವನ್ನು ವಹಿಸಿಕೊಡದಿರುವ ನಿರ್ಧಾರಕ್ಕೆ ಬರಲಾಗಿತ್ತು.

ಆ ಬಳಿಕ ನ್ಯಾ. ಶುಕ್ಲ ದೀರ್ಘಾವಧಿ ರಜೆಯ ಮೇಲೆ ತೆರಳಿದ್ದರು. ಸಿಜೆಐ ನೇತೃತ್ವದ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠವು 2017-18ರ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುವ ವಿಷಯದಲ್ಲಿ ನಿಯಂತ್ರಣ ವಿಧಿಸಿತ್ತು . ಆದರೆ ಅಲಹಾಬಾದ್ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಖ್ಯಸ್ಥರಾಗಿದ್ದ ನ್ಯಾ. ಶುಕ್ಲ ಅವರು ಈ ಆದೇಶವನ್ನು ಧಿಕ್ಕರಿಸಿದ್ದರು ಎಂದು ಅವರ ವಿರುದ್ಧ ಎರಡು ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಅಂದಿನ ಸಿಜೆಐ ಬರೆದಿದ್ದ ಪತ್ರದ ಆಧಾರದಲ್ಲಿ ರಾಜ್ಯಸಭೆಯ ಅಧ್ಯಕ್ಷರು ಮೂವರು ಸದಸ್ಯರ ಆಂತರಿಕ ಸಮಿತಿಯನ್ನು ನೇಮಿಸಿದ್ದರು. ತನಿಖೆ ನಡೆಸಿದ್ದ ಆಂತರಿಕ ಸಮಿತಿ ಆರೋಪವನ್ನು ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News