ವಿ.ಡಿ. ಸಾವರ್ಕರ್ ಕ್ಷಮಾ ಯಾಚನಾ ಮನವಿ

Update: 2019-06-25 18:30 GMT

ಭಾಗ-42

ಸಾವರ್ಕರ್ ಜೂನ್ 1911ರಲ್ಲಿ ಅಂಡಮಾನ್ ದ್ವೀಪಕ್ಕೆ ಬಂದರು. ಒಂದು ವರ್ಷ ತುಂಬುವುದರ ಒಳಗಾಗಿ ತಮಗೆ ಕ್ಷಮಾದಾನ ಮಾಡಬೇಕೆಂದು ಭಾರತ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು. ಆ ಮನವಿಯ ಮೂಲಪಾಠ ಲಭ್ಯವಿಲ್ಲ. ಆದರೆ 1915ನೇ ಇಸ್ವಿ ನವೆಂಬರ್ 14ರಂದು ಅರ್ಪಿಸಿದ ಇನ್ನ್ನೊಂದು ಮನವಿಯಲ್ಲಿ 1911ರ ಮನವಿಯನ್ನು ಪ್ರಸ್ತಾವಿಸಿದ್ದಾರೆ. ಆ ಮನವಿಯ ಬಹುಭಾಗ ಸೆರೆಮನೆಯಲ್ಲಿದ್ದ ಅನುಕೂಲತೆಗಳಿಗೆ ಸಂಬಂಧಿಸಿದೆ.
ಇಂಡಿಯಾ ದೇಶದ ಜೈಲಿಗೆ ತಮ್ಮನ್ನು ವರ್ಗಾಯಿಸುವಂತೆ ಕೋರಿದ್ದಾರೆ. ಯಾಕೆಂದರೆ ಅಲ್ಲಿಯ ಜೈಲುಗಳಲ್ಲಿ ಒಂದನೆಯದಾಗಿ ಸಜೆ ಅವಧಿಯಲ್ಲಿ ರಿಯಾಯತಿ ಸಿಕ್ಕುತ್ತದೆ. ಎರಡನೆಯದಾಗಿ ತಮ್ಮವರು ಬಂದು ತಮ್ಮನ್ನು ಸಂದರ್ಶಿಸಬಹುದು.
ಆ ಕ್ಷಮಾ ಯಾಚನಾ ಪತ್ರದ ಕೊನೆಯ ಪ್ಯಾರಾ ಬಹುಬಿಚ್ಚು ಮಾತುಗಳಲ್ಲಿದೆ. ಅದರ ಪೂರ್ಣ ಪಾಠ ಹೀಗಿದೆ: ಕೊನೆಯದಾಗಿ, 1911ರಲ್ಲಿ ನಾನು ಕಳಿಸಿದ್ದ ಕ್ಷಮಾ ಯಾಚನಾ ಮನವಿ ಪತ್ರವನ್ನು ತಾವು ಪರಾಂಬರಿಸೋಣವಾಗಬೇಕೆಂದೂ ಇಂಡಿಯಾ ಸರಕಾರಕ್ಕೆ ಅದನ್ನು ಮಂಜೂರಾತಿಗಾಗಿ ಕಳಿಸಿಕೊಡಬೇಕೆಂದೂ ಘನತೆವೆತ್ತ ತಮಗೆ ನೆನಪು ಮಾಡಬಹುದೇ? ಭಾರತದ ರಾಜಕೀಯದಲ್ಲಿ ಇತ್ತೀಚೆಗೆ ಆದ ಬೆಳವಣಿಗೆಯೂ ಸರಕಾರದ ಮೃದು ಸಮಾಧಾನ ಧೋರಣೆಯೂ ಮತ್ತೊಮ್ಮೆ ಸಂವಿಧಾನಾತ್ಮಕ ಬಾಗಿಲನ್ನು ತೆರೆದಿದೆ. ನಮ್ಮನ್ನು ಶಾಂತಿ ಮತ್ತು ಪ್ರಗತಿ ಪಥದಿಂದ ದಾರಿತಪ್ಪಿಸಿ ವಂಚಿಸಿದ್ದ 