ಅತ್ಯಾಚಾರ ಆರೋಪಿ ಗುರ್ಮೀತ್ ಸಿಂಗ್ ಪೆರೋಲ್ ಅರ್ಜಿ ಬೆಂಬಲಿಸುತ್ತಿರುವ ಹರ್ಯಾಣದ ಬಿಜೆಪಿ ಸರಕಾರ

Update: 2019-06-25 07:36 GMT

ಚಂಡೀಗಢ್, ಜೂ.25: ಅತ್ಯಾಚಾರ ಆರೋಪಿ ಸ್ವಘೋಷಿತ ದೇವ ಮಾನವ ಗುರ್ಮೀತ್ ಸಿಂಗ್ ನ ಪೆರೋಲ್ ಅರ್ಜಿಯನ್ನು ಮೇ ತಿಂಗಳಲ್ಲಿ ಹರ್ಯಾಣ ಹೈಕೋರ್ಟ್  ತಿರಸ್ಕರಿಸಿದ್ದರೂ ಆತನ ಸಾಕು ಪುತ್ರಿಯ ವಿವಾಹ ಸಮಾರಂಭದಲ್ಲಿ ಆತನಿಗೆ ಭಾಗವಹಿಸಲು ಅನುವು ಮಾಡಿಕೊಡಲು ಪೆರೋಲ್ ದೊರಕಿಸಿ ಕೊಡಲು ಹರ್ಯಾಣ ಸರಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ಆತನನ್ನು ಬಿಡುಗಡೆಗೊಳಿಸಿದಲ್ಲಿ 2017ರ ಕುಖ್ಯಾತ ಘಟನೆಯಂತೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂದು ಕೋರ್ಟ್ ಈ ಹಿಂದೆ ಹೇಳಿತ್ತಲ್ಲದೆ, ಆತನನ್ನು ಪೆರೋಲ್ ಮೆಲೆ ಬಿಡುಗಡೆಗೊಳಿಸಿ ನಂತರ ಮರು ಬಂಧನ ಕಷ್ಟವಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಅಪ್ರಾಪ್ತರ ಮೇಲಿನ ಎರಡು ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷಗಳ ಕಠಿಣ ಸಜೆಗೆ ಡೇರಾ ಸಚ್ಚಾ ಸೌದಾ ಮುಖ್ಯಸ್ಥನೂ ಆಗಿರುವ ಗುರ್ಮೀತ್ ಗುರಿಯಾಗಿದ್ದಾನೆ.

“ಪ್ರತಿಯೊಬ್ಬ ಅಪರಾಧಿಗೂ ಒಂದು ವರ್ಷದ ನಂತರ ಪೆರೋಲ್ ಗೆ ಮನವಿ ಸಲ್ಲಿಸುವ ಹಕ್ಕಿದೆ. ಆತ ಮಾಡಿದ ಮನವಿಯಂತೆ ಸಿರ್ಸಾ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ” ಎಂದು ಹರ್ಯಾಣ ಬಂಧೀಖಾನೆ ಸಚಿವ ಕೆ ಎಲ್ ಪನ್ವರ್ ಹೇಳಿದ್ದಾರೆ. “ಜಿಲ್ಲಾಡಳಿತದ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಚುನಾವಣೆಗೂ ಸಂಬಂಧ ಕಲ್ಪಿಸಬೇಡಿ. ಅಂತಹ ಉದ್ದೇಶವಿದ್ದರೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಆತನ ಬಿಡುಗಡೆ ಮಾಡುತ್ತಿದ್ದೆವು. ಸರಕಾರಕ್ಕೆ ಅಂತಹ ಉದ್ದೇಶವಿಲ್ಲ'' ಎಂದು ಅವರು ಹೇಳಿದರು.

ಹರ್ಯಾಣದ ಇಬ್ಬರು ಇತರ ಸಚಿವರುಗಳಾದ ಕೃಷ್ಣ ಪವಾರ್ ಹಾಗು ಅನಿಲ್ ವಿಜ್ ಕೂಡ ಗುರ್ಮೀತ್ ನ  ಪೆರೋಲ್ ಮನವಿಯನ್ನು ಸಮರ್ಥಿಸಿದ್ದಾರೆ. ಆತ ಜೈಲಿನಲ್ಲಿ ಉತ್ತಮ ನಡತೆ ತೋರಿರುವುದರಿಂದ ಆತ ಕೂಡ ಇತರ ಕೈದಿಗಳಂತೆ ಪೆರೋಲ್ ಗೆ ಅರ್ಹ ಎಂದು ಅವರು ಹೇಳಿದ್ದಾರೆ.

ಆದರೆ ಆಗಸ್ಟ್ 2017ರಲ್ಲಿ 30 ಜನರ ಬಲಿ ಪಡೆದ ಪಂಚಕುಲಾ ಘಟನೆಯಂತೆ ತನ್ನ ಬೆಂಬಲಿಗ ಪಡೆಯನ್ನು ಬಹಿರಂಗವಾಗಿ ದುರುಪಯೋಗಪಡಿಸಿರುವ ಇತಿಹಾಸವಿರುವ ಗುರ್ಮೀತ್  ಕುರಿತಂತೆ ಹೈಕೋರ್ಟ್ ಅಭಿಪ್ರಾಯವನ್ನು ನಿರ್ಲಕ್ಷ್ಯಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗಬಹುದೆಂಬ ಭಯವಿದೆ. ಹರ್ಯಾಣದಲ್ಲಿ ಮುಂದಿನ ನಾಲ್ಕು  ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಗುರ್ಮೀತ್ ಗೆ ರಾಜ್ಯಾದ್ಯಂತ ಅಸಂಖ್ಯಾತ ಬೆಂಬಲಿಗರಿದ್ದಾರೆ. ಕಳೆದ ಚುನಾವಣೆಯಲ್ಲಿ ಮನೋಹರ್ ಲಾಲ್  ಖಟ್ಟರ್ ಸರಕಾರ ಅಧಿಕಾರಕ್ಕೆ ಬರಲು ಆತನ ಬೆಂಬಲ ಬಿಜೆಪಿಗೆ ಬಹಳಷ್ಟು ದೊರಕಿತ್ತು ಎಂಬುದು ಉಲ್ಲೇಖಾರ್ಹ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News