ಶೆರೀನ್ ಮ್ಯಾಥ್ಯೂಸ್ ಸಾವು: ಮಲತಂದೆಗೆ ಜೀವಾವಧಿ ಶಿಕ್ಷೆ

Update: 2019-06-27 04:04 GMT

ಹೂಸ್ಟನ್, ಜೂ.27: ವಿಶ್ವದ ಗಮನ ಸೆಳೆದಿದ್ದ ಭಾರತ ಮೂಲದ ಮೂರು ವರ್ಷದ ಬಾಲಕಿ ಶೆರೀನ್ ಮ್ಯಾಥ್ಯೂಸ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮೃತ ಬಾಲಕಿಯ ಮಲತಂದೆ ವೆಸ್ಲಿ ಮ್ಯಾಥ್ಯೂಸ್ ಎಂಬಾತನಿಗೆ ಇಲ್ಲಿನ ಡಲ್ಲಾಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಅಮೆರಿಕದ ಟೆಕ್ಸಸ್ ಅಧಿಕಾರಿಗಳು ನೀಡಿದ್ದ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ಮ್ಯಾಥ್ಯೂಸ್ (39) ಮಾಡಿಕೊಂಡಿದ್ದ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಟೆಕ್ಸಸ್ ನ್ಯಾಯಾಧೀಶರು ಈತನಿಗೆ ಗಲ್ಲು ಶಿಕ್ಷೆ ವಿಧಿಸಿದ್ದರು.

12 ಮಂದಿ ನ್ಯಾಯಾಧೀಶರು ಸುಮಾರು ಮೂರು ಗಂಟೆ ಕಾಲ ಚರ್ಚಿಸಿ, ದತ್ತುಪುತ್ರಿಯ ಸಾವಿಗೆ ಕಾರಣನಾದ ಮ್ಯಾಥ್ಯೂಸ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಅವಿರೋಧ ನಿರ್ಣಯ ಕೈಗೊಂಡರು. 30 ವರ್ಷಗಳ ಜೈಲುವಾಸದ ಬಳಿಕ ಪರೋಲ್‌ಗೆ ಈತ ಅರ್ಹನಾಗುತ್ತಾನೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕೇರಳ ಮೂಲದ ಮ್ಯಾಥ್ಯೂಸ್, 2017ರ ಅಕ್ಟೋಬರ್‌ನಲ್ಲಿ ಶೆರೀನ್ ಸಾವಿಗೆ ಕಾರಣನಾಗಿದ್ದಾನೆ ಎಂದು ಅಭಿಯೋಜಕರು ವಾದಿಸಿದ್ದರು. ವೆಸ್ಲಿ ಮ್ಯಾಥ್ಯೂಸ್- ಸಿನಿ ಮ್ಯಾಥ್ಯೂಸ್ ದಂಪತಿ 2016ರಲ್ಲಿ ಬಿಹಾರದ ನಿರ್ಗತಿಕರ ಕೇಂದ್ರದಿಂದ ಈ ಬಾಲಕಿಯನ್ನು ದತ್ತು ಪಡೆದಿದ್ದರು. ಬಾಲಕಿ ಉಸಿರುಗಟ್ಟಿ ಸತ್ತಿದ್ದಾಳೆ ಎಂದು ಮ್ಯಾಥ್ಯೂಸ್ ಪ್ರತಿಪಾದಿಸಿದ್ದ.

ಆದರೆ ಅಭಿಯೋಜಕಿ ಶೆರ್ರಿ ಥಾಮಸ್ ಇದನ್ನು ಅಲ್ಲಗಳೆದು, ಮ್ಯಾಥ್ಯೂಸ್ ಹೇಳಿಕೆ ಸುಳ್ಳಿನ ಕಂತೆ. ವೈದ್ಯಕೀಯವಾಗಿ ಮೂರರ ಬಾಲಕಿಗೆ ಇಂಥ ಸಾವು ಅಸಂಭವ ಎಂದು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News