ನಮ್ಮ ಮತದಾರರು ಈ ಚುನಾವಣೆಯಲ್ಲಿ ನಂಜುಂಡಸ್ವಾಮಿಯವರಂತೆ ನಿಷ್ಠುರರಾಗಬೇಕಾಗಿದೆ

ರೈತಸಂಘದ ಮಹಾನ್ ನಾಯಕ ಪ್ರೊ.ನಂಜುಂಡಸ್ವಾಮಿಯವರು ಶಾಸಕರಾಗಿದ್ದಾಗ ಬಿಜೆಪಿಯ ನಾಯಕರಾದ ಅನಂತಕುಮಾರ್, ಸುರೇಶ್‌ಕುಮಾರ್ ಹಾಗೂ ಓರ್ವ ಆರೆಸ್ಸೆಸ್ ಪ್ರಮುಖರು ಬರುತ್ತಾರೆ. ಪ್ರೊ. ಎಂಡಿಎನ್ ಮುಖಗಂಟಿಕ್ಕಿ ‘‘ಏನು ಬಂದಿದ್ದು?’’ ಅನ್ನುತ್ತಾರೆ. ಬಂದವರು- ‘‘ನೀವೂ, ನಾವೂ ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯ ನಮ್ಮದಾಗುತ್ತದೆ’’ ಎನ್ನುತ್ತಾರೆ. ನಂಜುಂಡಸ್ವಾಮಿಯವರು ಕಹಿಯಾಗಿ ‘‘ಏನು? ನಾವೂ ನೀವೂ ಜೊತೆಗೂಡುವುದಾ? ಚಾತುರ್ವರ್ಣ ಹಿಂದುತ್ವ ಹೇಳುವ ನೀವು ಕುಷ್ಠರೋಗಿಗಳು. ಕುಷ್ಠರೋಗಿಗಳಾದ ನಿಮ್ಮನ್ನು ನಾನು ಕಡ್ಡಿಯಿಂದಲೂ ಮುಟ್ಟುವುದಿಲ್ಲ. ಗೊತ್ತಾಯಿತೇನು?’’ ಎಂದು ಅವರ ಶೈಲಿಯಲ್ಲಿ ಕಟುವಾಗಿ ಹೇಳಿ ಆಚೆ ಕಳಿಸುತ್ತಾರೆ. ನಂಜುಂಡಸ್ವಾಮಿಯವರ ರೀತಿಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತದಾರರೂ ನಿಷ್ಠುರವಾಗಿ ಬಿಜೆಪಿ+ಜೆಡಿಎಸ್ ಪಕ್ಷಗಳನ್ನು ನಿರಾಕರಣೆ ಮಾಡಿದರೆ- ಮತದಾರರೂ ಉಳಿಯುತ್ತಾರೆ. ದೇಶವೂ ಉಳಿಯುತ್ತದೆ.

Update: 2024-04-20 05:43 GMT

ನಾನೀಗ ಕರ್ನಾಟಕ ರಾಜ್ಯ ರೈತ ಸಂಘದ ಕರಪತ್ರ ಬಿಡುಗಡೆ ಮಾಡಬೇಕಾಗಿ ಬಂದಿದೆ. ಕರಪತ್ರ ನನ್ನ ಬೊಗಸೆಯಲ್ಲಿದೆ. ಬೆಂಕಿ ಕೆಂಡಗಳನ್ನು ಬೊಗಸೆಯಲ್ಲಿ ಇಟ್ಟುಕೊಂಡಂತಾಗುತ್ತಿದೆ. ರೈತಾಪಿ ಸಮುದಾಯ ಗಳು ದಿನನಿತ್ಯ ಬೇಯುತ್ತಿರುವ ಬದುಕು ಈ ಕರಪತ್ರದಲ್ಲಿ ಅಕ್ಷರಗಳಾಗಿವೆ. ಈ ಕರಪತ್ರ ಕೂಗಿಕೂಗಿ- ‘ರೈತರು ಭಾರತದ ಬೆನ್ನೆಲುಬು ಅಂತೀರಿ. ರೈತರ ಬೆನ್ನೆಲುಬಿನ ಮಣಿಕಟ್ಟುಗಳನ್ನು ಕಿತ್ತು ನುಂಗುತ್ತಿದ್ದೀರಿ. ನಾವೀಗ ಬೆನ್ನೆಲುಬು ಇಲ್ಲದೆ ತೆವಳುತ್ತಿದ್ದೇವೆ’ ಎಂದು ಕೂಗುತ್ತಿದೆ. ಈ ಕರಪತ್ರದಲ್ಲಿದೆ- ಪ್ರಧಾನಿ ಮೋದಿಯವರು ಹಿಂದೆಯೇ- 1.ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತಂದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ದೊರಕುವಂತೆ ಮಾಡುತ್ತೇವೆ. 2.ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆ. 3.ರೈತರ ಸಾಲ ಮನ್ನಾ ಮಾಡಿ ಬಡ್ಡಿರಹಿತ ಸಾಲ ನೀಡುತ್ತೇವೆ- ಹೀಗೆಲ್ಲಾ ವಚನ ನೀಡಿದ್ದರು. ಆ ವಚನಕ್ಕೆ ವಂಚನೆ ಯಾಕೆ?- ಇದು ರೈತರ ಆರ್ತನಾದ.

