ಸಚಿನ್ ತೆಂಡುಲ್ಕರ್‌ಗೆ ಟ್ರೋಲ್ ಮಾಡಿದ ಧೋನಿ ಅಭಿಮಾನಿಗಳು

Update: 2019-06-25 18:25 GMT

ಹೊಸದಿಲ್ಲಿ, ಜೂ.25: ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದ ಬಳಿಕ ಮಾಜಿ ನಾಯಕ ಎಂಎಸ್ ಧೋನಿಯ ಬ್ಯಾಟಿಂಗ್ ವೈಖರಿಯ ಬಗ್ಗೆ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಹೇಳಿಕೆ ನೀಡಿದ್ದರು. ಇದರಿಂದ ಕೆರಳಿದ ಧೋನಿಯ ಅಭಿಮಾನಿಗಳು ಕ್ರಿಕೆಟ್ ದಂತಕತೆ ತೆಂಡುಲ್ಕರ್‌ಗೆ ಟ್ರೋಲ್ ಮಾಡಿದ್ದಾರೆ.

ಧೋನಿ ಅಫ್ಘಾನ್ ವಿರುದ್ಧ 52 ಎಸೆತಗಳಲ್ಲಿ 28 ರನ್ ಗಳಿಸಿದ ಕಾರಣ ಭಾರತದ ರನ್‌ರೇಟ್ ನಿಧಾನವಾಯಿತು.ಕೇದಾರ್ ಜಾಧವ್‌ರೊಂದಿಗೆ ಧೋನಿ ನಡೆಸಿದ್ದ ಜೊತೆಯಾಟ ಕೂಡ ನಿಧಾನವಾಗಿತ್ತು. ಇದರಲ್ಲಿ ಸದುದ್ದೇಶವಿರಲಿಲ್ಲ ಎಂದು ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದರು.

 ಧೋನಿಯ ಅಭಿಮಾನಿಗಳು ತಮ್ಮ ಐಕಾನ್ ಆಟಗಾರನನ್ನು ಸಮರ್ಥಿಸಿಕೊಂಡು ತೆಂಡುಲ್ಕರ್ ಹೇಳಿಕೆಗೆ ಪ್ರತಿ ಟೀಕೆ ಮಾಡಿದ್ದಾರೆ. ಇಬ್ಬರು ಕ್ರಿಕೆಟಿಗರನ್ನು ಹೋಲಿಕೆ ಮಾಡಿದ್ದಾರೆ.

‘‘ಕೇದಾರ್ ಹಾಗೂ ಧೋನಿಯವರ ಜೊತೆಯಾಟ ನನಗೆ ಖುಷಿ ನೀಡಿರಲಿಲ್ಲ. ಅದು ತುಂಬಾ ನಿಧಾನವಾಗಿತ್ತು. ನಾವು ಸ್ಪಿನ್ ಬೌಲಿಂಗ್‌ನ ಎದುರು ಬ್ಯಾಟಿಂಗ್ ಉತ್ತಮಪಡಿಸಿಕೊಳ್ಳಬೇಕಾಗಿದೆ’’ ಎಂದು ತೆಂಡುಲ್ಕರ್‌‘ಇಂಡಿಯಾ ಟುಡೆ’ಗೆ ತಿಳಿಸಿದ್ದರು.

ನೀವು ನಿಮ್ಮ ವೃತ್ತಿಜೀವನದುದ್ದಕ್ಕೂ ಗೆಲ್ಲಲಾಗದ ವಿಶ್ವಕಪ್‌ನ್ನು ಇದೇ ವ್ಯಕ್ತಿ(ಧೋನಿ)ನಿಮಗಾಗಿ ಗೆದ್ದುಕೊಟ್ಟಿದ್ದರು. ಸಚಿನ್ ದೊಡ್ಡ ಹಿಟ್ಟರ್‌ನಂತೆ ನಟಿಸುತ್ತಿದ್ದಾರೆ. ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ 90 ರನ್ ತಲುಪಿದಾಗ ಶತಕಗಳಿಸಲು ಪರಡಾಡುತ್ತಿದ್ದರು ಎಂದು ಧೋನಿ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.

ಧೋನಿ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ 28, 1, 27 ಹಾಗೂ 34 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಕಳಪೆ ಬ್ಯಾಟಿಂಗ್‌ನ ಹೊರತಾಗಿಯೂ ಪಂದ್ಯದ ದಿಕ್ಕನ್ನು ಗ್ರಹಿಸಬಲ್ಲ ಧೋನಿ ಬೌಲರ್‌ಗಳಿಗೆ ಸಂದರ್ಭಕ್ಕೆ ತಕ್ಕಂತೆ ಸಲಹೆ ಸೂಚನೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News