ಅಸ್ಸಾಂ ರಾಷ್ಟ್ರೀಯ ನಾಗರಿಕರ ಪಟ್ಟಿಯಿಂದ ಮತ್ತೆ 1.02 ಲಕ್ಷ ಜನರು ಹೊರಕ್ಕೆ

Update: 2019-06-26 07:54 GMT

ಗುವಾಹಟಿ, ಜೂ.26: ಅಸ್ಸಾಂ ರಾಜ್ಯದ ವಿವಾದಿತ ಕರಡು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನಿಂದ ಇಂದು ಮತ್ತೆ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಹೊರಗಿಡಲಾಗಿದೆ.

ಎನ್‌ಆರ್‌ಸಿಯಿಂದ ಕೈಬಿಡಲಾದವರ ಕರಡು ಪಟ್ಟಿಯಲ್ಲಿ 1.02 ಲಕ್ಷ ಜನರ ಹೆಸರಿದೆ. ಈ ಮಂದಿಯ ಹೆಸರು ಕಳೆದ ಜುಲೈ ತಿಂಗಳಲ್ಲಿ ಬಿಡುಗಡೆಯಾದ ಕರಡು ಪಟ್ಟಿಯಲ್ಲಿತ್ತು. ಆದರೆ ಈ ಹೆಸರುಗಳು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನಲ್ಲಿ ಸೇರ್ಪಡೆಗೊಳ್ಳಲು ಅನರ್ಹ ಎಂದು ನಂತರ ತಿಳಿದು ಬಂದಿತ್ತು.

ಪಟ್ಟಿಯಿಂದ ಕೈಬಿಡಲಾದವರರನ್ನು ವೈಯಕ್ತಿಕವಾಗಿ ಅವರ ವಿಳಾಸಗಳಿಗೆ ಪತ್ರ ಕಳುಹಿಸುವ ಮೂಲಕ ತಿಳಿಸಲಾಗುವುದು. ಈ ಮಂದಿ ತಾವು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ನಲ್ಲಿ ಸೇರ್ಪಡೆಗೊಳ್ಳಲು ಅರ್ಹರು ಎಂಬುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಜುಲೈ 11ರೊಳಗಾಗಿ ಎನ್‌ಆರ್‌ಸಿ ಸಹಾಯ ಕೇಂದ್ರಗಳಿಗೆ ಸಲ್ಲಿಸಬೇಕಾಗಿದೆ.

ಜುಲೈ 30ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ 40 ಲಕ್ಷಕ್ಕೂ ಅಧಿಕ ಮಂದಿಯ ಹೆಸರುಗಳನ್ನು ಕೈಬಿಟ್ಟಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇವರಲ್ಲಿ ಲಕ್ಷಗಟ್ಟಲೆ ಜನರು ಮರು-ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಒಟ್ಟು 3.29 ಕೋಟಿ ಅರ್ಜಿಗಳ ಪೈಕಿ 2.9 ಕೋಟಿ ಜನರ ಹೆಸರು ಪಟ್ಟಿಯಲ್ಲಿದೆ.

ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಅಸ್ಸಾಂ ರಾಜ್ಯದ ಎನ್‌ಆರ್‌ಸಿಯನ್ನು ಅಪ್ಡೇಟ್ ಮಾಡಲಾಗಿದ್ದು, ಅಂತಿಮ ಪಟ್ಟಿ ಜುಲೈ 31ರಂದು ಪ್ರಕಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News