ಗೆಲುವಿನ ಅಭಿಯಾನ ಮುಂದುವರಿಸಲು ಪಾಕ್ ಯತ್ನ

Update: 2019-06-25 18:22 GMT

ಬರ್ಮಿಂಗ್‌ಹ್ಯಾಮ್, ಜೂ.25: ಪಾಕಿಸ್ತಾನ ಬುಧವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್‌ನ್ನು ಎದುರಿಸಲಿದ್ದು, ಗೆಲುವಿನ ಅಭಿಯಾನ ಮುಂದುವರಿಸುವ ಯತ್ನ ನಡೆಸಲಿದೆ.

ಪಾಕ್‌ನ ಮಾಜಿ ನಾಯಕ ವಸೀಮ್ ಅಕ್ರಂ ಅವರು ನಾಯಕ ಸರ್ಫರಾಝ್ ಅಹ್ಮದ್ ಅವರಿಗೆ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಮುಂದುವರಿಲು ಸಲಹೆ ನೀಡಿದ್ದಾರೆ.

ರವಿವಾರ ದಕ್ಷಿಣ ಆಫ್ರಿಕ ವಿರುದ್ಧ ಪಾಕಿಸ್ತಾನ 49 ರನ್‌ಗಳ ಜಯ ಗಳಿಸಿತ್ತು.

ವಿಶ್ವಕಪ್ ಜಯಿಸಿದ ಪಾಕ್ ತಂಡದ ಮಾಜಿ ಎಡಗೈ ವೇಗಿ ವಸೀಮ್ ಅಕ್ರಂ ಅವರು ಪಾಕಿಸ್ತಾನ 1992ರಲ್ಲಿ ನೀಡಿರುವ ರೀತಿಯ ಪ್ರದರ್ಶನವನ್ನು ಮತ್ತೆ ನೀಡಬಹುದೆಂಬ ವಿಶ್ವಾಸದಲ್ಲಿದ್ದಾರೆ. ಅಂದು ಪಾಕಿಸ್ತಾನ ಅಜೇಯ ನ್ಯೂಝಿಲ್ಯಾಂಡ್‌ಗೆ ಸೋಲುಣಿಸಿತ್ತು.

ಪಾಕಿಸ್ತಾನ ಈ ಬಾರಿಯ ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ ಕಳಪೆ ಫೀಲ್ಡಿಂಗ್ ನಡೆಸಿ 14 ಕ್ಯಾಚ್‌ಗಳನ್ನು ಕೈ ಚೆಲ್ಲಿದೆ. ಈ ಸಮಸ್ಯೆಯನ್ನು ನಿವಾರಿಸಬೇಕಾಗಿದೆ ಎಂದು ಅಕ್ರಮ್ ಹೇಳಿದ್ದಾರೆ. ಬಾಬರ್ ಅಝಮ್ ವಿಶ್ವಕಪ್‌ನಲ್ಲಿ 2 ಬಾರಿ ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಒಂದು ಬಾರಿ ಔಟಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ 63 ರನ್ ಮತ್ತು ದಕ್ಷಿಣ ಆಫ್ರಿಕ ವಿರುದ್ಧ 69 ರನ್ ಗಳಿಸಿದ್ದರು. ಭಾರತದ ವಿರುದ್ಧ 48 ರನ್ ಗಳಿಸಿ ಸ್ಪಿನ್ನರ್ ಕುಲದೀಪ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಅವರು ಈಗ ಗಳಿಸುತ್ತಿರುವ ಅರ್ಧಶತಕಗಳನ್ನು ಶತಕದತ್ತ ಕೊಂಡೊಯ್ಯುವ ಪ್ರಯತ್ನ ನಡೆಸಬೇಕಾಗಿದೆ ಎಂದು ಅಕ್ರಂ ಹೇಳಿದ್ದಾರೆ.

ಪಾಕಿಸ್ತಾನ 6 ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಉಳಿದ ಎಲ್ಲ 3 ಪಂದ್ಯಗಳಲ್ಲಿ ಜಯ ಗಳಿಸಿದರೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಧ್ಯ.

ನ್ಯೂಝಿಲ್ಯಾಂಡ್ ಆಡಿರುವ 6 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 11 ಪಾಯಿಂಟ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದೆ. ಅದು ಈ ತನಕ ಅಜೇಯವಾಗಿದೆ. ಭಾರತದ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News