ಇರಾನ್ ಸರ್ವೋಚ್ಛ ನಾಯಕನ ವಿರುದ್ಧ ಅಮೆರಿಕ ಕಠಿಣ ದಿಗ್ಬಂಧನ

Update: 2019-06-25 17:33 GMT

ವಾಶಿಂಗ್ಟನ್, ಜೂ. 25: ಅಮೆರಿಕ ಸೋಮವಾರ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮತ್ತು ಹಲವಾರು ಸೇನಾ ನಾಯಕರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಹಾಗೂ ಇರಾನ್ ಯುದ್ಧ ಬಯಸಿದರೆ ಅದು ಸರ್ವನಾಶವಾಗುತ್ತದೆ ಎಂಬುದಾಗಿ ಎಚ್ಚರಿಸಿದ್ದಾರೆ.

ಶಿಕ್ಷಾ ರೂಪದ ಆರ್ಥಿಕ ಕ್ರಮಗಳಿಗೆ ಟ್ರಂಪ್ ಶ್ವೇತಭವನದ ಓವಲ್ ಕಚೇರಿಯಲ್ಲಿ ಸಹಿ ಹಾಕಿದರು ಹಾಗೂ ಇದು ‘‘ಇರಾನ್‌ನ ನಿರಂತರ ಪ್ರಚೋದನಾತ್ಮಕ ಕೃತ್ಯಗಳಿಗೆ ಪ್ರಬಲ ಹಾಗೂ ಪ್ರಮಾಣಬದ್ಧ ಪ್ರತಿಕ್ರಿಯೆಯಾಗಿದೆ’’ ಎಂದು ಹೇಳಿದರು.

‘‘ಇರಾನ್ ಯಾವತ್ತೂ ಪರಮಾಣು ಅಸ್ತ್ರವನ್ನು ಪಡೆಯಲು ಸಾಧ್ಯವಿಲ್ಲ’’ ಎಂಬುದನ್ನು ಪುನರುಚ್ಚರಿಸಿದ ಟ್ರಂಪ್, ಈಗ ಸಂಧಾನಕ್ಕೆ ಮುಂದಾಗುವುದು ಇರಾನ್‌ಗೆ ಬಿಟ್ಟ ವಿಷಯ ಎಂದರು.

‘‘ನಾವು ಸಂಘರ್ಷವನ್ನು ಬಯಸುವುದಿಲ್ಲ’’ ಎಂದು ಹೇಳಿದ ಅವರು, ಇರಾನ್‌ನ ಪ್ರತಿಕ್ರಿಯೆಯನ್ನು ಆಧರಿಸಿ ಈ ದಂಡನಾ ಕ್ರಮಗಳು ನಾಳೆಯೇ ಕೊನೆಗೊಳ್ಳಬಹುದು, ಅಥವಾ ವರ್ಷಗಳ ಕಾಲ ಮುಂದುವರಿಯಬಹುದು ಎಂದರು.

ರಾಜತಾಂತ್ರಿಕ ಸಂಧಾನದ ಶಾಶ್ವತ ಕೊನೆ: ಇರಾನ್

ದೇಶದ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಮತ್ತು ದೇಶದ ಇತರ ಉನ್ನತ ಅಧಿಕಾರಿಗಳ ವಿರುದ್ಧ ಅಮೆರಿಕ ದಿಗ್ಬಂಧನ ವಿಧಿಸಿದ ಬಳಿಕ, ಇರಾನ್ ಮತ್ತು ಅಮೆರಿಕಗಳ ನಡುವಿನ ರಾಜತಾಂತ್ರಿಕ ಮಾತುಕತೆಯ ದಾರಿ ಶಾಶ್ವತವಾಗಿ ಮುಚ್ಚಿದೆ ಎಂದು ಇರಾನ್ ಮಂಗಳವಾರ ಹೇಳಿದೆ.

‘‘ಇರಾನ್‌ನ ಸರ್ವೋಚ್ಛ ನಾಯಕ ಮತ್ತು ಇರಾನ್ ರಾಜತಾಂತ್ರಿಕತೆಯ ಮುಖ್ಯಸ್ಥರಾಗಿರುವ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ವಿರುದ್ಧ ನಿಷ್ಪ್ರಯೋಜಕ ದಿಗ್ಬಂಧನಗಳನ್ನು ವಿಧಿಸಿರುವುದು, ರಾಜತಾಂತ್ರಿಕ ಸಂಧಾನದ ಶಾಶ್ವತ ಕೊನೆಯಾಗಿದೆ’’ ಎಂಬುದಾಗಿ ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News