ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಕ್ರೀಡಾ ಸಚಿವ ಕಿರಣ್ ಸನ್ಮಾನ

Update: 2019-06-25 18:27 GMT

ಹೊಸದಿಲ್ಲಿ, ಜೂ.25: ಕೇಂದ್ರದ ಕ್ರೀಡಾ ಸಚಿವ ಕಿರಣ್ ರಿಜಿಜು ಭಾರತೀಯ ಮಹಿಳಾ ಹಾಕಿ ತಂಡವನ್ನು ಮಂಗಳವಾರ ಸನ್ಮಾನಿಸಿದರು. ಜೂ.15ರಿಂದ 23ರ ತನಕ ಜಪಾನ್‌ನ ಹಿರೋಶಿಮಾದಲ್ಲಿ ನಡೆದ ಎಫ್‌ಐಎಚ್ ಸಿರೀಸ್ ಫೈನಲ್ಸ್‌ನ ಪ್ರಶಸ್ತಿ ಸುತ್ತಿನಲ್ಲಿ ಜಯ ಸಾಧಿಸಿರುವುದಕ್ಕೆ ಟೀಮ್‌ಗೆ ಅಭಿನಂದನೆ ಸಲ್ಲಿಸಿದರು.

  ಭಾರತ ಮುಂದಿನ ವರ್ಷ ಟೋಕಿೊದಲ್ಲಿ ನಡೆಯುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವತ್ತ ಮೊದಲ ಹೆಜ್ಜೆ ಇಟ್ಟಿದ್ದು, ಈ ವರ್ಷಾಂತ್ಯದಲ್ಲಿ ನಡೆಯುವ 14 ತಂಡಗಳು ಭಾಗವಹಿಸುವ ಎಫ್‌ಐಎಚ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಭಾಗವಹಿಸಲಿದೆ.

 ಎಫ್‌ಐಎಚ್ ಸಿರೀಸ್ ಫೈನಲ್ಸ್‌ನಲ್ಲಿ ಭಾರತ ಅಜೇಯ ದಾಖಲೆ ಕಾಯ್ದುಕೊಂಡಿದ್ದು, 29 ಗೋಲು ಗಳಿಸಿದ್ದು, ಕೇವಲ 4 ಗೋಲು ಬಿಟ್ಟುಕೊಟ್ಟಿತ್ತು. ಸೆಮಿಫೈನಲ್‌ನಲ್ಲಿ ಚಿಲಿಯನ್ನು 4-2 ಅಂತರದಿಂದ ಸೋಲಿಸಿದ್ದ ಭಾರತದ ಮಹಿಳಾ ತಂಡ ಫೈನಲ್‌ನಲ್ಲಿ ಆತಿಥೇಯ, ಏಶ್ಯನ್ ಗೇಮ್ಸ್ ಚಾಂಪಿಯನ್ ಜಪಾನ್ ತಂಡವನ್ನು 3-1 ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು. ‘‘ಭಾರತೀಯ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿ, ನಮಗೆ ಹೆಮ್ಮೆ ತಂದಿದೆ. ಕ್ರೀಡಾ ಸಚಿವಾಲಯ ಆಟಗಾರರಿಗೆ ವೈಯಕ್ತಿಕ ಹಾಗೂ ಸಂಘಟಿತವಾಗಿ ಬೆಂಬಲ ನೀಡಲಿದೆ. ನಾನು ಬೆಂಗಳೂರಿಗೆ ತೆರಳಿ ಕೋಚ್‌ಗಳನ್ನು ಭೇಟಿಯಾಗುವೆ. ತಂಡದ ಅಗತ್ಯದ ಕುರಿತು ಚರ್ಚಿಸುವೆ. ಭಾರತಕ್ಕೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಉತ್ತಮ ಅವಕಾಶವಿದೆ. ಪದಕವನ್ನು ಗೆಲ್ಲುವ ಸಾಮರ್ಥ್ಯವಿದೆ’’ ಎಂದು ಸಚಿವ ಕಿರಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News