ಇರಾನ್ ಅಮೆರಿಕದೊಂದಿಗೆ ಯುದ್ಧ ಬಯಸುವುದಿಲ್ಲ: ಫ್ರಾನ್ಸ್ ಅಧ್ಯಕ್ಷರಿಗೆ ರೂಹಾನಿ ಭರವಸೆ

Update: 2019-06-26 18:03 GMT

ಟೆಹರಾನ್, ಜೂ. 26: ಇರಾನ್ ಅಮೆರಿಕದೊಂದಿಗೆ ಯಾವತ್ತೂ ಯುದ್ಧ ಬಯಸುವುದಿಲ್ಲ ಎಂಬುದಾಗಿ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ‘ಇರ್ನ’ ಬುಧವಾರ ವರದಿ ಮಾಡಿದೆ.

‘‘ವಲಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಆಸಕ್ತಿ ಇರಾನ್‌ಗಿಲ್ಲ ಹಾಗೂ ಅಮೆರಿಕ ಸೇರಿದಂತೆ ಯಾವುದೇ ದೇಶದೊಂದಿಗೆ ಅದು ಯುದ್ಧ ಬಯಸುವುದಿಲ್ಲ’’ ಎಂದು ರೂಹಾನಿ ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಜೊತೆ ಫೋನ್‌ನಲ್ಲಿ ಸಂಭಾಷಣೆ ನಡೆಸಿದ ವೇಳೆ, ರೂಹಾನಿ ಈ ಭರವಸೆ ನೀಡಿದ್ದಾರೆ.

ಅಮೆರಿಕದ ಬೇಹುಗಾರಿಕಾ ಡ್ರೋನ್ ಒಂದನ್ನು ಇರಾನ್ ಕಳೆದ ವಾರ ಹೊಡೆದುರುಳಿಸಿದ ಬಳಿಕ, ಇರಾನ್ ಮತ್ತು ಅಮೆರಿಕಗಳ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವುದನ್ನು ಸ್ಮರಿಸಬಹುದಾಗಿದೆ.

‘‘ನಾವು ಯಾವತ್ತೂ ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬದ್ಧರಾಗಿದ್ದೇವೆ ಹಾಗೂ ಈ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ನಡೆಸುತ್ತಿದ್ದೇವೆ’’ ಎಂದು ಇರಾನ್ ಅಧ್ಯಕ್ಷರು ಫ್ರಾನ್ಸ್ ಅಧ್ಯಕ್ಷರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News