1906-1907ರಲ್ಲಿದ್ದ ಉದ್ವಿಗ್ನಕಾರಕ ನಿರಾಶಾದಾಯಕ ಪರಿಸ್ಥಿತಿ ಈಗ ಇಲ್ಲ. ಭಾರತ ಮತ್ತು ಮಾನವರ ಕ್ಷೇಮವೇ ತಮ್ಮ ಹೃದಯದಲ್ಲಿದ್ದ ಯಾರೂ ಈ ಮುಳ್ಳು ದಾರಿಯನ್ನು ಕಣ್ಣುಮುಚ್ಚಿಕೊಂಡು ತುಳಿಯಲಾರರು. ಆದ್ದರಿಂದ ಸರಕಾರ ತಮ್ಮ ಬಹುಮುಖೀ ಔದಾರ್ಯದಿಂದ ನನ್ನನ್ನು ಬಿಡುಗಡೆ ಮಾಡಿದ ಪಕ್ಷದಲ್ಲಿ ನಾನು ನನ್ನ ಮಟ್ಟಿಗೆ ಸಂವಿಧಾನಾತ್ಮಕ ಪ್ರಗತಿಯ ಕಡುನಿಷ್ಠೆಯ ಪ್ರತಿಪಾದಕನೂ ಇಂಗ್ಲಿಷ್ ಸರಕಾರಕ್ಕೆ ವಿಧೇಯನೂ ನಿಷ್ಠನೂ ಆಗಿರುತ್ತೇನಲ್ಲದೆ ಬೇರೆಯಿಲ್ಲ. ಆ ಪ್ರಗತಿಗೆ ಅದೇ ಅತ್ಯಂತ ಮುಖ್ಯವಾದ ಪರಿಸ್ಥಿತಿ. ನಾವು ಜೈಲಿನಲ್ಲಿ ಇರುವವರೆಗೆ ಭಾರತದಲ್ಲಿರುವ ನೂರಾರು ಸಹಸ್ರಾರು ಘನವತ್ತ ಚಕ್ರವರ್ತಿಗಳ ಪ್ರಜೆಗಳಲ್ಲಿ ನಿಜವಾದ ಸುಖ ಸಂತೋಷ ಭಾರತದಲ್ಲಿ ಇರಲಾರದು. ಯಾಕೆಂದರೆ ರಕ್ತ ಸಂಬಂಧ ಎಲ್ಲಕ್ಕಿಂತ ಅಧಿಕ ನಂಟು. ನಮ್ಮನ್ನು ಬಿಡುಗಡೆ ಮಾಡಿದ್ದೇ ಆದರೆ ಜನರು ಸಂತೋಷದಿಂದ ಹರ್ಷೋದ್ಗಾರ ಮಾಡಿ ಸರಕಾರಕ್ಕೆ ಕೃತಜ್ಞರಾಗುತ್ತಾರೆ. ಭರ್ತ್ಸನೆ ಮಾಡಿ ಸೇಡು ತೀರಿಸಿಕೊಳ್ಳುವುದಕ್ಕಿಂತ ಕ್ಷಮಿಸಿ, ಬುದ್ಧಿ ಕಲಿಸುವುದು ಉತ್ತಮವಾಗಿರಬಹುದು. ಮೇಲಾಗಿ ನನ್ನನ್ನು ತಮ್ಮ ಮಾರ್ಗದರ್ಶಿಯೆಂದು ನಿರೀಕ್ಷಿಸಿದ ಭಾರತ ಮತ್ತು ವಿದೇಶದಲ್ಲಿರುವ ದಾರಿತಪ್ಪಿದವರನ್ನೆಲ್ಲ ಸಂವಿಧಾನಾತ್ಮಕ ಮಾರ್ಗಕ್ಕೆ ತಿರುಗಿಸುವ ಪರಿವರ್ತನೆಯಾಗುತ್ತದೆ. ಬೇಕಾದ ಯಾವ ರೂಪದಿಂದಲಾದರೂ ಸರಕಾರದ ಸೇವೆಗೈಯಲು ನಾನು ಸಿದ್ಧನಿದ್ದೇನೆ. ಯಾಕೆಂದರೆ ನನ್ನ ಪರಿವರ್ತನೆ ಪ್ರಜ್ಞಾಪೂರ್ವಕವಾದದ್ದು. ಹಾಗೆಯೇ ನನ್ನ ಮುಂದಿನ ಭವಿಷ್ಯ ನಡತೆಯೂ ಪರಿವರ್ತನೆಯಾಗುತ್ತದೆ. ನನ್ನನ್ನು ಜೈಲಿನಲ್ಲಿಡುವುದರಿಂದ, ಬಿಡುವುದರಿಂದಾಗುವ ಯಾವ ಒಳಿತೂ ಆಗಲಾರದು. ಬಲಾಢ್ಯರಾದವರು ಮಾತ್ರ ದಯಾಮಯರಾಗಿರಲು ಸಾಧ್ಯ. ಆದ್ದರಿಂದ ‘ಉಡಾಳ’ (ದುರ್ವ್ಯಯಿ,  prodigal) ಆದ ಮಗ ಸರಕಾರದ ಮಾತೃಮಂದಿರದ ಬಾಗಿಲಿಗಲ್ಲದೆ ಮತ್ತೆಲ್ಲಿಗೆ ಹೋದಾನು? ಘನಾಢ್ಯರಾದ ತಾವು ಈ ಕೆಲವು ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವಿರೆಂದು ನಂಬುತ್ತೇನೆ..’’
(ಸಹಿ) ವಿ.ಡಿ. ಸಾವರ್ಕರ್
***
ಮುಂಬೈ ಸರಕಾರದ ವಾರ್ತಾ ಇಲಾಖಾ ನಿರ್ದೇಶಕರ ಆದರಗಳೊಂದಿಗೆ ಪಿ 2/5-1-24
ಮುಂಬೈ ಸರಕಾರವು ವಿನಾಯಕ ದಾಮೋದರ ಸಾವರ್ಕರ್‌ರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಸರಕಾರದ ಈ ಕೆಳಗಿನ ನಿರ್ಣಯವನ್ನು ಗೃಹಖಾತೆಯು ಹೊರಡಿಸಿದೆ.
1. 1898 ಕ್ರಿಮಿನಲ್ ಪ್ರೊಸೀಜರ್ ಕೋಡ್, ಸೆಕ್ಷನ್ 401 ಕೆಳಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತ ಮಂಡಳಿಯ ಮುಖ್ಯಸ್ಥರಾದ ರಾಜ್ಯಪಾಲರು ದ್ವೀಪಾಂತರ ಶಿಕ್ಷೆಗೆ ಗುರಿಯಾಗಿರುವ ವಿನಾಯಕ ದಾಮೋದರ ಸಾವರ್ಕರ್‌ರ ಇನ್ನೂ ಉಳಿದಿರುವ ಸಜೆಯನ್ನು ಮನ್ನಾ ಮಾಡಲಾಗಿದೆ.
2. ಈ ಆಜ್ಞೆಯಲ್ಲಿ ನಿರೂಪಿಸಿರುವ ಷರತ್ತುಗಳನ್ನು ಅಪರಾಧಿಯು ಒಪ್ಪಿಕೊಂಡು ಒಂದು ಮುಚ್ಚಳಿಕೆಯನ್ನು ಬರೆದುಕೊಟ್ಟು ಕಾರಾಗೃಹದ ಮಹಾಧಿಕಾರಿಯ ಮುಖಾಂತರ ಸರಕಾರಕ್ಕೆ ರವಾನಿಸತಕ್ಕದ್ದು ಹಾಗೂ ಈ ಆಜ್ಞಾನುಸಾರ ಕೈದಿಯನ್ನು ಬಿಡುಗಡೆ ಮಾಡಿದ ವರದಿಯನ್ನು ಅದರೊಡನೆ ಕಳಿಸಿಕೊಡತಕ್ಕದ್ದು.
