ಮಹಾರಾಷ್ಟ್ರ: ಕುಲಾಂತರಿ ಹತ್ತಿ ಬೀಜ ಬಿತ್ತಿದ 12 ರೈತರ ಬಂಧನ

Update: 2019-06-26 16:53 GMT

  ಅಕೋಲಾ,ಜೂ.26: ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿ ಎಂಬಂತೆ,ಎಚ್‌ಟಿಬಿಟಿ ಕುಲಾಂತರಿ ಹತ್ತಿ ಬೀಜಗಳನ್ನು ಬಿತ್ತಿದ್ದಕ್ಕಾಗಿ ಅಕೋಲಾ ಜಿಲ್ಲೆಯ ಕನಿಷ್ಠ 12 ಮಂದಿ ರೈತರನ್ನು ಬಂಧಿಸಲಾಗಿದೆಯೆಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

 ಕುಲಾಂತರಿ ಬಿಟಿ ಹತ್ತಿ ಹಾಗೂ ಬದನೆ ಬೀಜಗಳ ಬಳಕೆಗೆ ಕೇಂದ್ರ ಸರಕಾರ ನಿಷೇಧ ವಿಧಿಸಿರುವುದನ್ನು ವಿರೋಧಿಸಿ ಶೇತ್ಕರಿ ಸಂಘಟನಾ ಸಂಸ್ಥೆಯು ಆಯೋಜಿಸಿದ ಪ್ರತಿಭಟನೆಯ ಅಂಗವಾಗಿ ಈ ರೈತರು ಅಡ್‌ಗಾಂವ್ ಹಾಗೂ ಅಕೋಲಿ ಜಹಾಂಗೀರ್ ಗ್ರಾಮಗಳಲ್ಲಿ ಈ ಬೀಜಗಳನ್ನು ಬಿತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ದಂಡಸಂಹಿತೆ ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ಬೀಜಗಳ ಕಾಯ್ದೆಯಡಿ ರೈತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಯೆಂದು ಹಿವಾರ್‌ಖೇಡ್ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಸೋಮನಾಥ ಪವಾರ್‌ತಿಳಿಸಿದ್ದಾರೆ.

      ಪೂರ್ವ ಮಹಾರಾಷ್ಟ್ರದ ಜಿಲ್ಲೆಯಾದ ಅಕೋಲಾದಲ್ಲಿ ಜೂನ್ 10ರಂದು ನೂರಾರು ರೈತರು ಕುಲಾಂತರಿ ಜಿಎಂ ಹತ್ತಿ ಹಾಗೂ ಬದನೆ ಬೀಜಗಳನ್ನು ಬಿತ್ತಿದ್ದರು. ಜಿಎಂ ಕುಲಾಂತರಿ ಬೆಳೆಗಳ ಮೇಲೆ ನಿಷೇಧ ವಿಧಿಸಿರುವುದನ್ನು ಶೇತ್ಕರಿ ಸಂಘಟನೆಯು ವಿರೋಧಿತ್ತಿದೆ. ಜಿಎಂ ಕುಲಾಂತರಿ ಬೆಳೆಗಳು ಅಧಿಕ ಇಳುವರಿ ನೀಡುತ್ತವೆ ಹಾಗೂ ಬೆಳೆಗಾರರಿಗೆ ಲಾಭ ತಂದುಕೊಡುತ್ತದೆ ಎಂಬುದು ಅದರ ವಾದವಾಗಿದೆ.

  ಭಾರತದಲ್ಲಿ ಕುಲಾಂತರಿ ಬೆಳೆಗಳ ಉತ್ಪಾದನೆ, ಬಳಕೆ, ರಫ್ತು, ಆಮದು ಹಾಗೂ ದಾಸ್ತಾನಿಗೆ ಸಂಬಂಧಿಸಿ ಪರಿಸರ (ಸಂರಕ್ಷಣಾ) ಕಾಯ್ದೆ 1986ರಡಿ ಕಠಿಣವಾದ ನಿರ್ಬಂಧಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News