ದುರ್ಬಲ ಮುಂಗಾರು: ಬೆಳೆ, ಆರ್ಥಿಕತೆ ಮೇಲೆ ಕರಿಛಾಯೆ
ಮುಂಬೈ, ಜೂ.27: ಮುಂಗಾರು ಆಗಮನದ ನಾಲ್ಕನೇ ವಾರವೂ ದೇಶದ ಕೇಂದ್ರ ಮತ್ತು ಪಶ್ಚಿಮ ಭಾಗದಲ್ಲಿ ಮಳೆ ಪ್ರಮಾಣದಲ್ಲಿ ಏರಿಕೆಯಾಗದಿರುವ ಹಿನ್ನೆಲೆಯಲ್ಲಿ ಪ್ರಮುಖ ಬೆಳೆಗಳ ಉತ್ಪಾದನೆ ಮತ್ತು ರಾಷ್ಟ್ರದ ಆರ್ಥಿಕತೆ ಮೇಲೆ ಕರಿಛಾಯೆ ಆವರಿಸಿದೆ.
ದೇಶದ ಕೃಷಿ ಉತ್ಪನ್ನಗಳಿಗೆ ಮತ್ತು ಆರ್ಥಿಕತೆಗೆ ಮುಂಗಾರು ಮಳೆ ಬಹಳ ಮುಖ್ಯವಾಗಿದೆ. ದೇಶದ ಶೇ. 55 ಕೃಷಿಯೋಗ್ಯ ಭೂಮಿ ಮಳೆಯನ್ನು ಆಧರಿಸಿದೆ ಮತ್ತ ಭಾರತದ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಕೃಷಿಯ ಪಾಲು ಶೇ. 15 ಆಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ನಿಧಾನಗತಿಯಲ್ಲಿ ಏರುತ್ತಿರುವ ಭಾರತದ ಆರ್ಥಿಕತೆ ಮುಂಗಾರು ಮಳೆ ಕೊರತೆಯಿಂದ ಇನ್ನಷ್ಟು ಹೊಡೆತವನ್ನು ಅನುಭವಿಸಲಿದೆ. ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಹೆಚ್ಚು ಮಳೆಯಾಗದಿದ್ದರೆ ಭಾರತವು ಸಮಸ್ಯೆಗಳ ಆಗರವಾಗಿ ಬದಲಾಗಲಿದೆ. ಟ್ರಾಕ್ಟರ್‌ನಿಂದ ಗೊಬ್ಬರದ ವರೆಗೆ ರೈತರಿಗೆ ಎಲ್ಲವನ್ನೂ ಒದಗಿಸುತ್ತಿರುವ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಲಿವೆ.
ಈಗಾಗಲೇ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮುಂದಿನ ಎರಡು, ಮೂರು ವಾರಗಳಲ್ಲಿ ಮುಂಗಾರು ಚುರುಕುಗೊಳ್ಳದಿದ್ದರೆ ಸಂಪೂರ್ಣ ಕೃಷಿ ನಷ್ಟ ಅನುಭವಿಸಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಜೂನ್ 26ರಂದು ಕೊನೆಯಾದ ವಾರದಲ್ಲಿ ಭಾರತದಲ್ಲಿ 50 ವರ್ಷಗಳ ಸರಾಸರಿಗಿಂತ ಶೇ.24 ಕಡಿಮೆ ಮಳೆಯಾಗಿದೆ ಎಂದು ಭಾರತದ ಹವಾಮಾನ ಇಲಾಖೆಯ ಅಂಕಿಅಂಶಗಳು ತಿಳಿಸುತ್ತವೆ. ಸೋಯಾಬೀನ್ ಬೆಳೆಯುವಂತಹ ಮಧ್ಯಪ್ರದೇಶದ ಪೂರ್ವ ಭಾಗ ಹಾಗೂ ಇತರೆಡೆಗಳಲ್ಲಿ ಮಳೆ ಕೊರತೆ ಶೇ. 69ರಷ್ಟಿದೆ ಎಂದು ಇಲಾಖೆ ತಿಳಿಸಿದೆ.