×
Ad

ಉದ್ವಿಗ್ನತೆ ನಿವಾರಣೆಗೆ ರಾಜತಾಂತ್ರಿಕ ಪರಿಹಾರ: ಇರಾನ್‌ಗೆ ಅಮೆರಿಕ, ಬ್ರಿಟನ್, ಸೌದಿ, ಯುಎಇ ಒತ್ತಾಯ

Update: 2019-06-25 22:53 IST

ಲಂಡನ್, ಜೂ. 25: ಇರಾನ್‌ನೊಂದಿಗಿನ ಉದ್ವಿಗ್ನತೆಯನ್ನು ನಿವಾರಿಸಲು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ಅಮೆರಿಕ, ಬ್ರಿಟನ್, ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜಂಟಿಯಾಗಿ ಕರೆ ನೀಡಿವೆ.

 ‘‘ಪ್ರಾದೇಶಿಕ ಸ್ಥಿರತೆಗೆ ಬೆದರಿಕೆಯಾಗುವ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ನಾವು ಇರಾನ್‌ಗೆ ಕರೆ ನೀಡುತ್ತೇವೆ ಹಾಗೂ ಉದ್ವಿಗ್ನತೆಯನ್ನು ನಿವಾರಿಸಲು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ’’ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ಸೌದಿ ಅರೇಬಿಯ ಮತ್ತು ಯುಎಇ ನಾಯಕರನ್ನು ಭೇಟಿಯಾದ ಬಳಿಕ ಅವರು ಹೇಳಿಕೆ ಹೊರಡಿಸಿದ್ದಾರೆ.

 ದಕ್ಷಿಣ ಸೌದಿ ಅರೇಬಿಯದ ವಿಮಾನ ನಿಲ್ದಾಣವೊಂದರ ಮೇಲೆ ಯೆಮನ್‌ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿ ಮತ್ತು ಒಮಾನ್ ಕೊಲ್ಲಿಯಲ್ಲಿ ಇತ್ತೀಚೆಗೆ ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಈ ನಾಲ್ಕು ದೇಶಗಳು ತಮ್ಮ ಕಳವಳ ವ್ಯಕ್ತಪಡಿಸಿವೆ.

‘‘ಈ ದಾಳಿಗಳು ಸರಕು ಸಾಗಣೆಗಾಗಿ ನಾವೆಲ್ಲರೂ ಅವಲಂಬಿಸಿರುವ ಅಂತರ್‌ರಾಷ್ಟ್ರೀಯ ಜಲಮಾರ್ಗಗಳಿಗೆ ಬೆದರಿಕೆಯೊಡ್ಡುತ್ತವೆ. ಹಡಗುಗಳು ಮತ್ತು ಅವುಗಳ ನಾವಿಕರು ಅಂತರ್‌ರಾಷ್ಟ್ರೀಯ ಜಲಪ್ರದೇಶಗಳಲ್ಲಿ ಸುರಕ್ಷಿತವಾಗಿ ಹಾದುಹೋಗಲು ಬಿಡಬೇಕು’’ ಎಂದು ಈ ದೇಶಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News