ಜಮ್ಮು ಕಾಶ್ಮೀರದಲ್ಲಿ 3 ವರ್ಷಗಳಲ್ಲಿ 700ಕ್ಕೂ ಅಧಿಕ ಉಗ್ರರ ಹತ್ಯೆ

Update: 2019-06-25 15:38 GMT

ಹೊಸದಿಲ್ಲಿ, ಜೂ. 25: ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ 3 ವರ್ಷಗಳಲ್ಲಿ 700ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದು ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

ಈ ವರ್ಷ ಜನವರಿ ಹಾಗೂ ಜೂನ್ 16ರ ನಡುವೆ ಒಟ್ಟು 113 ಉಗ್ರರು ಹತರಾಗಿದ್ದಾರೆ. 2018ರಲ್ಲಿ 257, 2017ರಲ್ಲಿ 213 ಹಾಗೂ 2016ರಲ್ಲಿ 150 ಉಗ್ರರು ಹತರಾಗಿದ್ದಾರೆ. ಈ ಅವಧಿಯಲ್ಲಿ ಹತರಾದ ಒಟ್ಟು ಉಗ್ರರ ಸಂಖ್ಯೆ 733. ರಾಜ್ಯದಲ್ಲಿ ಇದೇ ಅವಧಿಯಲ್ಲಿ 112ಕ್ಕೂ ಅಧಿಕ ನಾಗರಿಕರು ಮೃತಪಟಿದ್ದಾರೆ. 2016ರಲ್ಲಿ 15 ಮಂದಿ, 2017ರಲ್ಲಿ 40 ಮಂದಿ, 2018ರಲ್ಲಿ 39 ಮಂದಿ ಹಾಗೂ ಈ ವರ್ಷ ಜನವರಿ ಹಾಗೂ ಜೂನ್ 13 ನಡುವೆ 18 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

‘‘ಭಯೋತ್ಪಾದನೆ ಬಗ್ಗೆ ಸರಕಾರ ಶೂನ್ಯ ಸಹನೆ ನೀತಿ ಅನುಸರಿಸಿದೆ. ಭಯೋತ್ಪಾದನೆ ನಿಗ್ರಹಿಸಲು ಭದ್ರತಾ ಪಡೆ ಪರಿಣಾಮಕಾರಿ ಹಾಗೂ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಪರಿಣಾಮ ಸಾವು ನೋವುಗಳ ಸಂಖ್ಯೆ ಹೆಚ್ಚಾಗಿದೆ’’ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಜಿ. ಕೃಷ್ಣ ರೆಡ್ಡಿ ಲೋಕಸಭೆಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News