ಬಿಡುಗಡೆ ಮಾಡುವ ಈ ಆಜ್ಞೆಗೆ ಲಗತ್ತಿಸಿರುವ ಷರತ್ತುಗಳು ಈ ಕೆಳಗಿನವು:
1. ಸದರಿ ವಿನಾಯಕ ದಾಮೋದರ ಸಾವರ್ಕರ್ ಗೌರ್ನರ್ ಆಡಳಿತೆಯ ವ್ಯಾಪ್ತಿಯಲ್ಲಿರುವ ಮುಂಬೈ ಆಧಿಪತ್ಯದ ಪ್ರದೇಶದಲ್ಲಿಯೇ ವಾಸಿಸತಕ್ಕದ್ದು. ಈ ಪ್ರದೇಶದಲ್ಲಿರುವ ರತ್ನಗಿರಿ ಜಿಲ್ಲೆಯ ಹದ್ದಿನೊಳಗಡೆಯೇ ಇರತಕ್ಕದ್ದು. ಸರಕಾರದ ಅಪ್ಪಣೆಯಿಲ್ಲದೆ, ತುರ್ತು ಸಂದರ್ಭಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ ಅಪ್ಪಣೆಯಿಲ್ಲದೆ ಆ ಜಿಲ್ಲೆಯ ಹದ್ದನ್ನು ದಾಟಿ ಹೋಗತಕ್ಕದ್ದಲ್ಲ.
2. ಸರಕಾರದ ಒಪ್ಪಿಗೆಯಿಲ್ಲದೆ, ಇನ್ನೈದು ವರ್ಷ ಅವರು ಸಾರ್ವಜನಿಕವಾಗಿ ಇಲ್ಲವೆ ಖಾಸಗಿಯಾಗಿ ಯಾವ ವಿಧವಾದ ರಾಜಕೀಯ ಚಟುವಟಿಕೆಯಲ್ಲಿ ತೊಡಗತಕ್ಕದ್ದಲ್ಲ ಹಾಗೂ ಐದು ವರ್ಷದ ಅವಧಿ ಮುಗಿದ ನಂತರವೂ ಮೇಲಿನ ನಿರ್ಬಂಧಗಳನ್ನು ಸರಕಾರವು ಮುಂದುವರಿಸುವ ಅಧಿಕಾರ ಹೊಂದಿರುತ್ತದೆ.
ಮಿ.ಸಾವರ್ಕರ್ ಮೇಲಿನ ಷರತ್ತುಗಳನ್ನು ಒಪ್ಪಿಕೊಳ್ಳುವ ಇಂಗಿತವನ್ನು ಆಗಲೇ ವ್ಯಕ್ತಪಡಿಸಿದ್ದಾರೆ. ಈ ಕೆಳಗಿನ ದೃಢೀಕರಣವು ಅವರ ಬಿಡುಗಡೆಯ ಷರತ್ತು ಅಲ್ಲವೆಂದು ಅವರಿಗೆ ವಿವರಿಸಿದರೂ ಅವರು ಈ ಕೆಳಗಿನ ದೃಢೀಕರಣ ಬರೆದುಕೊಟ್ಟಿದ್ದಾರೆ. ‘‘ನನ್ನ ವಿಚಾರಣೆಯು ನಿಷ್ಪಕ್ಷಪಾತವಾಗಿತ್ತೆಂದೂ ಶಿಕ್ಷೆಯು ನ್ಯಾಯಸಮ್ಮತವೂ ಆಗಿತ್ತೆಂದು ಒಪ್ಪಿಕೊಳ್ಳುತ್ತೇನೆ. ಕಳೆದ ದಿನಮಾನಗಳಲ್ಲಿ ನಾನು ನಿರತನಾಗಿದ್ದ ಹಿಂಸಾತ್ಮಕ ಮಾರ್ಗಗಳನ್ನು ನಾನು ಹೃತ್ಪೂರ್ವಕವಾಗಿ ಖಂಡಿಸುತ್ತೇನೆ ಹಾಗೂ ಇನ್ನು ಮುಂದೆ ನನಗೆ ಕೊಡಬಹುದಾದ ಅವಕಾಶದ ಪರಿಮಿತಿಯಲ್ಲಿ ಸುಧಾರಣೆಗಳನ್ನು ಯಶಸ್ವಿಗೊಳಿಸಲು ನಾನು ಸಮ್ಮತಿಸುತ್ತೇನೆ.’’
ಯಥಾ ನಕಲು.
