ಇಸ್ತಾಂಬುಲ್ ಮೇಯರ್ ಚುನಾವಣೆಯಲ್ಲಿ ವಿಪಕ್ಷ ಅಭ್ಯರ್ಥಿಗೆ ಜಯ : ಟರ್ಕಿ ಅಧ್ಯಕ್ಷ ಎರ್ದೊಗಾನ್ ಗೆ ಭಾರೀ ಹಿನ್ನಡೆ

Update: 2019-06-24 06:04 GMT

ಇಸ್ತಾಂಬುಲ್ : ಟರ್ಕಿಯ ರಾಜಧಾನಿ ಇಸ್ತಾಂಬುಲ್ ಮೇಯರ್ ಹುದ್ದೆಗೆ ನಡೆದ ಮರು ಚುನಾವಣೆಯಲ್ಲಿ ವಿಪಕ್ಷ ರಿಪಬ್ಲಿಕ್ ಪೀಪಲ್ಸ್ ಪಾರ್ಟಿಯ  ಅಭ್ಯರ್ಥಿ ಅಕ್ರಮ್ ಇಮಾಮೊಗ್ಲು ಅವರು ಶೇ. 54ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದು ಅಧ್ಯಕ್ಷ ತಯ್ಯಿಬ್ ಎರ್ದೊಗಾನ್ ಅವರ ಎ ಕೆ ಪಾರ್ಟಿಗೆ ದೊಡ್ಡ ಹೊಡೆತ ನೀಡಿದ್ದಾರೆ.

ಮೂರು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಅಕ್ರಮ್ ಜಯಗಳಿಸಿದ್ದಾಗ ಎರ್ದೊಗಾನ್ ಅವರ ಎಕೆ ಪಾರ್ಟಿ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿತ್ತು. ನಂತರ  ಭಾರೀ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ರದ್ದು ಪಡಿಸಲಾಗಿತ್ತು.

ಆದರೆ ಈ ನಿರ್ಧಾರ ಟರ್ಕಿಯ ಪಾಶ್ಚಿಮಾತ್ಯ ಮಿತ್ರ ದೇಶಗಳ ಸಹಿತ ದೇಶದಲ್ಲಿನ ಸರಕಾರದ ವಿರೊಧಿಗಳಿಂದ ಭಾರೀ ಟೀಕೆಗೊಳಗಾಗಿತ್ತಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದೂ ಆರೋಪಿಸಲಾಗಿತ್ತು.

ರವಿವಾರ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ  ಅಕ್ರಮ್ ಅವರ ಸಾವಿರಾರು ಬೆಂಬಲಿಗರು ಇಸ್ತಾಂಬುಲ್ ರಸ್ತೆಗಳಿಗಿಳಿದು ಮಾಜಿ ಉದ್ಯುಮಿಯಾಗಿರುವ ಅಕ್ರಮ್ ಅವರು ಅಧ್ಯಕ್ಷ ಎರ್ದೊಗನ್ ಅವರ ಆಯ್ದ ಅಭ್ಯರ್ಥಿಯ ವಿರುದ್ಧ 8 ಲಕ್ಷಕ್ಕೂ ಅಧಿಕ ಮತಗಳ ಅಂತರದ  ವಿಜಯದ ಸಂಭ್ರಮ ಆಚರಿಸಿದರು.

ತಮ್ಮ ವಿಜಯದ ನಂತರ ಮಾತನಾಡಿದ  ಅಕ್ರಮ್, ಇಸ್ತಾಂಬುಲ್ ನಲ್ಲಿ ನ್ಯಾಯ ಮತ್ತು ಪ್ರಜಾಸತ್ತೆಯನ್ನು ಎತ್ತಿ ಹಿಡಿಯುವುದಾಗಿ ಹೇಳಿದರು.

ಎರ್ದೊಗಾನ್ ಅವರು ಟರ್ಕಿಯನ್ನು 2003ರಿಂದ ಆಳುತ್ತಿದ್ದಾರೆ. ಮೊದಲು ಪ್ರಧಾನಿಯಾಗಿದ್ದ ಅವರು ನಂತರ ದೇಶದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅವರ  ಎ ಕೆ ಪಾರ್ಟಿಗೆ ಧಾರ್ಮಿಕ ನಂಬುಗೆಯ ನಾಗರಿಕರ ಬೆಂಬಲವಿದ್ದು, ದೇಶದ ಅಭಿವೃದ್ಧಿಗೆ ಅವರ ಆಡಳಿತ ಶ್ರಮಿಸಿದ್ದರಿಂದ ಹಲವಾರು ಸ್ಥಳೀಯ,  ಅಂರಾಷ್ಟ್ರೀಯ ಚುನಾವಣೆಗಳಲ್ಲಿ ಅವರ ಪಕ್ಷ ಜಯ ಗಳಿಸಿತ್ತು. ಆದರೆ ನಂತರದ ವರ್ಷಗಳಲ್ಲಿ ದೇಶ ಎದುರಿಸಲಾರಂಭಿಸಿದ ಆರ್ಥಿಕ ಬಿಕ್ಕಟ್ಟಿನಿಂದ ಅವರ ಜನಪ್ರಿಯತೆ ಕುಗ್ಗಲಾರಂಭಿಸಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News