ಲಾಯರ್ಸ್ ಕಲೆಕ್ಟಿವ್ ಗೆ ಕೇಂದ್ರದಿಂದ ಕಿರುಕುಳ: ಶಿಕ್ಷಣತಜ್ಞರ ಅಸಮಾಧಾನ

Update: 2019-06-25 16:55 GMT

ಹೊಸದಿಲ್ಲಿ, ಜೂ.25: ಸರಕಾರೇತರ ಸಂಸ್ಥೆ ಲಾಯರ್ಸ್ ಕಲೆಕ್ಟಿವ್‌ಗೆ ಕೇಂದ್ರ ಸರಕಾರ ಕಿರುಕುಳ ನೀಡುತ್ತಿದೆ ಎನ್ನಲಾಗಿದ್ದು ಈ ಬಗ್ಗೆ ಅನೇಕ ಶಿಕ್ಷಣತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರಿಗೆ ಪತ್ರ ಬರೆದಿರುವ ಗಣ್ಯರು, ಲಾಯರ್ಸ್ ಕಲೆಕ್ಟಿವ್ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಲಾಯರ್ಸ್ ಕಲೆಕ್ಟಿವ್ ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ತಮ್ಮ ಕಾನೂನಾತ್ಮಕ ಹಕ್ಕುಗಳ ಬಗ್ಗೆ ಜ್ಞಾನವನ್ನು ನೀಡುತ್ತಾ ಬಂದಿದೆ ಮತ್ತು ಅಂತಹ ಕಾನೂನಾತ್ಮಕ ಹೋರಾಟಗಳಲ್ಲಿ ಬೆಂಬಲ ನೀಡಲು ಹಿಂಜರಿದಿಲ್ಲ.

 ಇವುಗಳಲ್ಲಿ 2002ರ ಗುಜರಾತ್ ಹತ್ಯಾಕಾಂಡದ ಅಪರಾಧಿಗಳಿಗೆ ಶಿಕ್ಷೆ ನೀಡುವುದು ಸೇರಿದಂತೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಅರಿವು ಮತ್ತು ಸಮಾಜದಲ್ಲಿ ಗುಣಾತ್ಮಕ ಕಾನೂನು ಚಟುವಟಿಕೆಗೆ ಅವಕಾಶವನ್ನು ಹೆಚ್ಚಿಸುವುದು ಇತ್ಯಾದಿಗಳು ಸೇರಿವೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಶಿಕ್ಷಣತಜ್ಞರಾದ, ಅಕೀಲ್ ಬಿಲ್‌ಗ್ರಾಮಿ, ಅಮೃತಾ ಬಸು, ಜೀನ್ ಡ್ರೆಝ್, ಮಸೂದ್ ಕರ್ಶೆನಾಸ್, ಶೆಫಾಲಿ ಚಂದ್ರ ಇತರರು, ಸರಕಾರ ಪ್ರಜಾಸತಾತ್ಮಕ ಅವಕಾಶಗಳನ್ನು ಸಂಕೀರ್ಣಗೊಳಿಸಲು ಮತ್ತು ಮುಖ್ಯವಾಗಿ, ಕಾನೂನು, ಮಾಧ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ಸದಸ್ಯರಲ್ಲಿ, ಸಮ್ಮತಿಯ ಧ್ವನಿಯನ್ನು ವೌನವಾಗಿಸಲು ಕಟಿಬದ್ಧರಾದಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

 ಲಾಯರ್ಸ್ ಕಲೆಕ್ಟಿವ್ ವಿರುದ್ಧ ಸರಕಾರದ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಮತ್ತು ಶಿಕ್ಷಣಲೋಕದ ಇತರ ಗಣ್ಯರು ಈ ಪತ್ರಕ್ಕೆ ಸಹಿ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಪ್ರದರ್ಶಿಸುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News