ಗೆ: ಯರವಾಡ ಕಾರಾಗೃಹ ಸೂಪರಿಂಟೆಂಡೆಂಟ್

***
ಶಿರಗಾಂವ
9ನೇ ಮೇ 1925
ಗೆ,
ಡಿ. ಓ. ಫಿನ್ Esq
ಹಂಗಾಮಿ ಡೆಪ್ಯೂಟಿ ಕಾರ್ಯದರ್ಶಿ, ಮುಂಬೈ ಸರಕಾರ
ಗೃಹ ಇಲಾಖೆ (ಮುಂಬೈ)


ಮಾನ್ಯರೇ,
ಕೊಹಾಟ್‌ನಲ್ಲಿ ಜರುಗಿದ ದೊಂಬಿಯ ವಿಷಯವಾಗಿ ‘ಮರಾಠಾ’ ಪತ್ರಿಕೆಯಲ್ಲಿ ಬಂದ ಲೇಖನದ ಬಗ್ಗೆ ತಾವು ದಿನಾಂಕ ಮೇ 6ರಂದು ಬರೆದ ಪತ್ರ ನನಗೆ ತಲುಪಿತು. ಸರಕಾರದ ಪ್ರಕೃತ ಧೋರಣೆಗಳ ಬಗ್ಗೆ-ಅರ್ಥಾತ್, ಆಂತರಿಕ ಅಥವಾ ಅಂತರ್‌ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ಸರಕಾರದ ಯಾವುದೇ ಧೋರಣೆಯ ಬಗ್ಗೆ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಗಲಿ ನಾನು ಭಾಗವಹಿಸತಕ್ಕದ್ದಲ್ಲ ಎಂಬ ಷರತ್ತನ್ನು ನಾನು ಅರ್ಥಮಾಡಿಕೊಂಡಿದ್ದನ್ನು ಈಗ ಬದಲಾಯಿಸುವಂತೆ ಮಾಡಿದೆ. ನಾನು ತಿಳಿದುಕೊಂಡ ಅರ್ಥದ ಬೆಳಕಿನಲ್ಲಿ ನಾನು ನನ್ನ ಸಾರ್ವಜನಿಕ ಚಟುವಟಿಕೆಗಳ ಮಾರ್ಗದರ್ಶಿಯೆಂದು ಭಾವಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಆದರೆ ಈ ಆಜ್ಞೆಯು (ಸರಕಾರ ವಿಧಿಸಿದ) ಷರತ್ತನ್ನು ಇನ್ನೂ ಸೀಮಿತ ಅರ್ಥದಲ್ಲಿ ತಿಳಿಯಬೇಕೆಂದು ನನ್ನನ್ನು ಒತ್ತಾಯಿಸುತ್ತದೆ.
ಈ ಹೊಸ ಆಜ್ಞೆಯ ದೃಷ್ಟಿಯಲ್ಲಿ ನನ್ನ ನಿಲುಮೆಯನ್ನು ಆ ಪರಿಮಿತಿಗೆ ಒಳಪಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಈ ಆಜ್ಞೆಯು ಮೇ 8ನೇ ತಾರೀಖು ನನ್ನ ಕೈ ಸೇರಿತು. ಆ ದಿನಾಂಕಕ್ಕಿಂತ ಹಿಂದೆ ಬರೆದ ಲೇಖನಗಳನ್ನು, ಭಾಷಣಗಳನ್ನು ಈ ಆಜ್ಞೆಗೆ ಒಳಪಟ್ಟಿವೆ ಎಂದೇ ಬಗೆಯಬೇಕೆಂದು ನಾನು ಅತ್ಯಂತ ದೀನವಾಗಿ ಬೇಡಿಕೊಳ್ಳುತ್ತೇನೆ. ಯಾಕೆಂದರೆ ಅವು (ಲೇಖನ ಮತ್ತು ಭಾಷಣಗಳು) ನನ್ನ ಬಿಡುಗಡೆಯ ಷರತ್ತುಗಳನ್ನು ನಾನು ಮೊದಲು ನೇರವಾಗಿ ಮತ್ತು ಸಹಜವಾಗಿ ಹೇಗೆ ಅರ್ಥೈಸಿದ್ದೇನೆಯೋ ಅದರ ಮಾರ್ಗಸೂಚಿಯಂತೆ ಮಾಡಲಾಗಿತ್ತು. ನಿಮ್ಮ ಪತ್ರ ತಲುಪಿದ ದಿನಾಂಕದ ತರುವಾಯ ನನ್ನ ಎಲ್ಲ ಚಟುವಟಿಕೆಗಳೂ ಈಗ ನೀವು ಮಾಡಿದ ಅರ್ಥಕ್ಕೆ ಒಳಪಟ್ಟೇ ಇರುತ್ತವೆ.