ತಮ್ಮ ಯಾವ ವಚನವೂ ಈಡೇರಲಿಲ್ಲ ವೆಂದು ರೈತ ಜನಸ್ತೋಮ ತಿಂಗಳಾನುಗಟ್ಟಲೆ ಚಳವಳಿ ನಡೆಸಿದರು, ಪ್ರಾಣಗಳನ್ನೂ ಕಳೆದುಕೊಂಡರು. ಆದರೆ, ಪ್ರಧಾನಿ ಹೇಳುತ್ತಾರೆ- ‘ಎಂಎಸ್‌ಪಿ ಈ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ’- ಇದನ್ನು ಮೋದಿಯವರು ಹಿಂದಿಯಲ್ಲಿ ಉಚ್ಚಾರಣೆ ಮಾಡುವಾಗ ಅವರ ಮಾತುಗಳು, ಅವರ ಧ್ವನಿಯ ಏರಿಳಿತ ಯಾವುದೋ ಮಂತ್ರಘೋಷವನ್ನು ಉದ್ಘೋಷ ಮಾಡುತ್ತಿರುವಂತೆ ಅಪ್ಪಳಿಸುತ್ತದೆ.

ನೋಡಿ, ರೈತರು ಸ್ವಾಮಿನಾಥನ್ ಆಯೋಗದ ಎಂಎಸ್‌ಪಿ ಇಲ್ಲ ಅನ್ನುತ್ತಾರೆ. ಆದರೆ ಮೋದಿಯವರು ಎಂಎಸ್‌ಪಿ ಇದೆ ಅನ್ನುತ್ತಾರೆ. ಹಾಗಾದರೆ ಯಾವುದು ನಿಜ? ಎಂಎಸ್‌ಪಿ ಇದ್ದೂ ಲಕ್ಷಾಂತರ ರೈತರು ನೂರಾರು ದಿನಗಳ ಕಾಲ ಮನೆ ಮಠ ಬಿಟ್ಟು ಚಳಿ, ಮಳೆ, ಬಿಸಿಲು ಎನ್ನದೆ ಸಾಯುತ್ತ, ಧರಣಿ ಮಾಡುತ್ತಿದ್ದಾರೆಂದರೆ ಅವರು ಶತಮೂರ್ಖರು ಆಗಿಬಿಡುತ್ತಾರೆ; ಸೂಕ್ತ ಎಂಎಸ್‌ಪಿ ಇಲ್ಲದಿದ್ದರೂ ಅದು ಇದೆ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದರೆ, ಅವರು ವಾಸ್ತವದಲ್ಲಿ ಜೀವಿಸದ ಭ್ರಮಾಧೀನರಾಗಿ ಬಿಡುತ್ತಾರೆ. ಈ ದೇಶದ ಚುಕ್ಕಾಣಿ ಹಿಡಿದವರು ವಾಸ್ತವದ ಅರಿವಿಲ್ಲದ ಭ್ರಮಾಧೀನ ರಾಗಬಾರದು. ಪ್ರಧಾನಿಯೇ ಭ್ರಮಾಧೀನರಾದರೆ ಅದು ಒಂದು ವ್ಯಕ್ತಿಯ ದುರಂತವಲ್ಲ, ಅದು ಭಾರತದ ಘೋರ ದುರಂತ.

