ಮಕ್ಕಳ ಮೇಲಿನ ಅತ್ಯಾಚಾರ ತಡೆಗೆ ಗೋವುಗಳಿಗೆ ವಿಶೇಷ ಪೂಜೆ

Update: 2019-06-25 17:51 GMT

ಹೈದರಾಬಾದ್,ಜೂ.25: ತೆಲಂಗಾಣದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಅಂತ್ಯ ಹಾಡುವ ಕೊನೆಯ ಮಾರ್ಗವಾಗಿ ಇಲ್ಲಿಯ ಚಿಲ್ಕುರ ಬಾಲಾಜಿ ದೇವಸ್ಥಾನದ ಅರ್ಚಕರು ರಾಜ್ಯದಲ್ಲಿಯ ಹೆಣ್ಣು ಮಕ್ಕಳ ರಕ್ಷಣೆಗೆ ಬರುವಂತೆ ಮಹಾವಿಷ್ಣುವನ್ನು ಆಹ್ವಾನಿಸುವ ‘ಗೋ ಪ್ರದಕ್ಷಿಣಂ’ ಪೂಜೆಯನ್ನು ನೆರವೇರಿಸಿದ್ದಾರೆ.

ಪೂಜಾವಿಧಿಯ ಅಂಗವಾಗಿ ಮೂರು ಗೋವುಗಳನ್ನು ಮೂರು ಬಾರಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಲಾಗಿತ್ತು, ಈ ವೇಳೆ ಅಲ್ಲಿ ಸೇರಿದ್ದ ನೂರಾರು ಮಹಿಳೆಯರು ರಕ್ಷಣೆಯನ್ನು ಕೋರಿ ದೇವರಿಗೆ ಪ್ರಾರ್ಥನೆಗಳನ್ನು ಸಲ್ಲಿಸಿದರು.

ಈ ಪೂಜೆಯು ಹಿಂದು ಪುರಾಣಗಳಲ್ಲಿ ಹೇಳಲಾಗಿರುವ ಘಟನೆಯೊಂದನ್ನು ಬಿಂಬಿಸುತ್ತದೆ ಎಂದು ಅರ್ಚಕರು ತಿಳಿಸಿದರು.

ಭೂಮಾತೆಯು ಪುರುಷರಿಂದ ಅತೀವ ಹಿಂಸೆಗೊಳಗಾದಾಗ ಆಕೆ ಗೋವಿನ ರೂಪವನ್ನು ಧರಿಸಿ ನೆರವಿಗಾಗಿ ಮಹಾವಿಷ್ಣುವಿನ ಮೊರೆ ಹೋಗಿದ್ದಳು ಎನ್ನಲಾಗಿದೆ.

ಇಂದು ರಾಜ್ಯದಲ್ಲಿಯ ಮಹಿಳೆಯರು ಕಷ್ಟದ ಸ್ಥಿತಿಯಲ್ಲಿದ್ದಾರೆ. ಪೊಲೀಸರಿಗೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ತಾನು ಸುರಕ್ಷಿತಳಾಗಿದ್ದೇನೆ ಎಂದು ಯಾವುದೇ ಮಹಿಳೆಯೂ ಭಾವಿಸುತ್ತಿಲ್ಲ. ಒಂಭತ್ತು ತಿಂಗಳ ಹಸುಳೆಯ ಮೇಲೆ ಇಂತಹ ಹಿಂಸೆ ನಡೆದರೆ ಭವಿಷ್ಯದಲ್ಲಿ ಏನಾದೀತು ಎಂದು ದೇವಸ್ಥಾನದ ಆನುವಂಶಿಕ ಅರ್ಚಕ ಮತ್ತು ಟ್ರಸ್ಟಿ ಸಿ.ಎಸ್.ರಂಗರಾಜನ್ ಪ್ರಶ್ನಿಸಿದರು. ಎಲ್ಲ ದೇವಸ್ಥಾನಗಳು ಯುವಕರಿಗೆ ಬುದ್ಧಿ ಹೇಳಬೇಕು ಮತ್ತು ಇಂತಹ ಚಟುವಟಿಕೆಗಳನ್ನು ನಡೆಸಬೇಕು ಎಂದರು.

‘ಕಳೆದ ವರ್ಷ ನಾವು ರಾಖಿ ಸವಾಲ್ ಮತ್ತು ಕನ್ಯಾ ವಂದನಂ ಕಾರ್ಯಕ್ರಮಗಳನ್ನು ನಡೆಸಿದ್ದೆವು ’ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News