ಸ್ವಾಮೀ
ನಿಮ್ಮ ಅತ್ಯಂತ ಆಜ್ಞಾಧಾರಕ ಸೇವಕನಾಗಿರುವ ಗೌರವ
ನನ್ನದಾಗಿರುವ
(ಸಹಿ) ವಿ.ಡಿ. ಸಾವರ್ಕರ್


ದಿನಾಂಕ ಎಪ್ರಿಲ್ 7, 1995ರಲ್ಲಿ ಫ್ರಂಟ್ ಲೈನ್‌ನಲ್ಲಿ ಬಂದ ಲೇಖನದ ಕೆಲವು ಭಾಗ: ಫೆಬ್ರವರಿ 1925ರಲ್ಲಿ ಈಶಾನ್ಯ ಸರಹದ್ದು ಪ್ರಾಂತದ ಕೊಹಾಟ್ ಪಟ್ಟಣದಲ್ಲಿ ಗಂಭೀರ ಸ್ವರೂಪದ ಕೋಮುಗಲಭೆ ದೊಂಬಿ ಉಂಟಾಯಿತು. ಕೊಹಾಟ್‌ನಲ್ಲಿದ್ದ ಜೀವನ್‌ದಾಸ್ ಎಂಬಾತ ‘ರಂಗಿಲ ರಸೂಲ್’ ಎಂಬ ಒಂದು ಹೊತ್ತಿಗೆಯನ್ನು ಬರೆದು ಪ್ರವಾದಿ ಮುಹಮ್ಮದ್‌ರನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿತ್ತು. ಅದರಿಂದಾಗಿ ಕೊಹಾಟ್ ಪಟ್ಟಣ ಮತ್ತು ಪಂಜಾಬ್‌ನ ಇತರ ಕಡೆ ದೊಂಬಿ ಎದ್ದಿತ್ತು. ಇದರ ಬಗ್ಗೆ ದೇಶದಲ್ಲೆಲ್ಲ ಗುಸುಗುಸು ಸುದ್ದಿ ಹಬ್ಬಿತ್ತು. ಇದರಿಂದ ಉದ್ವಿಗ್ನಗೊಂಡ ಸಾವರ್ಕರ್‌ರು ಮಾರ್ಚ್ 1, 1925ರಂದು ಮರಾಠಾ ಪತ್ರಿಕೆಯಲ್ಲಿ ಲೇಖನ ಬರೆದರು.
ಸರಕಾರ ಇದನ್ನು ತೀಕ್ಷ್ಣವಾಗಿ ಪರಿಗಣಿಸಿತು. ‘‘ಇನ್ನು ಮುಂದೆ ಇಂತಹ ಲೇಖನಗಳು ಈ ಬಗೆಯಾಗಿದ್ದರೆ, ಅವರ ಬಿಡುಗಡೆಯ ವಿಚಾರವನ್ನು ಸರಕಾರ ಪುನಃ ಪರಿಶೀಲಿಸಲು ಸಾಕಷ್ಟು ಸಕಾರಣವಾಗುತ್ತದೆ’’ ಎಂದು ಸರಕಾರ ಸಾವರ್ಕರ್‌ರಿಗೆ ಎಚ್ಚರಿಕೆ ಕೊಟ್ಟಿತು. ಕೊಹಾಟ್ ದೊಂಬಿಯ ಬಗ್ಗೆ ಸಾವರ್ಕರ್‌ಗೆ ಬಹು ತೀವ್ರ ಭಾವನೆಗಳಿದ್ದರೂ ಸಹಿತ ಒಂದು ದೀರ್ಘ ಸಮಜಾಯಿಷಿಯನ್ನು ಬರೆಯುತ್ತಾ, ತನ್ನ ನಿಲುಮೆಯನ್ನು ವಿವರಿಸುವ ಅವಕಾಶವನ್ನು ಕೊಟ್ಟದ್ದಕ್ಕಾಗಿ ಸರಕಾರಕ್ಕೆ ತನ್ನ ಕೃತಜ್ಞತೆಯನ್ನು