ಕಳೆದ ಹತ್ತು ವರ್ಷಗಳಿಂದಲೂ ಭಾರತದ ಪ್ರಧಾನಿಯಾದ ಮೋದಿಯವರು, ಆರ್ತನಾದ ಮಾಡುತ್ತಿರುವ ರೈತಸ್ತೋಮಕ್ಕೆ- ಸ್ವಾಮಿನಾಥನ್ ಆಯೋಗದಂತೆ ಬೆಂಬಲ ಬೆಲೆ ನೀಡಿ ಅದನ್ನು ಕಾನೂನಾತ್ಮಕ ಖಾತರಿ ಯಾಕೆ ನೀಡಲಿಲ್ಲ? ಅಥವಾ ನೀಡಿದ್ದರೆ ಏನಾಗುತ್ತಿತ್ತು? ಸ್ವಾಮಿನಾಥನ್ ಆಯೋಗದಂತೆ ಎಂಎಸ್‌ಪಿ ನೀಡಿದ್ದರೆ, ರೈತರು ಸಸ್ತಾ ಬೆಲೆಗೆ ಬಂಡವಾಳಿಗರಿಗೆ ತಮ್ಮ ಭೂಮಿ ಮಾರಿಕೊಂಡು ನಗರಗಳಿಗೆ ಗುಳೆ ಹೋಗುತ್ತಿರಲಿಲ್ಲ. ಅಲ್ಲಿ ಕಮ್ಮಿ ಹಣಕ್ಕೆ ಕೂಲಿಯಾಳುಗಳಾಗುತ್ತಿರಲಿಲ್ಲ. ರೈತರನ್ನು ಭೂಮಿಯಿಂದಲೇ ಒಕ್ಕಲೆಬ್ಬಿಸುವ ಇಂತಹ ಕ್ರೂರ ಕಾಯ್ದೆಗಳನ್ನು ಮಾಡುವವರು ಯಾರು? ಬಹುಶಃ ಪ್ರಧಾನಿ ಮೋದಿಯವರ ಪರಮಾಪ್ತ ಭೂದಾಹಿ ಬಂಡವಾಳಿಗರು ಇರಬೇಕು ಅನ್ನಿಸುತ್ತದೆ. ಯಾಕೆಂದರೆ ಪ್ರಧಾನಿ ಮಾತು ಕೊಟ್ಟಂತೆ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಿಗೆ ಅವರ ಪರಮಾಪ್ತ ಬಂಡವಾಳಿಗರ ಸಂಪತ್ತು ಹೆಚ್ಚಳವಾಯಿತು. ರೈತ ಸಂಘದ ಕರಪತ್ರ, ‘ಬಡವರಿಗೆ ವಚನಭ್ರಷ್ಟ, ಬಂಡವಾಳಿಗರಿಗೆ ನಿಷ್ಠ- ಈ ದೇಶದ ಚುಕ್ಕಾಣಿ ಹಿಡಿಯಬಾರದು!’ ಎನ್ನುತ್ತದೆ. ಹೌದಲ್ಲವೇ? 2024ರ ಬಿಜೆಪಿ ಪ್ರಣಾಳಿಕೆಯಲ್ಲೂ ರೈತರು ದೇಶದ ಬೆನ್ನೆಲುಬು ಎಂದು ಮೋದಿಯವರು ಲಿಖಿತವಾಗಿ ಬರೆಯುತ್ತಾರೆ. ಆದರೆ ಇದೇ ಮೋದಿಯವರು ತಮ್ಮ ಆಳ್ವಿಕೆಯ ಕಳೆದ ಹತ್ತು ವರ್ಷಗಳಿಂದಲೂ ರೈತರ ಬೆನ್ನೆಲುಬನ್ನು ಮುರಿಯುತ್ತಲೇ ಬಂದಿದ್ದಾರಲ್ಲವೇ?

