ಉತ್ಪಾದನಾ ಘಟಕಗಳು ಕಾರ್ಪೊರೇಟ್ ಕಂಪೆನಿಗೆ: ಕೇಂದ್ರದ ವಿರುದ್ಧ ರೈಲ್ವೆ ನೌಕರರ ಆಕ್ರೋಶ

Update: 2019-06-27 15:08 GMT

    ಭುವನೇಶ್ವರ,ಜೂ.27: ರೈಲ್ವೆಯ ಉತ್ಪಾದನಾ ಘಟಕಗಳನ್ನು ಕಾರ್ಪೊರೇಟ್ ಕಂಪೆನಿಗೆ ಹಸ್ತಾಂತರಿಸುವ ಕೇಂದ್ರದ ಯೋಜನೆಯಿಂದಾಗಿ ರೈಲ್ವೆ ನೌಕರರಲ್ಲಿ ಅಸಮಾಧಾನ ಹೆಚ್ಚಿದೆ ಎಂದು ರೈಲ್ವೆ ಉದ್ಯೋಗಿಗಳ ಒಕ್ಕೂಟವು (ಎಐಆರ್‌ಎಫ್) ಗುರುವಾರ ಎಚ್ಚರಿಕೆ ನೀಡಿದೆ. ರೈಲ್ವೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಟ್ಟಿರುವ ಮೊದಲ ಹೆಜ್ಜೆ ಇದಾಗಿದೆಯೆಂದು ಅದು ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರವು ರೈಲ್ವೆ ಇಲಾಖೆಗೆ ಸೇರಿದ ಏಳು ಉತ್ಪಾದನಾ ಘಟಕಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ವರ್ಕ್‌ಶಾಪ್‌ಗಳನ್ನು ಭಾರತೀಯ ರೈಲ್ವೆ ರೋಲಿಂಗ್ ಸ್ಟಾಕ್ ಕಂಪೆನಿ ಎಂಬ ಕಾರ್ಪೊರೇಟ್ ಸಂಸ್ಥೆಯಡಿ ತರುವ 100 ದಿನಗಳ ಯೋಜನೆ ಯೊಂದನ್ನು ರೂಪಿಸಿದೆಯೆಂದು ಕೆಲವು ಸುದ್ದಿಸಂಸ್ಥೆಗಳು ಇತ್ತೀಚೆಗೆ ವರದಿ ಮಾಡಿದ್ದವು.

 ಎಐಆರ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಈ ಬಗ್ಗೆ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಯಾದವ್ ಅವರಿಗೆ ಬರೆದ ಪತ್ರದಲ್ಲಿ ‘‘ ರೈಲ್ವೆ ಸಚಿವಾಲಯದ 100 ದಿನಗಳ ಯೋಜನೆಯ ಬಗ್ಗೆ ಭಾರತೀಯ ರೈಲ್ವೆಯ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ತೀವ್ರವಾದ ಅಸಮಾಧಾನ ಕುದಿಯುತ್ತಿದೆ’’ ಎಂದು ಹೇಳಿದ್ದಾರೆ.

  ಕೇಂದ್ರ ಸರಕಾರದ ಈ ನಡೆಯಿಂದಾಗಿ ರೈಲ್ವೆ ವ್ಯವಸ್ಥೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ನೆಲೆಸಿದ್ದ ಸೌಹಾರ್ದತೆಗೆ ಈಗ ಗಂಭೀರವಾದ ಬೆದರಿಕೆ ಎದುರಾಗಿದೆ ಎಂದು ಮಿಶ್ರಾ ಪತ್ರದಲ್ಲಿ ತಿಳಿಸಿದ್ದಾರೆ. ಕಾರ್ಮಿಕ ಒಕ್ಕೂಟಗಳನ್ನು ಸಮಾಲೋಚಿಸದೆಯೇ ಸರಕಾರ ಹಾಗೂ ರೈಲ್ವೆ ಇಲಾಖೆ ಏಕಾಏಕಿಯಾಗಿ ಈ ನಿರ್ಧಾರವನ್ನು ಕೈಗೊಂಡಿದೆಯೆಂದು ಮಿಶ್ರಾ ತಿಳಿಸಿದರು. ಕೇಂದ್ರ ಸರಕಾರದ ಈ ನಡೆಯ ವಿರುದ್ಧ ರೈಲ್ವೆ ಕಾರ್ಮಿಕರನ್ನು ಪ್ರತಿನಿಧಿಸುವ ಒಕ್ಕೂಟವು ತನ್ನ ಎಲ್ಲಾ ಸಾಮರ್ಥ್ಯವನ್ನು ಬಳಸಿಕೊಂಡು ಪ್ರಬಲವಾದ ಹೋರಾಟ ನಡೆಸಲಿದೆಯೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಯ್‌ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ ಸೇರಿದಂತೆ ದೇಶದ ಎಲ್ಲಾ ರೈಲ್ವೆ ಉತ್ಪಾದನಾ ಘಟಕಗಳು ದಕ್ಷತೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದವರು ಹೇಳಿದ್ದಾರೆ. ಕೇಂದ್ರದ ಯೋಜನೆಯ ಪ್ರಕಾರ ರಾಯ್‌ಬರೇಲಿಯ ರೈಲ್ವೆ ಕೋಚ್ ಉತ್ಪಾದನಾ ಘಟಕವು ಕಾರ್ಪೊರೇಟೀಕರಣಗೊಳ್ಳಲಿರುವ ಮೊದಲ ಘಟಕವಾಗಿದೆ.

ಮಂಗಳವಾರ ರೈಲ್ವೆ ಇಲಾಖೆಯ ಸಿಬ್ಬಂದಿ ವಿಭಾಗದ ಮಹಾನಿರ್ದೇಶಕರು ಮಂಗಳವಾರ ರಾಯ್‌ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿದ್ದಾಗ ಅಲ್ಲಿನ 2500ಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News