ಜಾರ್ಖಂಡ್ ನಲ್ಲಿ ಯುವಕನ ಥಳಿಸಿ ಹತ್ಯೆ: ಬಿಜೆಪಿಯ 'ಶಕ್ತಿಶಾಲಿ' ಧ್ವನಿಗಳ ಮೌನ ಪ್ರಶ್ನಿಸಿದ ರಾಹುಲ್‌

Update: 2019-06-25 18:34 GMT

ಹೊಸದಿಲ್ಲಿ,ಜೂ.25: ಜಾರ್ಖಂಡ್‌ನ ಜಮ್ಷೆಡ್‌ಪುರದ ಸಮೀಪ 24ರ ಹರೆಯದ ಮುಸ್ಲಿಂ ಯುವಕನೋರ್ವನನ್ನು ಗುಂಪು ಥಳಿಸಿ ಹತ್ಯೆಗೈದ ಘಟನೆಯನ್ನು ಮಾನವತೆಗೊಂದು ಕಳಂಕ ಎಂದು ಮಂಗಳವಾರ ಬಣ್ಣಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ಕೇಂದ್ರ ಮತ್ತು ರಾಜ್ಯದಲ್ಲಿಯ ಬಿಜೆಪಿಯ ‘ಶಕ್ತಿಶಾಲಿ ಧ್ವನಿ ’ಗಳ ವೌನವನ್ನು ಪ್ರಶ್ನಿಸಿದ್ದಾರೆ.

ಸರಾಯಿಕೇಲಾ-ಖರಸ್ವಾನ್ ಜಿಲ್ಲೆಯ ಧಾಟ್ಕಿಧಿ ಎಂಬ ಗ್ರಾಮದಲ್ಲಿ ಗುಂಪೊಂದು ಕಳ್ಳತನದ ಆರೋಪದಲ್ಲಿ ತಬ್ರೇಝ್ ಆಲಮ್ ಎಂಬಾತನನ್ನು ಥಳಿಸಿ,ಜೈ ಶ್ರೀರಾಮ ಮತ್ತು ಜೈ ಹನುಮಾನ್ ಘೋಷಣೆಗಳನ್ನು ಕೂಗುವಂತೆ ಬಲವಂತಗೊಳಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತ ಜೂ.22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

 ‘‘ ಜಾರ್ಖಂಡ್‌ನಲ್ಲಿ ಗುಂಪಿನಿಂದ ಬರ್ಬರವಾಗಿ ಥಳಿಸಲ್ಪಟ್ಟು ಯುವಕ ಸಾವನ್ನಪ್ಪಿರುವುದು ಮಾನವತೆಗೆ ಕಳಂಕವಾಗಿದೆ. ಸಾಯಲು ಬಿದ್ದಿದ್ದ ಯುವಕನನ್ನು ನಾಲ್ಕು ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡಿದ್ದ ಪೊಲೀಸರ ಕ್ರೌರ್ಯವು ಬಿಜೆಪಿ ಆಡಳಿತದ ಕೇಂದ್ರ ಮತ್ತು ರಾಜ್ಯದಲ್ಲಿಯ ಶಕ್ತಿಶಾಲಿ ಧ್ವನಿಗಳ ವೌನದಷ್ಟೇ ಆಘಾತಕಾರಿಯಾಗಿದೆ ’’ ಎಂದು ರಾಹುಲ್ ಟ್ವೀಟಿಸಿದ್ದಾರೆ.

ತಬ್ರೇಝ್ ಸಾವಿಗೆ ಸಂಬಂಧಿಸಿದಂತೆ ಜಾರ್ಖಂಡ್ ಸರಕಾರವು ಈಗಾಗಲೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ. ಜಾರ್ಖಂಡ್ ಗುಂಪಿನಿಂದ ಥಳಿಸಿ ಹತ್ಯೆಗಳು ಮತ್ತು ಹಿಂಸಾಚಾರಗಳ ಫ್ಯಾಕ್ಟರಿಯಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ಸೋಮವಾರ ಬಣ್ಣಿಸಿದ್ದರು.

ಈ ಅಮಾನವೀಯ ಘಟನೆಯ ಕುರಿತು ಸೃಷ್ಟಿಯಾಗಿರುವ ಆಕ್ರೋಶಗಳ ನಡುವೆಯೇ ಜಾರ್ಖಂಡ್ ಸಚಿವ ಸಿ.ಪಿ.ಸಿಂಗ್ ಅವರು,ಇಂತಹ ಘಟನೆಗಳನ್ನು ರಾಜಕೀಯಗೊಳಿಸುವದು ತಪ್ಪು ಮತ್ತು ರಾಜ್ಯ ಸರಕಾರವು ಈ ವಿಷಯದಲ್ಲಿ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News