ನಾನು ಕುತೂಹಲಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ನ 2024ರ ಲೋಕಸಭಾ ಚುನಾವಣೆ ಪ್ರಣಾಳಿಕೆಗಳಲ್ಲಿ ಎಂಎಸ್‌ಪಿ ಬಗ್ಗೆ ಏನು ಹೇಳಿದ್ದಾವೆ ಎಂದು ಹೋಲಿಕೆ ಮಾಡಿ ನೋಡಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ- ‘ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಹೆಚ್ಚಳ ಮಾಡುತ್ತೇವೆ’ ಎಂದಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ-‘ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ನೀಡುತ್ತೇವೆ. ಜೊತೆಗೆ, ಎಂಎಸ್‌ಪಿಗೆ ಕಾನೂನಾತ್ಮಕ ಖಾತರಿಯನ್ನು ನೀಡುತ್ತೇವೆ’ ಎನ್ನುತ್ತದೆ. ಕಾಂಗ್ರೆಸ್ ಏನಾದರೂ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಮಾಡದಿದ್ದರೆ, ಅದರ ಕತ್ತಿನ ಪಟ್ಟಿಯನ್ನು ಹಿಡಿದು ಕೇಳಬಹುದು, ಆ ರೀತಿ ಖಚಿತವಾಗಿ ಇದೆ ಕಾಂಗ್ರೆಸ್ ಪ್ರಣಾಳಿಕೆಯ ನುಡಿಗಳು. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿನ ಭಾಷೆ ಹೇಗಿದೆ ಅಂದರೆ, ಅದು ಏನೂ ಮಾಡದಿದ್ದರೂ, ಯಾಕೆ ಮಾಡಲಿಲ್ಲ ಎಂದು ಬಿಜೆಪಿಯ ಕತ್ತಿನ ಪಟ್ಟಿ ಹಿಡಿದು ಕೇಳಲು ಅವಕಾಶವಿಲ್ಲದಂತಿದೆ. ಬಿಜೆಪಿಯ ಪ್ರಣಾಳಿಕೆಯ ನುಡಿಗಟ್ಟು, ಅದರ ಶೈಲಿ, ಮೈಗೆಲ್ಲಾ ಹರಳೆಣ್ಣೆ ಹಚ್ಚಿಕೊಂಡ ಫೈಲ್ವಾನರಂತೆ ಅಖಾಡಕ್ಕೆ ಇಳಿದಿದೆ. ಮೈಗೆಲ್ಲ ಹರಳೆಣ್ಣೆ ಹಚ್ಚಿಕೊಂಡವರ ಜೊತೆ ಎದುರಾಳಿಗಳಿಗೆ ಕುಸ್ತಿ ಆಡಲು ಕಷ್ಟ. ಹೀಗಿದೆ ಭಾರತದ ಚುನಾವಣಾ ಕುಸ್ತಿ ಅಖಾಡ.