ಅರ್ಪಿಸಿದರು. ಹಾಗೂ ಇನ್ನು ಮುಂದೆಯೂ ತಮ್ಮ ಬಗ್ಗೆ ದಯಾದೃಷ್ಟಿಯನ್ನಿಟ್ಟುಕೊಳ್ಳುವರೆಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು. ಎಪ್ರಿಲ್ 6ರ ಈ ಪತ್ರದಲ್ಲಿ ಅವರು ‘ಸ್ವರಾಜ್ಯ’ ಎಂಬ ಶಬ್ದ ಮೂರನೆಯ ಪ್ಯಾರಾದ ಕೊನೆಯಲ್ಲಿ ಒಂದೇ ಒಂದು ಕಡೆ ಬಂದಿದೆ. ಅದರ ಸಂದರ್ಭವನ್ನು ನೋಡಿದರೆ ನಾನಾಗಲಿ ಇತರ ಜನರಾಗಲಿ ಸ್ವರಾಜ್ಯದ ವಿಚಾರವಾಗಿ ಯೋಚನೆ ಮಾಡುತ್ತಾರೆಂದು ಇಲ್ಲವೇ ಅಂತಹ ಇಂಗಿತವಾದರೂ ಇದ್ದೀತೆಂದು ಕಾಣದು. ಆದರೆ ಮಿ.ಗಾಂಧಿ ಖಿಲಾಫತ್ ಚಳವಳಿಯನ್ನು ಯಾವ ಉತ್ಪ್ರೇಕ್ಷಿತ ಅರ್ಥದಲ್ಲಿ ಕಾಣುತ್ತಿದ್ದಾರೆಂಬುದನ್ನು ತೋರಿಸಲು ಅಲ್ಲಿ ಸ್ವರಾಜ್ಯ ಶಬ್ದ ಬಂದಿದೆ.
ಇದರಿಂದಲೂ ಸರಕಾರಕ್ಕೆ ಸಮಾಧಾನವಾಗಲಿಲ್ಲ. ಮೇ 6, 1925ರ ಅವರ ಪತ್ರ ಎಷ್ಟೂ ತೃಪ್ತಿದಾಯಕವಾಗಿಲ್ಲ ಎಂದು ಕಟುವಾಗಿ ತಿಳಿಸಲಾಯಿತು. ಮಾರ್ಚ್ 1ರ ಮರಾಠಾ ಪತ್ರಿಕೆಯಲ್ಲಿ ಬಂದ ನಿಮ್ಮ ಲೇಖನ ಹಿಂದೂ-ಮುಸ್ಲಿಮರಲ್ಲಿ ಉದ್ರೇಕಕ್ಕೆ ಉದ್ದೀಪನೆಯಾಗುವವೆಂದೂ ಸರಕಾರದ ಒಪ್ಪಿಗೆಯಿಲ್ಲದೆ ಯಾವ ರಾಜಕೀಯ ಚಟುವಟಿಕೆಗಳಲ್ಲೂ ತೊಡಗುವುದಿಲ್ಲ ಎಂದು ನೀವು ಬರೆದುಕೊಟ್ಟ ಮುಚ್ಚಳಿಕೆಗೆ ವ್ಯತಿರಿಕ್ತವಾಗಿತ್ತೆಂದು ನಿಮಗೆ ತಿಳಿದಿರಬೇಕಾಗಿತ್ತು.
....................................................
ಸರಕಾರ ತೀಕ್ಷ್ಣ ಕಠೋರ ಕ್ರಮ ಕೈಕೊಳ್ಳಬಹುದೆಂದು ಸಾವರ್ಕರ್ ಹೆದರಿಬಿಟ್ಟರು. ಮೇ 8ರ ನಂತರ ಅವರು ಯಾವ ಲೇಖನವನ್ನೂ ಬರೆಯಲಿಲ್ಲ.
