10 ದಿನಗಳಲ್ಲಿ 4 ಪಂದ್ಯ ಆಡಲಿದೆ ಟೀಮ್ ಇಂಡಿಯಾ

Update: 2019-06-25 18:28 GMT

ಲಂಡನ್, ಜೂ.25: ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲ ತಂಡಗಳಿಗಿಂತ ತಡವಾಗಿ ತನ್ನ ಅಭಿಯಾನ ಆರಂಭಿಸಿದ ಭಾರತ ಮುಂದಿನ 10 ದಿನಗಳಲ್ಲಿ 4 ಲೀಗ್ ಪಂದ್ಯಗಳನ್ನು ಆಡಲಿದೆ. ಗುರುವಾರ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.

ಜೂ.30 ರಂದು ಆತಿಥೇಯ ಇಂಗ್ಲೆಂಡ್ ಹಾಗೂ ಜು.2 ರಂದು ಬಾಂಗ್ಲಾದೇಶವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಖಾಮುಖಿಯಾಗಲಿದೆ. ಜು.6 ರಂದು ಶ್ರೀಲಂಕಾವನ್ನು ಎದುರಿಸುವುದರೊಂದಿಗೆ ತನ್ನ ಲೀಗ್ ಹಂತದ ಪಂದ್ಯಗಳನ್ನು ಮುಕ್ತಾಯಗೊಳಿಸಲಿದೆ.

  ಈ ತನಕ ಆಡಿರುವ 5 ಪಂದ್ಯಗಳ ಪೈಕಿ ಅಫ್ಘಾನಿಸ್ತಾನ ವಿರುದ್ಧ ಸೋಲಿನ ಭೀತಿ ಎದುರಿಸಿರುವುದನ್ನು ಹೊರತುಪಡಿಸಿ ಉಳಿದ ಪಂದ್ಯಗಳಲ್ಲಿ ವೃತ್ತಿಪರತೆಯೊಂದಿಗೆ ದಿಟ್ಟ ಪ್ರದರ್ಶನ ನೀಡಿದೆ. ಭಾರತ ಆಡಲಿರುವ ಉಳಿದ 4 ಪಂದ್ಯಗಳು ವಿಭಿನ್ನ ಸವಾಲು ಒಡ್ಡಲಿವೆ. ಮೊದಲಿಗೆ ವೆಸ್ಟ್ ಇಂಡೀಸ್ ವಿರುದ್ಧ ಎಚ್ಚರಿಕೆಯಿಂದ ಆಡಬೇಕಾಗಿದೆ. ವಿಂಡೀಸ್ ತಂಡ ಕೆಲವು ಪೈಪೋಟಿಯಿಂದ ಕೂಡಿದ್ದ ಪಂದ್ಯವನ್ನು ಸೋತಿತ್ತು. ಈ ಸೋಲು ಆ ತಂಡಕ್ಕೆ ಆಘಾತವುಂಟು ಮಾಡಿದೆ. ವಿಂಡೀಸ್ ತಂಡದಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ.

 ಅಫ್ಘಾನ್ ವಿರುದ್ಧ ಪಂದ್ಯ ಭಾರತಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಮಧ್ಯಮ ಕ್ರಮಾಂಕದ ದಾಂಡಿಗರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದರು. 224 ರನ್ ಗಳಿಸಿದ್ದ ಭಾರತ ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿನ ಉತ್ತಮ ಪ್ರದರ್ಶನದಿಂದ ಜಯ ದಾಖಲಿಸಿ 2 ಅಂಕ ಬಾಚಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News