ಈಗ ನಮ್ಮ ಪ್ರಧಾನಿ ಮೋದಿಯವರು ತಮ್ಮ ಹಳೆ ಚಾಳಿಯಂತೆ- 2047ನೇ ಇಸವಿಗೆ ವಿಕಸಿತ ಭಾರತ ತೋರಿಸಲು ಹೊರಟಿದ್ದಾರೆ! ಇದು ಹೇಗಿದೆ ಅಂದರೆ-ಜಾತ್ರೆಗಳಲ್ಲಿ ಗರದಿ ಗಮ್ಮತ್ತಿನ ಪೆಟ್ಟಿಗೆಯಲ್ಲಿ ಚಿತ್ರಪಟಗಳನ್ನು ತಿರುವುತ್ತ ಬಣ್ಣಬಣ್ಣದ ವೇಷದ ವ್ಯಕ್ತಿಯೊಬ್ಬ- ಬೊಂಬಾಯಿ ನೋಡು, ಕಲ್ಕತ್ತ ನೋಡು, ಮೈಸೂರ್ ನೋಡು, ಅರಮನೆ ದರ್ಬಾರ್ ನೋಡು ಅಂತಾನಲ್ಲ... ಆ ರೀತಿ ಇದೆ ನಮ್ಮ ಪ್ರಧಾನಿಯವರ ವೇಷಭೂಷಣ ಮಾತುಕತೆ! 2024ರ ಎಪ್ರಿಲ್ 14ರಂದು ಪ್ರಧಾನಿ ಮೋದಿಯವರು ಮೈಸೂರಿನಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಭಾಷಣ ಮಾಡುತ್ತಾ- ‘‘ಈ ಚುನಾವಣೆಯು ಕೇವಲ 5 ವರ್ಷದ್ದಲ್ಲ. 2047ರ ಹೊತ್ತಿನ ವಿಕಸಿತ ಭಾರತದ ಭವಿಷ್ಯವನ್ನು ನಿರ್ಧರಿಸುವಂತಹದ್ದು. ಅದಕ್ಕಾಗಿ ಪ್ರತೀ ಕ್ಷಣವನ್ನೂ ಮೀಸಲಿಟ್ಟಿದ್ದೇನೆ. 2047ರವರೆಗೂ ದೇಶ ಮತ್ತು ಜನರಿಗಾಗಿ 24x7 ಕೆಲಸ ಮಾಡುತ್ತೇನೆ’’ ಎಂದು ವಾಗ್ದಾನ ನೀಡುತ್ತಾರೆ. ಮೋದಿಯವರು ಈ ರೀತಿ ಹೇಳಿದಾಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಆದರೆ ನಾವು ಆವೇಶಕ್ಕೆ ಒಳಗಾಗದೆ ಒಂದೇ ಒಂದು ಗಳಿಗೆ ನೋಡುವುದಾದರೆ, ಇಸವಿ 2047 ಬರಲು ಇನ್ನೂ 23 ವರ್ಷ! ಆ ಸಭೆಯಲ್ಲಿ ಹರ್ಷೋದ್ಗಾರ ಮಾಡಿದ ಸಭಿಕರಲ್ಲೂ ಬಹುತೇಕರು 2047ರವರೆಗೆ ಬದುಕಿರುವುದಿಲ್ಲ. ಆದರೆ ಇನ್ನೇನು 75 ತಲುಪುವ ಮೋದಿಯವರು ಅಲ್ಲಿವರೆಗೆ ಬದುಕಿರುವ ಭರವಸೆ ಇಟ್ಟುಕೊಂಡಿದ್ದಾರೆ! 2047ರವರೆಗೆ ನಾನಂತೂ ಬದುಕಿರುವುದಿಲ್ಲ, ಇದಿರಲಿ. ಮೋದಿಯವರು 2047ನೇ ಇಸವಿವರೆಗೂ ದೇಶ ಮತ್ತು ದೇಶದ ಜನರಿಗಾಗಿ 24x7 ಕೆಲಸ ಮಾಡುತ್ತೇನೆ ಅಂತಾರಲ್ಲಾ! ಮೂಳೆ ಮಾಂಸದ ತಡಿಕೆಯಾದ ಈ ದೇಹಕ್ಕೆ 24x7 ಕೆಲಸ ಭರಿಸುವ ಸಾಮರ್ಥ್ಯ ಇದೆಯೆ? ಯಾಂತ್ರೀಕೃತ ರೊಬೋಟ್ ಕೂಡ ರಿಪೇರಿಗೆ ಬರಬಹುದೇನೋ, ಆದರೆ ಮೋದಿಯವರು ರಿಪೇರಿಯಾಗುವುದಿಲ್ಲ ಎಂದು ಕಾಣಿಸುತ್ತದೆ!