ಇದು ಸ್ವಾತಂತ್ರಪೂರ್ವದಲ್ಲಿ ವೀರ ಸಾವರ್ಕರ್‌ರು ತೋರಿಸಿದ ಧ್ಯೆರ್ಯ, ಶೌರ್ಯ ಮತ್ತು ವೀರ್ಯ!!
***
ಸ್ವಾತಂತ್ರಾನಂತರ ಗಾಂಧಿ ಹತ್ಯೆಯ ಹೀನ ಮೊಕದ್ದಮೆಯಲ್ಲಿ ಆರೋಪಿಯಾಗಿ ವಿಚಾರಣಾಧೀನ ಕೈದಿ ಆಗಿದ್ದಾಗ ವೀರ ಸಾವರ್ಕರ್‌ರೆಂದು ಈಗ ಸಂಘಪರಿವಾರ ಬಹುಪರಾಕ್ ಹೇಳುವ ಆ ‘ವೀರರು’ ಎಷ್ಟು ಧ್ಯೆರ್ಯಶಾಲಿಗಳು ಎಂಬುದನ್ನು ಆರ್ಥರ್ ರೋಡ್ ಕಾರಾಗೃಹದಿಂದ 22-2-1948ರಂದು ಅವರು ಬರೆದ ಪತ್ರದಿಂದ ತಿಳಿಯಬಹುದು.
ಆರ್ಥರ್ ರೋಡ್ ಕಾರಾಗೃಹ
                     ಮುಂಬೈ 22-2-1948
ಗೆ
ಪೊಲೀಸ್ ಕಮಿಷನರ್
ಮುಂಬೈ

ಮಾನ್ಯರೇ,
ನಿಮ್ಮ ನಂ. 1202-1948ರ ನೋಟಿಸು ಮೊನ್ನೆ ತಲುಪಿತು.
(1)..... (2).....
(3).....ಕೊನೆಯದಾಗಿ ನಾನೀಗ 65 ವರ್ಷದಲ್ಲಿದ್ದೇನೆಂದು ತಿಳಿಸಲು ಬಿನ್ನೈಸುತ್ತೇನೆ. ಕಳೆದ ಮೂರು ವರ್ಷಗಳಿಂದ ಹೃದಯ ವೇದನೆ ಮತ್ತು ದೌರ್ಬಲ್ಯದಿಂದ ಆಗಾಗ ಹಾಸಿಗೆ ಹಿಡಿಯುತ್ತಿದ್ದೇನೆ. ಆಗಸ್ಟ್ 15ರಂದು ನಾನು ನಮ್ಮ ನೂತನ ರಾಷ್ಟ್ರಧ್ವಜವನ್ನು ಒಪ್ಪಿಕೊಂಡು ನಮ್ಮ ಮನೆಯ ಮಾಳಿಗೆಯ ಮೇಲೆ ಹಾರಿಸಿದೆ. ಅದರಿಂದ ನನ್ನ ಕೆಲವು ಜನ ಹಿಂಬಾಲಕರಿಗೆ ಮುಜುಗರ ಎನಿಸಿದರೂ ಕೂಡ.
ತತ್ಪರಿಣಾಮವಾಗಿ, ಎಲ್ಲ ಸಂಶಯ ನಿವಾರಣೆ ಮಾಡಲು ಮತ್ತು ಮೇಲೆ ಕಾಣಿಸಿದ ನನ್ನ ಮನವಿಯ ಸಮರ್ಥನೆಗಾಗಿ, ನನ್ನನ್ನು ಬಿಡುಗಡೆ ಮಾಡಿದ ಪಕ್ಷದಲ್ಲಿ, ಸರಕಾರವು ಬಯಸಿದಷ್ಟು ಕಾಲಾವಧಿ ಯಲ್ಲಿ ನಾನು ಯಾವುದೇ ಬಗೆಯ, ಮತೀಯ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸರಕಾರಕ್ಕೆ ಮುಚ್ಚಳಿಕೆ ಬರೆದುಕೊಡಲು ಸಿದ್ಧನಿದ್ದೇನೆ.
(ಸಹಿ) ವಿ.ಡಿ. ಸಾವರ್ಕರ್

( ಶನಿವಾರ ಸಂಚಿಕೆಗೆ ಮುಂದುವರಿಯುವುದು...)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