ಪರಿಸರ ಬಿಕ್ಕಟ್ಟಿನ ಕಡೆಗಣನೆಯಿಂದ ಭಾರೀ ವಿನಾಶ

Update: 2019-06-26 18:31 GMT

ಚೆನ್ನೈ ನಗರದಲ್ಲಿ ಹನಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಬಿಹಾರದಲ್ಲಿ ಉಷ್ಣ ಮಾರುತವು 150ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದೆ. ಮೊನ್ನೆ ಮೊನ್ನೆ ದಕ್ಷಿಣ ಆಫ್ರಿಕಾದ ಬಿಲಿಯಾಧಿಪತಿ ಗುಪ್ತಾ ಕುಟುಂಬದಲ್ಲಿಯ ಎರಡು ಭರ್ಜರಿ ಮದುವೆಗಳ ಬಳಿಕ ಉತ್ತರಾಖಂಡವು 4,000 ಕೆ.ಜಿ.ಗಳಷ್ಟು ತ್ಯಾಜ್ಯಗಳ ಸಮಸ್ಯೆಯನ್ನೆದುರಿಸುತ್ತಿದೆ.
ಇವು ಕಳೆದ ಕೆಲವು ವಾರಗಳಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾದ ಕೆಲವು ಬೆಳವಣಿಗೆಗಳಷ್ಟೇ. ಸ್ಪಷ್ಟವಾಗಿ ಹೇಳಬೇಕೆಂದರೆ ದೇಶವು ಇಂದು ಪರಿಸರ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿದೆ. ಆದರೆ ದೇಶದ ನಾಯಕರೆನ್ನಿಸಿಕೊಂಡವರಿಗೆ ಈ ಬಗ್ಗೆ ಚೂರೂ ಕಳವಳವಿಲ್ಲ.
ಭಾರತೀಯ ರಾಜಕಾರಣದಲ್ಲಿ ಪರಿಸರದ ಪ್ರಸ್ತಾಪವಾಗುವುದೇ ಇಲ್ಲ. ಇತ್ತೀಚಿನ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಪಾಕಿಸ್ತಾನದಿಂದ ಹಿಡಿದು ತೆರಿಗೆಗಳವರೆಗೆ ಪ್ರತಿಯೊಂದರ ಬಗ್ಗೆಯೂ ಚರ್ಚೆಗಳು ನಡೆದಿದ್ದವು, ಆದರೆ ಭಾರತೀಯರು ಉಸಿರಾಡುತ್ತಿರುವ ವಾಯುವಿನ ಕಳಪೆ ಗುಣಮಟ್ಟದ ಬಗ್ಗೆ ಅಥವಾ ಅರಣ್ಯನಾಶದಿಂದ ತಾಪಮಾನ ಹೆಚ್ಚುತ್ತಿರುವ ಬಗ್ಗೆ ಮಾತನಾಡುವ ವ್ಯವಧಾನ ಯಾವುದೇ ರಾಜಕಾರಣಿಗಿರಲಿಲ್ಲ.
ಭಾರತೀಯ ಪ್ರಜಾಪ್ರಭುತ್ವದ ಸ್ವರೂಪವೇ ಅಪರಿಪೂರ್ಣವಾಗಿದೆ, ಇಲ್ಲಿ ದೈನಂದಿನ ಜೀವನದ ಲೌಕಿಕ ವಿಷಯಗಳಿಗಿಂತ ಭಾವೋದ್ವೇಗವೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಇದರಿಂದಾಗಿಯೇ ಜನರ ಜೀವನಮಟ್ಟವನ್ನು ಹೆಚ್ಚಿಸುವಲ್ಲಿ ಏನೇನೂ ಪಾತ್ರವನ್ನು ಹೊಂದಿರದ ಪಾಕಿಸ್ತಾನದ ಮೇಲಿನ ವಾಯುದಾಳಿಯನ್ನು ಬಿಜೆಪಿಯು ತನ್ನ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು, ಇದು ಗಣನೀಯ ಸಂಖ್ಯೆಯ ಭಾರತೀಯರಲ್ಲಿ ಭಾವೋದ್ವೇಗದ ತಂತುವನ್ನು ಮಿಡಿದಿತ್ತು ಮತ್ತು ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.