ನೆಲ ನೋಡಿದರೆ ಅವರಿಗೆ ಕಾಣಿಸುತ್ತಿತ್ತು-ನೆರೆ, ಬರ, ನೀರಿಗಾಗಿ ಹಾಹಾಕಾರ, ಒಣಗುತ್ತಿರುವ ಬೆಳೆ ಹಾಗೂ ಜನ ಜಾನುವಾರು, ಬೆಲೆ ಏರಿಕೆಯಿಂದ ಹೈರಾಣಾಗುತ್ತಿರುವ ಜನಜೀವನ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇನೆ ಎಂದವರಿಗೆ ನಿರುದ್ಯೋಗದಿಂದ ಬಸವಳಿದವರ ಸಂಕಷ್ಟವೂ ಕಾಣಿಸುತ್ತಿತ್ತು. ಯುದ್ಧ ಜರುಗುತ್ತಿರುವ ಇಸ್ರೇಲ್‌ಗೆ ಲಕ್ಷಾಂತರ ಭಾರತೀಯರು ಪ್ರಾಣ ಪಣಕ್ಕಿಟ್ಟು ಉದ್ಯೋಗ ಅರಸುತ್ತಾ ಕ್ಯೂ ನಿಂತಿರುವುದು ಕಾಣಿಸುತ್ತಿತ್ತು. ಆದರೆ ಭಾರತದ ಪ್ರಧಾನಿಗೆ ಇವೆಲ್ಲ ಕಾಣಿಸುತ್ತಿಲ್ಲ. ಯಾಕೆಂದರೆ ಅವರು 2047ರ ವಿಕಸಿತ ಭಾರತದ ಕನಸು ಕಾಣುತ್ತಿದ್ದಾರೆ! ಇಂದು ಜೀವಿಸುತ್ತಿರುವ ಪ್ರಜೆಗಳ ಬದುಕು ದುಃಸ್ವಪ್ನವಾಗಿದೆ.

ಆಳ್ವಿಕೆ ನಡೆಸುತ್ತಿರುವವರದು ಕನಸೋ ಹಗಲುಗನಸೋ ತಿಳಿಯುತ್ತಿಲ್ಲ. ಇಂಥವರಿಗೆ ತನ್ನ ರಥದ ಚಕ್ರಕ್ಕೆ ಸಿಲುಕಿ ಸಾಯುವ ತನ್ನ ಪ್ರಜೆಗಳ ಆಕ್ರಂದನವೂ ದೇಶ ಸೇವೆಗೆ ಯಜ್ಞ ಎಂಬಂತೆ ಕಾಣಿಸುತ್ತದೆ. ಚುನಾವಣಾ ಬಾಂಡ್‌ನಂತಹ ಅವರ ಭ್ರಷ್ಟತೆಯೂ ದೇಶಸೇವೆಯಾಗಿಯೇ ಕಾಣಿಸುತ್ತದೆ. ಪ್ರಜಾಪ್ರಭುತ್ವ, ಸಾರ್ವಜನಿಕ ಸಂಪತ್ತು ಮಾರಾಟ, ಸ್ವಾಯತ್ತ ಸಂಸ್ಥೆಗಳ ಮೇಲೆ ಸವಾರಿ ಇವೂ ಅವರಿಗೆ ದೇಶಸೇವೆಯೇ!

ಮೈಗೆಲ್ಲಾ ಹರಳೆಣ್ಣೆ ಸವರಿಕೊಂಡು ಯಾವ ಪಟ್ಟಿಗೂ ಸಿಗದಂತೆ ವಂಚನೆಯ ಕುಸ್ತಿಯಾಡುವ ಈ ಅವಿದ್ಯೆಯ ಮೂಲ ಎಲ್ಲಿದೆ? ಪ್ರಬಲ ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರ ಮಾತುಗಳಲ್ಲಿ ಸುಳಿವು ಸಿಗುತ್ತದೆ. ಇದೇ ಎಪ್ರಿಲ್ ತಿಂಗಳಿನಲ್ಲಿ ಗಡ್ಕರಿಯವರಿಗೆ, ‘ನಿಮ್ಮ ಕಾರ್ಯಸೂಚಿ ಏನು?’ ಎಂದು ಪ್ರಶ್ನೆ ಕೇಳಿದಾಗ, ಗಡ್ಕರಿಯವರು- ‘‘ನನಗೆ ವ್ಯಕ್ತಿಗತವಾಗಿ ಯಾವ ಕಾರ್ಯಸೂಚಿಯೂ ಇಲ್ಲ. ಕಾರ್ಯಸೂಚಿ ಏನು ಅನ್ನುವುದನ್ನು ಆರೆಸ್ಸೆಸ್ ಹೇಳುತ್ತದೆ. ಅದನ್ನು ಈಡೇರಿಸುವುದು ನಮ್ಮ ಜವಾಬ್ದಾರಿ’’ ಎಂದು ಹೇಳುತ್ತಾರೆ. ತನ್ನ ಪಕ್ಷ ಬಿಜೆಪಿಯು ಕಾರ್ಯಸೂಚಿ ರೂಪಿಸುತ್ತದೆ ಅನ್ನುವುದಿಲ್ಲ ಅವರು! ತನ್ನ ಕಾರ್ಯಸೂಚಿಯನ್ನೂ ತಾನೇ ರೂಪಿಸದ ಬಿಜೆಪಿಯು ಹೇಗೆ ತಾನೇ ಅದೊಂದು ರಾಜಕೀಯ ಪಕ್ಷವಾಗುತ್ತದೆ? ಬಿಜೆಪಿ ಮಾಡುವ ರಾಜಕಾರಣ ಎಂದರೆ- ಆರೆಸ್ಸೆಸ್ ಕೈಚಳಕದ ತೊಗಲುಗೊಂಬೆಯಾಟ!

