ಇದು ಪ್ರಕೃತಿಯ ಮೇಲೆ ನಡೆಸುವ ಹಲ್ಲೆ

Update: 2019-06-26 18:10 GMT

ಮಾನ್ಯರೇ,

ಕುಡಿಯುವ ನೀರಿನ ಸಮಸ್ಯೆಗಳಿಗೆ ಸಮಂಜಸವಾದ ಉತ್ತರ ಹುಡುಕುವಲ್ಲಿ ಸರಕಾರವು ವಿಫಲವಾಗಿದೆ. ಕರಾವಳಿಯ ನೇತ್ರಾವತಿ, ಮಲೆನಾಡಿನ ಶರಾವತಿ ಜೀವನದಿಗಳನ್ನು ಬೆಂಗಳೂರು-ಚಿಕ್ಕಬಳ್ಳಾಪುರ ಮೊದಲಾದ ಪ್ರದೇಶಗಳಿಗೆ ತಿರುಗಿಸುವ ಪ್ರಯತ್ನಗಳನ್ನು ಸರಕಾರ ಮಾಡುತ್ತಿದೆ. ಈಗಾಗಲೇ ಎತ್ತಿನ ಹೊಳೆ ಯೋಜನೆಯ ಕಾಮಗಾರಿ ಭರದಿಂದ ನಡೆಯುತ್ತಿದೆ. ಅದಕ್ಕಾಗಿಯೇ ಎಣಿಕೆಗೆ ಸಿಗದಷ್ಟು ಮರಮಟ್ಟುಗಳನ್ನು ಉರುಳಿಸಲಾಗಿದೆ. ಪ್ರಕೃತಿ ಮೇಲಿನ ಹಸಿರು ನಾಶವಾದ ಕಾರಣದಿಂದ ಮಳೆ ಬೀಳುವ ಪ್ರಮಾಣ ಕಡಿಮೆ ಆಗಿದೆ. ಅದಕ್ಕೆ ಉತ್ತರವಾಗಿ ಭೂ ಮಡಿಲು ಹಸಿರಾಗಿಸುವ ಪ್ರಯತ್ನ ಮಾಡುವ ಬದಲು ಸರಕಾರ ಅವೈಜ್ಞಾನಿಕವಾಗಿ, ಪ್ರಕೃತಿ ಧರ್ಮಕ್ಕೆ ವಿರುದ್ಧವಾಗಿ ನದಿಗಳನ್ನು ತಿರುಗಿಸುವ ಯೋಜನೆಗಳನ್ನು ರೂಪಿಸುತ್ತಿದೆ. ಲಕ್ಷಾಂತರ ಮರಗಳನ್ನು ನಾಶಗೊಳಿಸುತ್ತಿದೆ. ಜನರ ಕೋಟ್ಯಂತರ ಹಣವನ್ನು ವ್ಯಯಮಾಡುತ್ತಿದೆ. ನದಿಗಳ ದಿಕ್ಕು ಬದಲಿಸುವ ಯೋಜನೆಗೆ ಕೃಷಿ ಭೂಮಿ, ಅರಣ್ಯ ಭೂಮಿ, ಜನ ವಸತಿ ಪ್ರದೇಶಗಳ ಕಬಳಿಸಲು ಮುಂದಾಗಿದೆ. ಅದಕ್ಕೆ ಬದಲಾಗಿ ಮಳೆ ನೀರು ಕೊಯ್ಲು, ಇಂಗು ಗುಂಡಿ ಮೊದಲಾದ ಭೂಗರ್ಭದೊಳಗೆ ಅಂತರ್ಜಲ ಹೆಚ್ಚಿಸುವ ವಿಧಾನಗಳ ಪ್ರಚಾರ ಪಡಿಸುವ ಮತ್ತು ಕಾರ್ಯಗತಗೊಳಿಸುವ ಪ್ರಯತ್ನಗಳನ್ನು ಮಾಡಬಹುದಿತ್ತು. ಈ ಮೂಲಕ ಜಲಕ್ಷಾಮವನ್ನು ಹತ್ತಿರ ಸುಳಿಯದಂತೆ ಮಾಡಬಹುದಿತ್ತು.

ಪಾಶ್ಚಿಮಾತ್ಯ-ತೈಲ ರಾಷ್ಟ್ರಗಳಲ್ಲಿ ಅಲ್ಲಿಯ ಆಡಳಿತ ವ್ಯವಸ್ಥೆಗಳು ಸಮುದ್ರದ ಉಪ್ಪುನೀರನ್ನು ಸಿಹಿಯಾಗಿ ಪರಿವರ್ತಿಸುತ್ತಿದ್ದಾರೆ. ಆ ನೀರಿನಿಂದಲೇ ಅಲ್ಲಿಯ ನಾಗರಿಕ ಸಮಾಜದ ಬದುಕು ಸಾಗುತ್ತಿದೆ. ನಮ್ಮ ದೇಶದ ಮೂಡಣ, ಪಡುವಣ, ತೆಂಕಣ ತ್ರಿದಿಕ್ಕುಗಳಲ್ಲಿ ಸುಮುದ್ರಗಳಿದ್ದು ಇಲ್ಲಿಯ ಉಪ್ಪು ನೀರನ್ನು ವಿದೇಶದ ತಂತ್ರಜ್ಞಾನದಂತೆ ಸಿಹಿಗೊಳಿಸಬಹುದಲ್ಲವೇ..! ಈ ಬಗ್ಗೆ ಕಡಲ ತಡಿ ಹೊಂದಿರುವ ರಾಜ್ಯ ಸರಕಾರಗಳು ಮತ್ತು ಕೇಂದ್ರ ಸರಕಾರ ಅಗತ್ಯವಾಗಿ ಚಿಂತಿಸಬೇಕಾಗಿದೆ. ನದಿ ತಿರುವು ಯೋಜನೆಗಳು ಹೀಗೆ ಮುಂದುವರಿಯುತ್ತ ಹೋದರೆ, ಸರಕಾರವು ಮುಂದಿನ ದಿನಗಳಲ್ಲಿ ಹಳ್ಳ ಕೊಳ್ಳಗಳ ತಿರುವು ಯೋಜನೆಗಳನ್ನು ರೂಪಿಸಲೂಬಹುದು. ನೀರಿನ ಸಮಸ್ಯೆಗೆ ಪ್ರಕೃತಿ ಧರ್ಮವನ್ನು ಬದಲಿಸುವುದು ಉತ್ತರವಲ್ಲ. ಭೂ ಮಡಿಲು ಹಸಿರಾಗಿಸುವ ಪ್ರಯತ್ನವೇ ಜಲಕ್ಷಾಮ ನಿವಾರಣೆಗೆ ಪರಿಹಾರ ಎಂದು ಸರಕಾರ ಸ್ವೀಕರಿಸಬೇಕು. ನದಿ ತಿರುಗಿಸುವ ಯೋಜನೆಗಳು ಪ್ರಕೃತಿಯ ಮೇಲೆ ನಡೆಸುವ ಹಲ್ಲೆ. ಸರಕಾರ ನಿರ್ಧರಿಸಿದ ನದಿ ತಿರುವು ಯೋಜನೆ ಖಂಡನೀಯವಾಗಿದೆ.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News