ತಕ್ಷಣದ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡ ಸರಕಾರಗಳ ಮೇಲೆ ಒತ್ತಡ ಹೇರಲು ಮತದಾರರಿಗೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಪರಿಗಣಿಸಿದರೆ ಪರಿಸರ ರಕ್ಷಣೆಯ ಹೆಚ್ಚು ಸಂಕೀರ್ಣ, ದೀರ್ಘಕಾಲಿಕ ಸವಾಲು ಎಂದೂ ಚುನಾವಣಾ ರಾಜಕೀಯದ ಭಾಗವಾಗುವುದಿಲ್ಲ ಎಂದರೆ ಅಚ್ಚರಿ ಪಡಬೇಕಿಲ್ಲ.
ಆದರೆ ವಾಸ್ತವಿಕ ಅಂಕಿಅಂಶಗಳು ನಿಜಕ್ಕೂ ದಿಗಿಲು ಹುಟ್ಟಿಸುತ್ತಿವೆ. ಭಾರತದಲ್ಲಿಂದು ಕ್ಯಾನ್ಸರ್, ಕ್ಷಯರೋಗ, ಏಡ್ಸ್ ಮತ್ತು ಮಧುಮೇಹಕ್ಕೆ ಬಲಿಯಾಗುತ್ತಿರುವ ಒಟ್ಟು ಜನರಿಗಿಂತ ಹೆಚ್ಚಿನ ಜನರು ಪರಿಸರ ಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾರೆ. 2020ರ ವೇಳೆಗೆ ದೇಶದ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ ಮತ್ತು 2030ರ ವೇಳೆಗೆ ಶೇ.40ರಷ್ಟು ಭಾರತೀಯರಿಗೆ ಕುಡಿಯಲೂ ನೀರು ಸಿಗುವುದಿಲ್ಲ ಎಂದು ಸರಕಾರದ ಚಿಂತನ ಚಾವಡಿ ನೀತಿ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ತಾಪಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಹೆಚ್ಚುತ್ತಿರುವುದರಿಂದ ಕರಾವಳಿಯಲ್ಲಿನ ಜನದಟ್ಟಣೆಯ ಪ್ರದೇಶಗಳು ಮುಳುಗಡೆಯಾಗಲಿವೆ ಮತ್ತು ಮಾರಣಾಂತಿಕ ಉಷ್ಣ ಮಾರುತಗಳು ಹೆಚ್ಚಲಿವೆ.
ವಾತಾವರಣದಲ್ಲಿಯ ಇಂತಹ ಬದಲಾವಣೆಗಳು ಯಾವುದೇ ದೇಶಕ್ಕೆ ವಿನಾಶಕಾರಿಯಾಗುತ್ತವೆ. ಭಾರತದಲ್ಲಿ ಬಡತನದ ಹೆಚ್ಚಿನ ಮಟ್ಟ ಮತ್ತು ಭಾರೀ ಜನಸಂಖ್ಯೆಯನ್ನು ಪರಿಗಣಿಸಿದರೆ ಇಂತಹ ಬದಲಾವಣೆಗಳು ಸಾಮೂಹಿಕ ಸ್ಥಳಾಂತರ ಮತ್ತು ಸಂಘರ್ಷಗಳಿಗೆ ಕಾರಣವಾಗಲಿವೆ. ಭವಿಷ್ಯದ ರಕ್ಷಣೆಗಾಗಿ ದೇಶವು ತನ್ನ ನೀತಿಗಳಲ್ಲಿ ಕಠಿಣ ಬದಲಾವಣೆಗಳನ್ನು ತರಲು ನಾಯಕರು ನೆರವಾಗಬೇಕಿದೆ.

 

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News

ಜಗದಗಲ
ಜಗ ದಗಲ