ಆಯಿತು. ಆರೆಸ್ಸೆಸ್‌ನ ಪ್ರಮುಖ ಕಾರ್ಯಸೂಚಿಯಾದರೂ ಏನು? ಆರೆಸ್ಸೆಸ್‌ನ ಗುರು ಗೋಳ್ವಾಲ್ಕರ್, ತಮ್ಮ ‘ಬಂಚ್ ಆಫ್ ಥಾಟ್ಸ್’ನಲ್ಲಿ- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಚಾತುರ್ವರ್ಣವನ್ನು ಸಮಾಜದಲ್ಲಿ ಅಳವಡಿಸಿಕೊಳ್ಳುವುದೇ ದೇವರ ಸಾಕ್ಷಾತ್ಕಾರ ಎಂದು ಬರೆಯುತ್ತಾರೆ. ಮುಗಿಯಿತಲ್ಲಾ ಕತೆ! ಹಾಗಾದರೆ ಈ ಹಿಂದೆ ಶೂದ್ರರು ಎನ್ನಿಸಿಕೊಂಡಿದ್ದ ಲಿಂಗಾಯತ, ಒಕ್ಕಲಿಗರಾದಿ ಉಳಿದೆಲ್ಲ ತಳಸಮುದಾಯಗಳು ಮತ್ತೆ ಶೂದ್ರರಾಗಬೇಕೆ? ಶೂದ್ರ ಅರ್ಥಾತ್ ಸೇವಕರಾಗಬೇಕೆ? ಇದೇ ಮೋದಿಯವರು ಹೇಳುತ್ತಿರುವ 2047ರ ವಿಕಸಿತ ಭಾರತ! ಅರ್ಥಾತ್ ಆರೆಸ್ಸೆಸ್‌ನ ಚಾತುರ್ವರ್ಣ ಹಿಂದುತ್ವದ- ‘‘ದೇವರ ಸಾಕ್ಷಾತ್ಕಾರ!’’ ಉಳಿದವರ ಮಾತಿರಲಿ, ಇಂದು ಯಾವ ಪ್ರಜ್ಞಾವಂತ ಬ್ರಾಹ್ಮಣರೂ ಇದನ್ನು ಒಪ್ಪಲಾರರು.

ಈ ಲಿಂಗಾಯತ, ಒಕ್ಕಲಿಗರಾದಿಯಾಗಿ ತಳಸಮುದಾಯದ ಬಹುಜನರನ್ನು ಸೇವಕರನ್ನಾಗಿಸುವ ಬಿಜೆಪಿಯ ಆಟ, ಪಾಠ, ನೋಟಗಳು ಬಲಿಪಶುಗಳಾಗುತ್ತಿರುವವರಿಗೆ ಅರಿವಿದೆಯೇ? ಜೈಜೈ ಅನ್ನುವವರಿಗೆ ಅರಿವಿರಲಾರದು. ಹೋಗಲಿ, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ+ಜೆಡಿಎಸ್ ಅಭ್ಯರ್ಥಿಗಳಿಗಾದರೂ ಅರಿವಿದೆಯೇ? ಬಹುಶಃ ಇಲ್ಲ. ಆದರೂ ರಾಜಕಾರಣಕ್ಕೆ ತಳ್ಳಲ್ಪಟ್ಟ ಇಬ್ಬರು ಸಭ್ಯ ಅಭ್ಯರ್ಥಿಗಳನ್ನು ನೆನಪಿಸಿಕೊಂಡರೆ ಸಂಕಟವಾಗುತ್ತದೆ. ಒಬ್ಬರು- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್. ಇನ್ನೊಬ್ಬರು- ಡಾ.ಮಂಜುನಾಥ್. ಡಾ.ಮಂಜುನಾಥ್ ಅವರು- ‘‘ಪಕ್ಷ, ಕ್ಷೇತ್ರ ನನ್ನ ಆಯ್ಕೆ ಅಲ್ಲ’’ ಅನ್ನುತ್ತಾರೆ. ಎಂಥ ಅಮಾಯಕತೆ! ಈ ಇಬ್ಬರೂ ಹಿಂದುತ್ವದ ಖೆಡ್ಡಾಕ್ಕೆ ಬೀಳಬಾರದು. ‘‘ದೇವರೇ, ಈ ಇಬ್ಬರನ್ನೂ ಸೋಲಿಸಿಯಾದರೂ ಸರಿಯೇ ಹಿಂದುತ್ವದ ಖೆಡ್ಡಾದಿಂದ ಇವರನ್ನು ಪಾರು ಮಾಡಪ್ಪ’’ ಎಂದು ಪ್ರಾರ್ಥಿಸುತ್ತಿರುವೆ.

ಇದೆಲ್ಲಾ ರೈತಸಂಘದ ಮಹಾನ್ ನಾಯಕ ಪ್ರೊ.ನಂಜುಂಡಸ್ವಾಮಿಯವರಿಗೆ ಚೆನ್ನಾಗಿ ಗೊತ್ತಿತ್ತು. ಅವರು ಶಾಸಕರಾಗಿದ್ದಾಗ ಬಿಜೆಪಿಯ ನಾಯಕರಾದ ಅನಂತಕುಮಾರ್, ಸುರೇಶ್‌ಕುಮಾರ್ ಹಾಗೂ ಓರ್ವ ಆರೆಸ್ಸೆಸ್ ಪ್ರಮುಖರು ಬರುತ್ತಾರೆ. ಪ್ರೊ. ಎಂಡಿಎನ್ ಮುಖಗಂಟಿಕ್ಕಿ ‘‘ಏನು ಬಂದಿದ್ದು?’’ ಅನ್ನುತ್ತಾರೆ. ಬಂದವರು- ‘‘ನೀವೂ, ನಾವೂ ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯ ನಮ್ಮದಾಗುತ್ತದೆ’’ ಎನ್ನುತ್ತಾರೆ. ನಂಜುಂಡಸ್ವಾಮಿಯವರು ಕಹಿಯಾಗಿ ‘‘ಏನು? ನಾವೂ ನೀವೂ ಜೊತೆಗೂಡುವುದಾ? ಚಾತುರ್ವರ್ಣ ಹಿಂದುತ್ವ ಹೇಳುವ ನೀವು ಕುಷ್ಠರೋಗಿಗಳು. ಕುಷ್ಠರೋಗಿಗಳಾದ ನಿಮ್ಮನ್ನು ನಾನು ಕಡ್ಡಿಯಿಂದಲೂ ಮುಟ್ಟುವುದಿಲ್ಲ. ಗೊತ್ತಾಯಿತೇನು?’’ ಎಂದು ಅವರ ಶೈಲಿಯಲ್ಲಿ ಕಟುವಾಗಿ ಹೇಳಿ ಆಚೆ ಕಳಿಸುತ್ತಾರೆ.

ನಂಜುಂಡಸ್ವಾಮಿಯವರ ರೀತಿಯಲ್ಲಿ, 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತದಾರರೂ ನಿಷ್ಠುರವಾಗಿ ಬಿಜೆಪಿ+ಜೆಡಿಎಸ್ ಪಕ್ಷಗಳನ್ನು ನಿರಾಕರಣೆ ಮಾಡಿದರೆ- ಮತದಾರರೂ ಉಳಿಯುತ್ತಾರೆ. ದೇಶವೂ ಉಳಿಯುತ್ತದೆ.

(ರಾಜ್ಯ ರೈತ ಸಂಘದ ಕರಪತ್ರ ಬಿಡುಗಡೆಯ ಸಂದರ್ಭ ಮಾಡಿದ ಭಾಷಣ)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದೇವನೂರ ಮಹಾದೇವ

contributor

Similar News